ದೊಡ್ಡಬಳ್ಳಾಪುರ : ಪ್ರತಿಯೊಬ್ಬ ಭಾರತೀಯರ ಅಭಿಮಾನದ ದಿನಾಚರಣೆ ಗಣರಾಜ್ಯೋತ್ಸವ ಆಗಿದೆ. ಪ್ರಜೆಗಳಿಂದಲೇ ಪ್ರಜೆಗಳಿಗಾಗಿ ಆಡಳಿತ ನಡೆಸುವ ಪ್ರಜಾಪ್ರಭುತ್ವ ವ್ಯವಸ್ಥೆಯ ನಿಜವಾದ ಅಸ್ತಿತ್ವ ಸ್ಥಾಪನೆಯಾದ ದಿನವೇ ಗಣರಾಜ್ಯೋತ್ಸವ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕವಾಗಿ ಸಂಶೋಧನಾ ಪರಿಷತ್ತು ರಾಜ್ಯಾಧ್ಯಕ್ಷ ಡಾ.ಹುಲಿಕಲ್ ನಟರಾಜ್ ತಿಳಿಸಿದರು.
ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ರಾಜ್ ಕುಮಾರ್ ಕಲಾ ಮಂದಿರದ ಆವರಣದಲ್ಲಿ ನಡೆದ 77 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪ್ರಜಾಪ್ರಭುತ್ವದ ಮೌಲ್ಯಗಳು, ಕಾನೂನಿನ ಆಳ್ವಿಕೆ ಮತ್ತು ನಾಗರಿಕರ ಹಕ್ಕುಗಳನ್ನು ಎತ್ತಿಹಿಡಿಯುವ ಮೂಲಕ ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನು ಭಾರತ ಹೊಂದಿದೆ. ಭಾರತದ ಭಾವೈಕ್ಯತೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಪ್ರತಿಯೊಬ್ಬ ಭಾರತೀಯರು ಮಾಡಬೇಕಾಗಿದೆ ಎಂದರು.
ದೊಡ್ಡಬಳ್ಳಾಪುರ ಮಹಿಳಾ ಸಮಾಜದ ಅಧ್ಯಕ್ಷೆ ವತ್ಸಲಾ ಮಾತನಾಡಿ, ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ದೇಶಪ್ರೇಮದ ಸಂಕೇತವಾಗಿ, ಜನರಲ್ಲಿ ಏಕತೆ ಮತ್ತು ಬ್ರಿಟಿಷರ ವಿರುದ್ಧ ಹೋರಾಡುವ ಸ್ಫೂರ್ತಿಯನ್ನು ಮೂಡಿಸಿದ ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದೆ. ಈ ಗೀತೆಯಲ್ಲಿ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ತ್ಯಾಗವನ್ನು ಸದಾ ನೆನಪಿಸುತ್ತದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಜವಾಬ್ದಾರಿಯನ್ನು ನೆನಪಿಸುವ ನಮ್ಮ ಸಂವಿಧಾನದಲ್ಲಿ ದೇಶದ ಅಭಿವೃದ್ಧಿಗೆ ಸೂಕ್ತ ನಾಯಕರನ್ನು ಆರಿಸುವ ಮತದಾನ ಹಕ್ಕು ಪ್ರಧಾನ ಅಂಶವಾಗಿದೆ. ಪ್ರಬುದ್ಧ ಮತ್ತು ನೈತಿಕ ಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಸದೃಢಗೊಳಿಸುವ ಅವಕಾಶ ಭಾರತೀಯರಿಗೆ ಇದೆ ಎಂದರು.
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ.ಗೋವಿಂದರಾಜು, ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್, ಗೌರವ ಕಾರ್ಯದರ್ಶಿ ಎ.ಜಯರಾಮ್, ಸಂಘಟನಾ ಕಾರ್ಯದರ್ಶಿ ಆರ್.ಗೋವಿಂದರಾಜು, ಕಸಬಾ ಹೋಬಳಿ ಘಟಕದ ಅಧ್ಯಕ್ಷ ದಾದಾಪೀರ್, ಕೋಶಾಧ್ಯಕ್ಷ ಜಿ.ಸುರೇಶ್, ಕನ್ನಡ ಜಾಗೃತ ವೇದಿಕೆ ಅಧ್ಯಕ್ಷ ನಾಗರಾಜು, ವಿದ್ಯಾರ್ಥಿನಿಲಯದ ಮೇಲ್ವಿಚಾರಕ ಸಿ ಅಣ್ಣಯ್ಯ, ನಿವೃತ್ತ ಮುಖ್ಯಶಿಕ್ಷಕ ಕೆ.ವಿ.ವೆಂಕಟೇಶರೆಡ್ಡಿ, ಪ್ರಾಂಶುಪಾಲ ಎಂ.ಸಿ.ಮಂಜುನಾಥ್, ಕಸಾಪ ಪ್ರತಿನಿಧಿಗಳಾದ ಕೋದಂಡರಾಮ್, ಮುನಿರಾಜು, ರಂಗಸ್ವಾಮಯ್ಯ, ಸಫೀರ್, ಕಲಾವಿದರಾದ ಬಾಶೆಟ್ಟಿಹಳ್ಳಿ ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು.
