ದೊಡ್ಡಬಳ್ಳಾಪುರ : ತಾಲೂಕಿನ ಹೆಸರಾಂತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಗೀತಮ್ ಯುನಿವರ್ಸಿಟಿಯಲ್ಲಿ ಇಂದು ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಕಾರಣ ಇದೇ ಮೊದಲ ಬಾರಿಗೆ ಭಾರತೀಯ ಅಂಚೆ ಇಲಾಖೆ ಸಹಕಾರದೊಂದಿಗೆ ಗೀತಮ್ ವಿಶ್ವವಿದ್ಯಾಲಯದ ಆವರಣದಲ್ಲಿ ಮುಂದಿನ ಪೀಳಿಗೆಯ ಅಂಚೆ ಕಚೇರಿ(N-GEN POST OFFICE )ಯನ್ನು ಉದ್ಘಾಟನೆ ಮಾಡಲಾಯಿತು.

ಹಲವು ಪ್ರಮುಖರಿಂದ ಉದ್ಘಾಟನೆಗೊಂಡ ನೂತನ ಅಂಚೆ ಕಚೇರಿಯು ತನ್ನ ವಿಶೇಷತೆಗಳಿಂದ ವಿದ್ಯಾರ್ಥಿಗಳನ್ನು ಅಚ್ಚರಿಗೋಳಿಸಿತು.

ಈ ಕುರಿತು ಭಾರತೀಯ ಅಂಚೆ ಸೇವೆ(ಬೆಂಗಳೂರು ವಿಭಾಗ ) ಗಳ ನಿರ್ದೇಶಕರಾದ ತಾರಾ ಮಾತನಾಡಿ ಭಾರತೀಯ ಅಂಚೆ ಇಲಾಖೆಯು ಯೂನಿವರ್ಸಿಟಿಗಳಲ್ಲಿ ಸ್ಥಾಪಿತವಾಗಿರುವ ಅಂಚೆ ಕಚೇರಿಗಳನ್ನು ಆಯ್ಕೆ ಮಾಡಿಕೊಂಡು ಅಂತಹ ಅಂಚೆ ಕಚೇರಿಗಳನ್ನು ಯುವ ಸ್ನೇಹಿಯಾಗಿ ರೂಪಿಸುವ ನಿಟ್ಟಿನಲ್ಲಿ ಈ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಈ ನೆಕ್ಸ್ಟ್ ಜನ್ ಪೋಸ್ಟ್ ಆಫೀಸ್ (NEXT-GEN POST OFFICE ) ಯುವ ಸಮುದಾಯವನ್ನು ಆಕರ್ಷಿಸಿ ಅಂಚೆ ಸೇವೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದರ ಜೊತೆಗೆ ಬಳಕೆ ಮಾಡಲು ಸಹಕಾರಿಯಾಗಲಿದೆ ಎಂದರು.

N-GEN POST OFFICE ನ ವಿಶೇಷತೆಗಳೇನು…??
ವಿದ್ಯಾರ್ಥಿಗಳು ಪೋಷಕರು ಹಾಗೂ ಸಾರ್ವಜನಿಕರು ಈ ಅಂಚೆ ಕಚೇರಿಗೆ ಭೇಟಿ ಕೊಟ್ಟ ತಕ್ಷಣವೇ ಅವರನ್ನು ಸ್ವಾಗತ ಮಾಡಲು ವೆಲ್ಕಮ್ ಲಾಂಚ್ ಸ್ಥಾಪಿಸಲಾಗಿದೆ. ಪ್ರಸ್ತುತ ದಿನಮಾನಗಳಲ್ಲಿ ಮೊಬೈಲ್ ಬಳಕೆದಾರರು ಹೆಚ್ಚಿರುವ ಕಾರಣ ತಮ್ಮ ಮೊಬೈಲ್ ಚಾರ್ಜಿಂಗ್ ಮಾಡಿಕೊಳ್ಳಲು ಚಾರ್ಜಿಂಗ್ ಸ್ಪಾಟ್ ಕೂಡ ಆಯೋಜನೆ ಮಾಡಲಾಗಿದೆ. ಯುವ ಸಮುದಾಯವು ಹೆಚ್ಚಿನ ಸಮಯವನ್ನು ರಿಲ್ಸ್ ಮಾಡುವುದರಲ್ಲಿ ಕಳೆಯುವುದು ಸರ್ವೇ ಸಾಮಾನ್ಯ ಸಂಗತಿಯಾಗಿದ್ದು ಅಂತಹ ರಿಲ್ಸ್ ಮಾಡುವವರಿಗೆ ಅಗತ್ಯ ಪರಿಕರಗಳನ್ನು ಈ ಅಂಚೆ ಕಚೇರಿಯಲ್ಲಿ ಬಳಸಿ ವಿಶೇಷ ರೀಲ್ಸ್ ಮಾಡಬಹುದಾಗಿದೆ. ಅಲ್ಲದೆ ಸೆಲ್ಫಿ ತೆಗೆದುಕೊಳ್ಳಲು ಚಂದ ಕಾಣುವ ಹಸಿರು ಗಿಡಗಳಿಂದ ತುಂಬಿದ ಅತ್ಯುತ್ತಮ ಸೆಲ್ಫಿ ಸ್ಪಾಟ್ ವಾಲ್ ರೂಪಿಸಿದ್ದು, ಓದುಗರನ್ನು ತಣಿಸಲು ಪುಟಾಣಿ ಲೈಬ್ರರಿ ಕೂಡ ಇದೆ. ಜೊತೆಗೆ ಭಾರತೀಯ ಅಂಚೆ ಸೇವೆಗಳನ್ನು ಕುರಿತ ಸಂಕ್ಷಿಪ್ತ ಮಾಹಿತಿ ನೀಡಲು ಪೋಸ್ಟಲ್ ಟ್ರೀ ಸಿದ್ಧವಿದೆ. ಅಲ್ಲದೆ ಈ ಅಂಚೆ ಕಚೇರಿಯಲ್ಲಿ ಪಾರ್ಸೆಲ್ ತಂದು ಗಂಟೆಗಟ್ಟಲೆ ಕಾಯುವ ಅವಶ್ಯಕತೆ ಇಲ್ಲ ಕಾರಣ ಆಧುನಿಕ ಯಂತ್ರೋಪಕರಣದ ಸಹಾಯದಿಂದ ತಾವೇ ಖುದ್ದಾಗಿ ಪಾರ್ಸಲ್ ಅನ್ನು ಯಂತ್ರದಲ್ಲಿ ಸೆಲ್ಫ್ ಬುಕಿಂಗ್ ಮಾಡುವ ಮೂಲಕ ನಮೂದಿಸಿ ಸ್ವೀಕೃತಿ ಚೀಟಿ ಪಡೆಯಬಹುದಾಗಿದೆ.

ಗೀತಮ್ ರೆಸಿಡೆನ್ಸಿಯಲ್ ನಿರ್ದೇಶಕರಾದ ವಿಜಯ್ ಗಿಜ್ಜಿ ಮಾತನಾಡಿ ಇಂದಿರಾ ವಿದ್ಯಾರ್ಥಿಗಳು ಅಂಚೆ ಇಲಾಖೆ ಬಳಸಬೇಕೆಂಬ ಮಹದಾಸೆಯಿಂದ ಅಂಚೆ ಇಲಾಖೆಯ ಸೇವೆಗಳನ್ನು ಆಧುನಿಕರಣದೊಂದಿಗೆ ಬೆಸೆದು ಈ ವಿನೂತನ ಪ್ರಯತ್ನವನ್ನು ಭಾರತೀಯ ಅಂಚೆಸೇವೆ ಮಾಡಿದೆ ಈ ವಿಶೇಷ ಪ್ರಯತ್ನಕ್ಕೆ ನಮ್ಮ ಗೀತಂ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ನಾವು ಧನ್ಯವಾದಗಳು ಅರ್ಪಿಸುತ್ತೇವೆ ಎಂದರು.

ಈ ವೇಳೆ ಗೀತಾಮ್ ವಿಶ್ವವಿದ್ಯಾಲಯದ ಪ್ರಮುಖರು, ಭಾರತೀಯ ಅಂಚೆ ಇಲಾಖೆ(ಬೆಂಗಳೂರು ವಿಭಾಗ )ಯ ಸಿಬ್ಬಂದಿ ವರ್ಗ ಹಾಜರಿದ್ದರು.
