ದೊಡ್ಡಬಳ್ಳಾಪುರ: ತಾಲ್ಲೂಕಿನ ಸಾಸಲು ಮತ್ತು ದೊಡ್ಡಬೆಳವಂಗಲ ಹೋಬಳಿಯಲ್ಲಿ ಟೆರ್ರಾಫಾರಂ ಮತ್ತು ಎಂಎಸ್‌ಜಿಪಿ ಎಂಬ ಘನತ್ಯಾಜ್ಯದ ಹೆಮ್ಮಾರಿಯನ್ನು ಟೆಕ್ನಾಲಜಿ ಹೆಸರಿನಲ್ಲಿ ಮತ್ತೆ ವಿಸ್ತರಿಸಿ ಪುನರಾರಂಭಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ. ಇದರ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ನವ ಬೆಂಗಳೂರು ಹೋರಾಟ ಸಮಿತಿಯ ಸಂಸ್ಥಾಪಕ ಅದ್ಯಕ್ಷ ಜಿ ಎನ್ ಪ್ರದೀಪ್ ಕುಮಾರ್ ಎಚ್ಚರಿಕೆ ನೀಡಿದರು.
ನವ ಬೆಂಗಳೂರು ಹೋರಾಟ ಸಮಿತಿ ವತಿಯಿಂದ ಆಯೋಜನೆ ಮಾಡಲಾಗಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ಸಾಸಲು ಮತ್ತು ದೊಡ್ಡಬೆಳವಂಗಲ ಹೋಬಳಿಗಳ ಜನತೆಯ ಬದುಕಿನ ನೆಮ್ಮದಿ ಕಿತ್ತು ಹಲವು ದಶಕಗಳಿಗಾಗುವಷ್ಟು ವಿಷವನ್ನು ಪ್ರಕೃತಿಯ ಒಡಲಿಗೆ ಪ್ರಾಶನ ಮಾಡಿ ಸಹಸ್ರಾರು ಜನತೆಯ ಜೀವಗಳನ್ನು ನರಕಕೂಪಕ್ಕೆ ತಳ್ಳಿದ ಟೆರ್ರಾಫಾರಂ ಎಂಬ ಕಸದ ಹೆಮ್ಮಾರಿಯನ್ನು ಮತ್ತೆ ನಮ್ಮ ತಾಲ್ಲೂಕಿಗೆ ಉಡುಗೊರೆಯಾಗಿ ನೀಡಲು ರಾಜ್ಯ ಸರ್ಕಾರ ಸಜ್ಜುಗೊಂಡಿದೆ. ಈ ಕುರಿತು ಎರಡು ದಿನಗಳ ಹಿಂದೆ ಸುವರ್ಣಸೌಧದ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರವೇ ಅಧಿಕೃತವಾಗಿ ಒಪ್ಪಿಕೊಂಡಿದೆ.
ಕಳೆದ ಒಂದೂವರೆ ದಶಕದಿಂದ ನಮ್ಮ ತಾಲ್ಲೂಕಿನ ಹಲವು ಸಂಘಟನೆಗಳು ರೈತರು, ಸ್ಥಳೀಯ ಹೋಬಳಿಗಳ ಜನಪ್ರತಿನಿಧಿಗಳು, ಮಾಧ್ಯಮ ಮಿತ್ರರ ಅವಿರತ ಶ್ರಮ ಮತ್ತು ಹೋರಾಟಗಳ ಫಲವಾಗಿ ಟೆರ್ರಾಫಾರಂ ಎಂಬ ಪೆಡಂಭೂತವನ್ನು ಮುಚ್ಚುವ ನಿರ್ಧಾರವನ್ನು ಅಂದಿನ ಸರ್ಕಾರ ತೆಗೆದುಕೊಂಡಿತ್ತು. ಈಗ ಮತ್ತದೇ ಸರ್ಕಾರ ಅದೇ ಟೆರ್ರಾಫಾರಂ ಎಂಬ ಘನತ್ಯಾಜ್ಯದ ಹೆಮ್ಮಾರಿಯನ್ನು ಟೆಕ್ನಾಲಜಿ ಹೆಸರಿನಲ್ಲಿ ಮತ್ತೆ ವಿಸ್ತರಿಸಿ ಪುನರಾರಂಭಿಸಲು ಸಜ್ಜಾಗಿದೆ. ಈ ಮೂಲಕ ತಾಲ್ಲೂಕಿನ ಸಾಸಲು ಮತ್ತು ದೊಡ್ಡಬೆಳವಂಗಲ ಈ ಎರಡೂ ಹೋಬಳಿಗಳ ಜನತೆಯ ಶಾಶ್ವತ ಅವಸಾನಕ್ಕಾಗಿ ರಾಜ್ಯ ಸರ್ಕಾರ ಪಣ ತೊಟ್ಟು ನಿಂತಿದೆ ಎಂದರು.
ತಾಲ್ಲೂಕಿನಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸುವ ನಿರ್ಧಾರವನ್ನು ಇಲ್ಲಿಗೇ ಕೈಬಿಡಿ –
ಮಾನ್ಯ ಉಪಮುಖ್ಯಮಂತ್ರಿಗಳೇ, ದಶಕದ ಹಿಂದೆ ಎಂಎಸ್‌ಜಿಪಿ ತ್ಯಾಜ್ಯ ನಿರ್ವಹಣಾ ಘಟಕ ಎಂಬ ಹೆಮ್ಮಾರಿ ನಮ್ಮ ತಾಲ್ಲೂಕಿಗೆ ಹೆಜ್ಜೆ ಇಡುವಾಗಲೂ ನಿಮ್ಮಂತೆಯೇ ಟೆಕ್ನಾಲಜಿ, ಅತ್ಯಾಧುನಿಕ ಸಂಸ್ಕರಣೆ, ಫರ್ಟಿಲೈಜೇಷನ್ ಎಂಬಿತ್ಯಾದಿ ಹೂಗಳನ್ನು ಜನತೆಯ ಕಿವಿಗೆ ಇಟ್ಟು ಬಂದಿದ್ದು, ನಂತರ ಅದರಿಂದ ಪ್ರಕೃತಿಯ ಮೇಲಾದ ಅತ್ಯಾಚಾರ ಮತ್ತು ಜನಜೀವನದ ಮೇಲೆ ಬೀರಿದ ದುಷ್ಪರಿಣಾಮಗಳು ಇಂದಿಗೂ ಜೀವಂತ. ಈಗಾಗಲೇ ಇದರಿಂದಾಗಿರುವ ಮಾಲಿನ್ಯ ತಿಳಿಗೊಳ್ಳಲು ಕನಿಷ್ಠ ತಲೆಮಾರು ಕಳೆಯಬಹುದು. ಈ ಬಗ್ಗೆ ನಮ್ಮ ಮಾಧ್ಯಮ ಮಿತ್ರರು ನಿರಂತರವಾಗಿ ಸರಣಿ ಸುದ್ದಿಗಳು, ಅಂಕಣಗಳನ್ನು ಪ್ರಕಟಿಸಿ ನಿಮ್ಮ ಕಿವಿ ಹಿಂಡುತ್ತಲೇ ಬಂದಿದ್ದಾರೆ. ನಿಮ್ಮದೇ ಮಾತುಗಳನ್ವಯ ಅಂತಹ ಅತ್ಯಾಧುನಿಕ ಟೆಕ್ನಾಲಜಿ ಇದ್ದರೆ, ಅದರಿಂದ ಜನರಿಗೆ ಮತ್ತು ಪ್ರಕೃತಿಗೆ ಯಾವುದೇ ರೀತಿಯ ಅಪಾಯ ಇಲ್ಲ ಎಂಬುದಾದರೆ, ದಯವಿಟ್ಟು ಅಂತಹ ಒಂದು ಸಂಸ್ಕರಣಾ ಘಟಕವನ್ನು ಬೆಂಗಳೂರು ನಗರದ ಪ್ರತಿಷ್ಟಿತ ಶ್ರೀಮಂತರು ವಾಸಿಸುವ ಏರಿಯಾಗಳಲ್ಲೇ ಮೊದಲು ಪ್ರಾರಂಭಿಸಿ. ಅಲ್ಲಿ ನಿಮ್ಮ ಯೋಜನೆ ಯಶಸ್ವಿಯಾದರೆ ಆನಂತರ ನಮ್ಮ ತಾಲ್ಲೂಕಿನಲ್ಲಿ ಮಾಡುವ ಬಗ್ಗೆ ಯೋಚಿಸಿರಿ. ದಯಮಾಡಿ ಈ ನಿರ್ಧಾರವನ್ನು ಇಲ್ಲಿಗೇ ಕೈಬಿಡಿ.
ಇದೇ ಸಂದರ್ಭದಲ್ಲಿ ಸರ್ಕಾರದ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿ ತಾಲ್ಲೂಕಿನ ಜನತೆಯ ಬಗ್ಗೆ ಪ್ರಾಮಾಣಿಕವಾಗಿ ಕಳಕಳಿ ತೋರಿದ ನಮ್ಮ ಶಾಸಕ ಮಿತ್ರರಾದ ಶ್ರೀಯುತ ಧೀರಜ್ ಮುನಿರಾಜು ರವರಿಗೆ ಇಡೀ ತಾಲ್ಲೂಕಿನ ಪರವಾಗಿ ನವ ಬೆಂಗಳೂರು ಹೋರಾಟ ಸಮಿತಿ ಧನ್ಯವಾದಗಳನ್ನು ತಿಳಿಸುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಭಕ್ತರಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅದ್ಯಕ್ಷ ಸಿದ್ದಲಿಂಗಯ್ಯ, ಮಧು. ಪಿ, ರಾಜು ನಾಯಕ್ ಉಪಸ್ಥಿತರಿದ್ದರು.
