
ದೊಡ್ಡಬಳ್ಳಾಪುರ : ನಿಜಗಲ್ ಲೇಔಟ್ ಸ್ಮಗ್ಲಿಂಗ್ ಗ್ಯಾಂಗ್ ನ ಹೆಡೆಮುರಿ ಕಟ್ಟಿ, ಬಂಧಿತರಿಂದ ಕದ್ದ ಮಾಲನ್ನು ವಶಕ್ಕೆ ಪಡೆದು ಗ್ರಾಮಾಂತರ ಪೊಲೀಸ್ ಠಾಣೆ ನೀರಿಕ್ಷಕರಾದ ಸಾಧಿಕ್ ಪಾಷಾ ದೂರುದಾರರಿಗೆ ವಸ್ತುಗಳನ್ನು ಮರಳಿಸಿದರು.
ಸೆ.16ರ ಮಧ್ಯರಾತ್ರಿ ತಾಲೂಕಿನ ನಿಜಗಲ್ ಲೇಔಟ್, ನಂದಿನಿ ಲೇಔಟ್, ಟಿ.ಬಿ ನಾರಾಯಣಪ್ಪ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಮನೆಗಳಲ್ಲಿ ಕಳ್ಳತನಕ್ಕೆ ಇಳಿದಿದ್ದ ಈ ಖದೀಮರು, ಟಿ.ಬಿ ನಾರಾಯಣಪ್ಪ ಬಡಾವಣೆಯಲ್ಲಿರುವ ಬಾಡಿಗೆ ಮನೆಯಲ್ಲಿ ಯಾರೂ ಇಲ್ಲದ್ದನ್ನು ಪತ್ತೆ ಹಚ್ಚಿ, ಆ ಮನೆಗೆ ಕಬೋರ್ಡ್ ಬೀಗವನ್ನು ಮುರಿದು ಒಳಗೆ ಇದ್ದ 32 ಗ್ರಾಂನ ನೆಕ್ಲೇಸ್, 15 ಗ್ರಾಂನ ಬ್ರಾಸ್ಲೈಟ್, 20 ಗ್ರಾಂನ 2 ಜೊತೆ ಜುಮುಕಿ, 1 ಗ್ರಾಂನ ತಾಳಿ, 11 ಗ್ರಾಂನ ಉಂಗುರ, 20 ಗ್ರಾಂನ ಫ್ಯಾನ್ಸಿ ಚೈನು, 10 ಗ್ರಾಂನ ಕತ್ತಿನ ಚೈನು, 4 ಗ್ರಾಂನ ಮಹಿಳೆಯ ಬ್ರಾಸ್ಲೈಟ್, ಬೆಳ್ಳಿಯ ಕಾಲು ಚೈನು ಒಂದು ಜೊತೆ, ಆಪಲ್ ಏರ್ಪಾಡ್ಸ್ (AirPods ವೈರ್ಲೆಸ್ ಬ್ಲೂಟೂತ್ ಇಯರ್ಬಡ್ಗಳು) ಸೇರಿದಂತೆ ಒಟ್ಟು 115 ಗ್ರಾಂ ಚಿನ್ನದ ಒಡವೆಗಳನ್ನು ಕದ್ದು ಪರಾರಿಯಾಗಿದ್ದರು.
ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಪೊಲೀಸರು, ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಚಂದ್ರಕಲಾ ಹಾಗೂ ಸಿಬ್ಬಂದಿಯವರಾದ ಸುನಿಲ್ ಬಾಸಗಿ, ಫೈರೋಜ್ ಕೆ, ಪ್ರವೀಣ್, ಸಚಿನ್ ಉಪ್ಪಾರ್, ಹರೀಶ್ ತಂಡವು, ಸೆ.21ರ ಭಾನುವಾರದಂದು ದೊಡ್ಡಬಳ್ಳಾಪುರ ತಾಲೂಕಿನ ರೈಲ್ವೆ ನಿಲ್ದಾಣ ಸಮೀಪದ ಸ್ಕೌಟ್ ಕ್ಯಾಂಪ್ ಬಳಿ ಕಳ್ಳರ ಜಾಡನ್ನು ಪತ್ತೆ ಮಾಡಿ ಪುರುಷೋತ್ತಮ, ಚಂದ್ರು, ದರ್ಶನ್, ಸೌಭಾಗ್ಯ ಎಂಬ ಆರೋಪಿಗಳನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಕಳ್ಳರನ್ನು ಬಂಧನ ಮಾಡಿದ ಕೂಡಲೇ ಸಾರ್ವಜನಿಕರು ತುಸು ನಿಟ್ಟುಸಿರು ಬಿಟ್ಟಿದ್ದರು. ಹಾಗೂ ಪೊಲೀಸರ ಕಾರ್ಯವೈಖರಿಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದರು.