ದೊಡ್ಡಬಳ್ಳಾಪುರ :ಶಾಸಕ ಧೀರಜ್ ಮುನಿರಾಜು ರವರ ಹುಟ್ಟುಹಬ್ಬದ ಅಂಗವಾಗಿ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಹಾಗೂ ಮುಖಂಡರಿಂದ ನಿರಂತರ ಅನ್ನದಾಸೋಹ ಸಮಿತಿ ಸಹಯೋಗದೊಂದಿಗೆ ನಿರಾಶ್ರಿತ ಕಡುಬಡವರಿಗೆ, ವಯೋವೃದ್ದರಿಗೆ ಅನ್ನದಾಸೋಹ, ಬಟ್ಟೆ ವಿತರಣೆ ಶಾಲಾ ಮಕ್ಕಳಿಗೆ ಸಿಹಿ ಹಂಚಿಕೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.

ಈ ವೇಳೆ ಗ್ರಾಮಪಂಚಾಯತಿ ಅಧ್ಯಕ್ಷರಾದ ಶಶಿಕಲಾ ನಾಗರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಸದಾ ಬಡವರ ಸೇವೆಯಲ್ಲಿ ನಿರತರಾಗಿ ತಾಲ್ಲೂಕಿನಲ್ಲಿ ಪ್ರತಿ ನಿತ್ಯ ಹೊಸ ಹೊಸ ಯೋಜನೆ, ಕಾಮಗಾರಿಗಳನ್ನು ರೂಪಿಸುವ ಮೂಲಕ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಪಕ್ಷಭೇದ ಮಾಡದೆ ನಮ್ಮ ಶಾಸಕರು ಶ್ರಮಿಸುತ್ತಿದ್ದು ಅವರು ಮತ್ತಷ್ಟು ಉನ್ನತ ಹುದ್ದೆಗಳು ತಲುಪುವ ಮೂಲಕ ಅವರ ನವ ದೊಡ್ಡಬಳ್ಳಾಪುರ ಕನಸು ನನಸು ಮಾಡಲಿ ಎಂದು ಹಾರೈಸುತ್ತೇವೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ವಕೀಲರಾದ ಸುರೇಶ್ ಮಾತನಾಡಿ ಕಿರಿಯ ವಯಸ್ಸಿನಲ್ಲೇ ಶಾಸಕರಾಗಿ ಬಿಜೆಪಿ ರಾಜ್ಯ ಯುವ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಧೀರಜ್ ಮುನಿರಾಜುರವರು ನಮಗೆಲ್ಲರಿಗೂ ಆದರ್ಶ. ನಿಸ್ವಾರ್ಥ ಪ್ರಜಾ ಸೇವೆ ಅವರಲ್ಲಿ ಕಾಣುತ್ತಿದ್ದೇವೆ . ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗೂ ಭೇಟಿ ನೀಡಿ ಸರ್ಕಾರದಿಂದ ವಿಶೇಷ ಅನುದಾನಗಳನ್ನು ತರುವ ಮೂಲಕ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಅವರ ಜನಪರ ಸೇವೆಗಳು ಮತ್ತಷ್ಟು ಮುಂದುವರಿಯಲಿ. ನಮ್ಮೆಲ್ಲರ ಹಾರೈಕೆ ಬೆಂಬಲ ಅವರೊಂದಿಗೆ ಸದಾ ಇರುತ್ತದೆ ಎಂದರು.

ಸ್ಥಳೀಯ ಬಿಜೆಪಿ ಮುಖಂಡರಾದ ಮಂಜುನಾಥ್ ಮಾತನಾಡಿ ನಮ್ಮ ಶಾಸಕರು ವಿರೋಧ ಪಕ್ಷದಲ್ಲಿದ್ದರೂ ಕೈ ಕಟ್ಟಿ ಕೂರದೆ ಸರ್ಕಾರದಿಂದ ಸದಾ ವಿಶೇಷ ಅನುದಾನಗಳನ್ನು ದೊಡ್ಡಬಳ್ಳಾಪುರಕ್ಕೆ ತರುವ ಮೂಲಕ ನಿತ್ಯ ನಿರಂತರ ಹೊಸ ಹೊಸ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವುದು ಅವರ ಕಾರ್ಯ ವೈಖರಿಗೆ ಉತ್ತಮ ಉದಾಹರಣೆಯಾಗಿದೆ. ಈ ರೀತಿ ವಿಶೇಷ ಜನಪರ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಅವರ ಹುಟ್ಟು ಹಬ್ಬದ ಶುಭ ಹಾರೈಸುತ್ತಿರುವುದು ಸಂತಸ ತಂದಿದೆ ಎಂದರು.

ಕಾರ್ಯಕ್ರಮ ದಲ್ಲಿ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು, ಸ್ಥಳೀಯ ಬಿಜೆಪಿ ಮುಖಂಡರು, ಧೀರಜ್ ಮುನಿರಾಜು ಅಭಿಮಾನಿಗಳು ಉಪಸ್ಥಿತರಿದ್ದರು.

