ದೊಡ್ಡಬಳ್ಳಾಪುರ :2025-26ನೇ ಸಾಲಿನಲ್ಲಿ ಮುಂಗಾರು ಅತೀವೃಷ್ಟಿ ಮಳೆಯಿಂದಾಗಿ ನಷಕ್ಕೊಳಗಾದ ರೈತರು ಬೆಳೆದ ಏಕದಳ, ದ್ವಿದಳ ಹಾಗೂ ತೋಟಗಾರಿಕಾ ಬೆಳೆಗಳಿಗೆ ಎಸ್‌ಡಿಆರ್ ಆಫ್/ಎನ್ ಡಿಆರ್‌ಎಫ್ ನಿಯಮಕ್ಕೆ ಅನುಸಾರವಾಗಿ ಹಾಗೂ ರಾಜ್ಯ ಸರ್ಕಾರದಿಂದ ಪರಿಹಾರ ಧನ ಬಿಡುಗಡೆಗೊಳಿಸಬೇಕು ಇಲ್ಲದೆಹೋದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಬಿಜೆಪಿ ರೈತ ಮೋರ್ಚಾ ವತಿಯಿಂದ ಉಗ್ರಹೋರಾಟ ಕೈಗೊಳ್ಳಲಾಗುವುದು ಎಂದು ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವನಾಥ್ ತಿಳಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದಲ್ಲಿ ರೈತರು ಬೆಳೆದ ಮೆಕ್ಕೆಜೋಳ, ಭತ್ತ, ರಾಗಿ, ತೊಗರಿ, ಈರುಳ್ಳಿ ಸೇರಿದಂತೆ ಏಕದಳ ಹಾಗೂ ದ್ವಿದಳ ಧಾನ್ಯಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ/ಪ್ರತಿ ಸಹಕಾರಿ ಸಂಘಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕು ಹಾಗೂ ಬೆಂಬಲ ಬೆಲೆಯಲ್ಲಿ ರೈತರು ಬೆಳೆದಿರುವ ಬೆಳೆಗಳನ್ನು ರಾಜ್ಯ ಸರ್ಕಾರ ಖರೀದಿ ಕೇಂದ್ರಗಳ ಮುಖಾಂತರ ಖರೀದಿಸುವ ಮೂಲಕ ರಾಜ್ಯದ ರೈತರನ್ನು ಉಳಿಸಬೇಕಿದೆ.
ಹೈನುಗಾರಿಕೆಯಿಂದಲೇ ಜೀವನ ನಡೆಸುತ್ತಿರುವ ಕರ್ನಾಟಕ ರಾಜ್ಯದ 24ಲಕ್ಷ ಹಾಲು ಉತ್ಪಾದಕ ರೈತ ಕುಟುಂಬಗಳು ಪಶು ಆಹಾರ ಬೆಲೆ ಹೆಚ್ಚಳದಿಂದ ಸಂಕಷ್ಟಕ್ಕೊಳಗಾಗಿವೆ. ಕಾಂಗ್ರೆಸ್ ಸರ್ಕಾರವು 2023ರ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಪ್ರತಿ ಲೀಟರ್ಗೆ ಪ್ರೋತ್ಸಾಹ ಧನವನ್ನು ರೂ.5 ರಿಂದ 7ರೂ ಗೆ ಹೆಚ್ಚಿಸಲು ಆಗ್ರಹ ಬಾಕಿ ಉಳಿಸಿಕೊಂಡಿರುವ 620 ಕೋಟಿ ರೂಪಾಯಿ ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದರು.
ಶಾಸಕ ಧೀರಜ್ ಮುನಿರಾಜು ಮಾತನಾಡಿ ರಾಜ್ಯದಲ್ಲಿ ತೆಂಗು, ಅಡಿಕೆ, ದಾಳಿಂಬೆ, ದ್ರಾಕ್ಷಿ, ಬಾಳೆ ಇನ್ನಿತರ ತೋಟಗಾರಿಕಾ ಬೆಳೆಗಳಿಗೆ ತಗುಲಿರುವ ಗರಿರೋಗ, ಕಾಂಡಕೊರೆತ ರೋಗ, ಕಪ್ಪುತಲೆಹುಳ ರೋಗ, ಅಣಬೆ ರೋಗಗಳಿಂದಾಗಿ ಸಂಪೂರ್ಣ ನಷ್ಟಕ್ಕೆ ಒಳಗಾಗಿರುವ ಪ್ರತಿ ಗಿಡ/ಮರಗಳಿಗೆ ಕನಿಷ್ಠ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು .ರಾಜ್ಯದಲ್ಲಿ ಬಿಜೆಪಿ ಸರ್ಕಾರದ (ಬಿಎಸ್ ವೈ) ಅವಧಿಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯದ ಬೊಕ್ಕಸದಿಂದ ರೈತರಿಗೆ ನೀಡುತ್ತಿದ್ದ ವರ್ಷಕ್ಕೆ 4 ಸಾವಿರ ರೂಪಾಯಿಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನಿಲ್ಲಿಸಿರುವುದನ್ನು ರೈತ ಸಮುದಾಯದ ಪರವಾಗಿ ಖಂಡಿಸುತ್ತೇವೆ. ಹಾಗೂ ರೈತರಿಗೆ ಸಹಕಾರಿಯಾಗಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರದ ಬೊಕ್ಕಸದಿಂದ ಪ್ರತಿ ವರ್ಷಕ್ಕೆ 4 ಸಾವಿರ ರೂಗಳನ್ನು ನೀಡಬೇಕು ಎಂದರು.
ಅಲ್ಲದೇ ಬಿಎಸ್ ಯಡಿಯೂರಪ್ಪನವರ ಅವಧಿಯಲ್ಲಿ 25 ಸಾವಿರ ಶುಲ್ಕಕ್ಕೆ ರೈತರಿಗೆ ನೀಡುತ್ತಿದ್ದ ವಿದ್ಯುತ್ ಟ್ರಾನ್ಸ್ ಫಾರ್ಮ್‌ರ್ ಹಾಗೂ ವಿದ್ಯುತ್ ಸಂಪರ್ಕ ಯೋಜನೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನಿಲ್ಲಿಸಿದ್ದು ಪುನಃ ಪ್ರಾರಂಭಿಸಬೇಕು.ರಾಜ್ಯದ ಎಲ್ಲ ಸಮಸ್ಯೆಗೂ ಕೇಂದ್ರ ಸರಕಾರದ ಕಡೆ ಬೆಟ್ಟು ತೋರಿಸುವುದು ಮತ್ತು ಪರಿಹಾರಕ್ಕಾಗಿ ಅವರಕಡೆ ಮುಖ ನೋಡುವುದಷ್ಟೇ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಸೀಮಿತವಾಗಿದೆ.ಕುರ್ಚಿ ಗುದ್ದಾಟದಲ್ಲಿ ಜನಸಾಮಾನ್ಯರ ಸಮಸ್ಯೆಗಳು ಸರ್ಕಾರದ ಕಣ್ಣಿಗೆ ಕಾಣದಾಗಿದೆ ಆದರೆ ಬಿಜೆಪಿ ಸದಾ ರೈತರ ಬೆಂಬಲವಾಗಿ ನಿಲ್ಲುತ್ತದೆ. ನ್ಯಾಯ ಬದ್ದವಾಗಿ ರೈತರಿಗೆ ಸಿಗಬೇಕಿರುವ ಹಕ್ಕನ್ನು ಕೊಡಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಿಜೆಪಿ ಹೋರಾಟದ ಮುಖೇನ ಮಾಡಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಕೃಷ್ಣಪ್ಪ, ಮಾಜಿ ನಗರಸಭಾಧ್ಯಕ್ಷ ಮುದ್ದಪ್ಪ, ನಗರಸಭಾ ಸದಸ್ಯರಾದ ವೆಂಕಟೇಶ್ (ಬಂತಿ ), ಪದ್ಮನಾಭ, ಭಾಷೆಟ್ಟಿ ಹಳ್ಳಿ ನಾರಾಯಣ ಸ್ವಾಮಿ, ಪ್ರೇಮ್ ಕುಮಾರ್, ಸೇರಿದಂತೆ ಜಿಲ್ಲೆಯ ಹಲವು ಪದಾಧಿಕಾರಿಗಳು ಹಾಜರಿದ್ದರು.
