ಬಾಕಿ ಬಿಲ್ ಪಾವತಿಸಿ : ರಾಜ್ಯ ಸರ್ಕಾರಕ್ಕೆ ಗುತ್ತಿಗೆದಾರರ ಒತ್ತಾಯ : ಮಾರ್ಚ್ 6ಕ್ಕೆ ಫ್ರೀಡಂ ಪಾರ್ಕ್ ನಲ್ಲಿ ಸಂಕೇತಿಕ ಪ್ರತಿಭಟನೆ

ದೊಡ್ಡಬಳ್ಳಾಪುರ : ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಿಂದ ಗುತ್ತಿಗೆದಾರರಿಗೆ ಬರಬೇಕಾದ ಸುಮಾರು ರೂ. 38.000 ಸಾವಿರ ಕೋಟಿ ಮೊತ್ತವನ್ನು ಸುಮಾರು ಎರಡು ವರೆ ವರ್ಷಗಳಿಂದ ಬಾಕಿ ಉಳಿಸಿಕೊಂಡು ಬಂದಿರುವ ಮೊತ್ತವನ್ನು ಬಿಡುಗಡೆ ಮಾಡಬೇಕೆಂದು ಅಗ್ರಹಿಸಿ ಸಂಕೇತಿಕವಾಗಿ ಮಾರ್ಚ್ 6ರಂದು ಪ್ರತಿಭಟನೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಗುತ್ತಿಗೆದಾರರರ ಸಂಘದ ಅಧ್ಯಕ್ಷ ಆರ್ ಮಂಜುನಾಥ್ ತಿಳಿಸಿದರು.

 

ನಗರದ ಪ್ರವಾಸಿಮಂದಿರದಲ್ಲಿ ನಡೆದ ಸುದ್ದಿಗೊಷ್ಟಿಯಲ್ಲಿ ಭಾಗವಸಿಮಾತನಾಡಿದ ಅವರು ಮಾನ್ಯ ಮುಖ್ಯಮಂತ್ರಿಗಳನ್ನು ಮತ್ತು ಹಲವಾರು ಸಚಿವರುಗಳನ್ನು ಭೇಟಿ ಮಾಡಿ, ಅವರ ಗಮನಕ್ಕೆ ತಂದಿರುತ್ತೇವೆ. ಆದರೆ ಇದುವರೆವಿಗೂ ಲೋಕೋಪಯೋಗಿ ಇಲಾಖೆ, ಬಿ.ಬಿ.ಎಂ.ಪಿ. ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಹೊರತು ಪಡಿಸಿ ಬೇರೆ ಇಲಾಖೆಗಳಲ್ಲಿ ಹಣವನ್ನು ಬಿಡುಗಡೆ ಮಾಡಿಲ್ಲ ಬಾಕಿ ಮೊತ್ತವನ್ನು ಒಂದೇ ಬಾರಿಯಲ್ಲದಿದ್ದರೂ ಹಂತ ಹಂತವಾಗಿಯಾದರೂ ಬಿಡುಗಡೆ ಮಾಡುವ ಪ್ರಾಮಾಣಿಕತೆಯನ್ನು ಸರ್ಕಾರ ತೋರಬೇಕಾಗಿತ್ತು. ಆದರೆ ಸರ್ಕಾರ ಗುತ್ತಿಗೆದಾರರನ್ನು ನಿರ್ಲಕ್ಷ್ಯ ಮಾಡುತ್ತಾ ಬಂದಿದೆ ಎಂದರು.

 

ಮುಖ್ಯಮಂತ್ರಿಗಳು ಹಲವಾರು ಬಾರಿ ಸಂಘದ ಪದಾಧಿಕಾರಿಗಳ ಜೊತೆಗೆ ಸಭೆಯನ್ನು ನಿಗದಿಪಡಿಸಿ ಯಾವುದೇ ನಿರ್ದಿಷ್ಟವಾದ ಕಾರಣವನ್ನು ನೀಡದೆ ಸಭೆಯನ್ನು ಮುಂದೂಡಿದ್ದು . ಇದುವರೆವಿಗೂ ಅಧಿಕೃತವಾದ ಸಭೆಯನ್ನು ಕರೆದು ಚರ್ಚೆ ನಡೆಸಲು ಮಾನ್ಯ ಮುಖ್ಯಮಂತ್ರಿಗಳು ಹಿಂದೇಟು ಹಾಕುತ್ತಿರುವುದು ಸಮಂಜಸವಲ್ಲ ಎಂದರು.

 

ನಮ್ಮ ಬೇಡಿಕೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಮಾರ್ಚ್ 6ರಂದು ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕು ಗುತ್ತಿಗೆದಾರರರು ಒಟ್ಟಾಗಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಒಂದು ದಿನದ ಪ್ರತಿಭಟನೆ ಹಮ್ಮಿಕೊಂಡಿದ್ದು, ಸರ್ಕಾರ ನಮ್ಮ ಬೇಡಿಕೆ ಈಡೇರಿಸದ ಪಕ್ಷದಲ್ಲಿ ಮುಂದೆ ಅನಿರ್ದಿಷ್ಟವಾದಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದರು.

 

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯ ಸಮಿತಿ ಸದಸ್ಯರು, ಸಂಘದ ಕೋಶಧ್ಯಕ್ಷ ಎ ಚಂದ್ರಣ್ಣ, ಪ್ರಧಾನ ಕಾರ್ಯದರ್ಶಿ ವಿ ಲಕ್ಷ್ಮಿ ಕಾಂತ್, ನಂದ ಕುಮಾರ್ ಜಿ ಎಂ, ಜಿಲ್ಲಾಧ್ಯಕ್ಷ ಜಿ. ಲಕ್ಷ್ಮೀಪತಿ, ಜಿಲ್ಲಾ ಕಾರ್ಯಧ್ಯಕ್ಷ ಸುಬ್ರಮಣಿ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

Leave a Reply

Your email address will not be published. Required fields are marked *