ಭೂಕಂಪ, ಪ್ರವಾಹ, ಸುನಾಮಿ, ಅಪಘಾತ, ಕಟ್ಟಡ ಕುಸಿತ, ನೆರೆ, ಅತೀವೃಷ್ಟಿ, ಅಗ್ನಿ ಅವಘಡ, ಅನಿಲ ಸೋರಿಕೆ ಸೇರಿದಂತೆ ಇತರೆ ವಿಪತ್ತುಗಳು ಸಂಭವಿಸಿದಾಗ ಅವುಗಳನ್ನು ಎದುರಿಸುವುದು ಹೇಗೆ, ಮುಂಜಾಗ್ರತ ಕ್ರಮಗಳನ್ನು ಹೇಗೆ ಕೈಗೊಳ್ಳಬೇಕು, ಹೇಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಾರ್ವಜನಿಕರು ಜಾಗೃತಿ ವಹಿಸಬೇಕು ಎಂಬುದ ಬಗ್ಗೆ ಕೇಂದ್ರ ವಿಪತ್ತು ನಿರ್ವಹಣಾದಳ(ಎನ್.ಡಿ.ಆರ್.ಎಫ್)10ನೇ ಬೆಟಾಲಿಯನ್ ಟೀಮ್ ರವರು ಹೊಸಕೋಟೆಯಲ್ಲಿ ವಿಪತ್ತು ನಿರ್ವಹಣೆ ಪ್ರಾತ್ಯಕ್ಷಿಕೆ ಆಯೋಜಿಸಿತ್ತು.
ಹೊಸಕೋಟೆ ತಾಲ್ಲೂಕಿನ ದೇವಲಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮತ್ತು ಸ್ವಾಮಿ ವಿವೇಕಾನಂದ ವಿದ್ಯಾ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.
ವಿಪತ್ತು ನಿರ್ವಹಣಾ ದಳದ ಇನ್ಸ್ಪೆಕ್ಟರ್ ರಾಮಬಾಜ್ ಮಾತನಾಡಿ ವಿಪತ್ತುಗಳು ಯಾವ ಸಂದರ್ಭ, ಸಮಯದಲ್ಲಿ ಬೇಕಾದರೂ ಸಂಭವಿಸಬಹುದು. ಹಲವಾರು ವಿಪತ್ತುಗಳನ್ನು ಎದುರಿಸಲು ನಮ್ಮಲ್ಲಿ ತಾಳ್ಮೆ ಸಹನೆ ಅಗತ್ಯ. ಇದು ಸಾಹಸದ ಕೆಲಸವಾಗಿದೆ ಅತ್ಯಂತ ಚಾಣಾಕ್ಷತೆಯಿಂದ ವಿಪತ್ತು ನಿರ್ವಹಣೆ ಮಾಡಬೇಕು. ವಿಪತ್ತಿನಲ್ಲಿ ಸಿಲುಕಿ ಅದೆಷ್ಟೋ ಜನರ ಜೀವ ಹೋಗುವ ಸನ್ನಿವೇಶ ನಿರ್ಮಾಣವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಪ್ರಜ್ಞಾವಂತರು ವಿಪತ್ತು ನಿರ್ವಹಣೆಗೆ ಧುಮುಕುವ ಮೂಲಕ ಸಾರ್ವಜನಿಕರ ಪ್ರಾಣ ಕಾಪಾಡುವುದು ಮಾನವೀಯ ಕರ್ತವ್ಯವಾಗಿದೆ. ವಿಪತ್ತು ಸಂದರ್ಭದಲ್ಲಿ ಅಗತ್ಯ ಮಾಹಿತಿ ಕಲೆ ಹಾಕುವ ಮೂಲಕ, ವಿಪತ್ತು ನಿರ್ವಹಣೆ ಕುರಿತು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಹೆಡ್ ಕಾನ್ಸ್ಟೇಬಲ್ ವಜ್ರ ಚೇತನ್ ವಿಪತ್ತು ನಿರ್ವಹಣೆಯ ಹಲವು ಮಜಲುಗಳ ಪ್ರಾತ್ಯಕ್ಷಿಕೆ ನೀಡುವ ಮೂಲಕ ವಿಪತ್ತು ನಿರ್ವಹಣೆಯಲ್ಲಿ ನಾವು ವಹಿಸಬೇಕಾದ ಮುಂಜಾಗ್ರತಾ ಕ್ರಮದ ಕುರಿತು ವಿವರಿಸಿದರು.
ಕಾರ್ಯಕರ್ಮದಲ್ಲಿ ಉಪತಹಶೀಲ್ದಾರ್ ಹೊಸಕೋಟೆ, ಗ್ರಾಪಂ ಪಿಡಿಒಗಳು, ಅಗ್ನಿ ಶಾಮಕ ಇಲಾಖೆ ಸಿಬ್ಬಂದಿ, ಎಸ್.ಟಿ.ಎಂ.ಸಿ ಸದಸ್ಯರು ಇತರೆ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
