ದೊಡ್ಡಬಳ್ಳಾಪುರ : ವರ್ಷದ ಮೊದಲ ಹಬ್ಬ ಸಂಕ್ರಾಂತಿ ಆಚರಣೆ ಅಂಗವಾಗಿ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸ್ಕೈ ಎಜುಕೇಷನಲ್ ಟ್ರಸ್ಟಿನ ಸರ್ ಎಂ ವಿಶ್ವೇಶ್ವರಯ್ಯ ಶಾಲೆ ಮತ್ತು ಐ ಪ್ಲೇ ಲರ್ನ್ ಫೌಂಡೇಶನ್ ಸ್ಕೂಲ್ ಪುಟಾಣಿ ಮಕ್ಕಳಿಂದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಮಕ್ಕಳಿಂದ ಸಂತೆ ಆಯೋಜನೆ ಮಾಡಲಾಗಿತ್ತು.

ದರ್ಗಾ ಜೋಗಹಳ್ಳಿ ವ್ಯಾಪ್ತಿಯ ಸಮೂಹ ಸಂಪನ್ಮೂಲ ವ್ಯಕ್ತಿ (CRP) ಮುತ್ತುರಾಜ್ ಮಾತನಾಡಿ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ವಿವಿಧ ಬಣ್ಣಗಳ ರಂಗೋಲಿ, ಹಸಿರು ತೋರಣ ಕಬ್ಬು ಎಳ್ಳು ಬೆಲ್ಲ ಒಳಗೊಂಡಂತೆ ಪುಟಾಣಿ ಮಕ್ಕಳಿಂದ ಮಾರುಕಟ್ಟೆ ನಿರ್ಮಾಣ ಹಾಗೂ ವಿಜ್ಞಾನ ವಸ್ತು ಪ್ರದರ್ಶನಗಳ ಆಯೋಜನೆ ಮೂಲಕ ಸರ್ ಎಂ ವಿಶ್ವೇಶ್ವರಯ್ಯ ಶಾಲೆಯ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗ ಸ್ವಾಗತಿಸಿದ್ದಾರೆ. ಮಕ್ಕಳಲ್ಲಿ ಕ್ರಿಯಾತ್ಮಕ ಭಾವನೆ ಹೆಚ್ಚಿಸುವುದಷ್ಟೇ ಅಲ್ಲದೆ ಆ ಮೂಲಕ ಮಕ್ಕಳಲ್ಲಿ ಕಲಿಕಾ ಮಟ್ಟವನ್ನು ಹೆಚ್ಚಿಸುವ ರೀತಿನಲ್ಲಿ ಈ ರೀತಿಯ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದರು.

ನಮ್ಮ ಸಂಸ್ಕೃತಿ ಕಣ್ಮರೆಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ಈ ರೀತಿ ವಿಶೇಷವಾಗಿ ಹಬ್ಬ ಆಚರಣೆಗಳನ್ನು ಮಾಡುವ ಮೂಲಕ ನಮ್ಮ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸಬಹುದಾಗಿದೆ. ಮಕ್ಕಳಲ್ಲಿ ಕ್ರಿಯಾತ್ಮಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿ ಪ್ರತಿ ವರ್ಷವೂ ಇಂತಹ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಮಾರುಕಟ್ಟೆ ಮಕ್ಕಳಿಂದ ಸಂತೆ ಆಯೋಜನೆಯಂತಹ ಕಾರ್ಯಕ್ರಮಗಳನ್ನು ರೂಪಿಸುವುದು ಅವಶ್ಯಕತೆ ಎಂದರು.
ಈ ವೇಳೆ ಶಾಲೆಯ ಸಿಬ್ಬಂದಿ ವರ್ಗ ಹಾಗೂ ಮಕ್ಕಳಿಂದ ಗೋಪೂಜೆ,ದಾನ್ಯರಾಶಿಪೂಜೆ ನೆಡೆಯಿತು. ನಂತರ ಮಕ್ಕಳಿಂದ ವಿವಿಧ ಕ್ರಿಯಾತ್ಮಕ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಪುಟಾಣಿ ಮಕ್ಕಳಿಂದ ಸಂತೆ ನೆಡೆಯಿತು. ಶಾಲೆಗೆ ಆಗಮಿಸಿದ ಪೋಷಕರು ಹಾಗೂ ಅತಿಥಿಗಳಿಗೆ ಮಕ್ಕಳ ಚಟುವಟಿಕೆ ಸಂತಸತಂದಿತು.

ಈ ವೇಳೆ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿಗಳಾದ ಲೋಕನಾಥ್ ಮಾತನಾಡಿ ಇಂದು ವರ್ಷದ ಮೊದಲ ಹಬ್ಬ ಸಂಕ್ರಾಂತಿಯೊಟ್ಟಿಗೆ ವಿಶೇಷವಾಗಿ ನಮ್ಮ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಮಕ್ಕಳಿಂದ ಸಂತೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮಕ್ಕಳ ಕಳೆದ ಹಲವು ದಿನಗಳ ಪರಿಶ್ರಮ ಇಂದು ಸಾರ್ಥಕವಾಗಿದೆ ವೈಜ್ಞಾನಿಕವಾಗಿ ನಮಗೆ ತಿಳಿಯದ ಎಷ್ಟೋ ವಿಷಯಗಳನ್ನು ಮಕ್ಕಳು ನಿರ್ಗಳವಾಗಿ ಸರಾಗವಾಗಿ ಪ್ರಾಯೋಗಿಕವಾಗಿ ತಿಳಿಸುತ್ತಿದ್ದಾರೆ. ಮಕ್ಕಳನ್ನು ಕಂಡು ಹೆಮ್ಮೆಯಾಗುತ್ತಿದೆ ಎಂದರು .
ಅಲ್ಲದೇ ಪುಟಾಣಿ ಮಕ್ಕಳಿಂದ ಸಂತೆ ಯೋಜನೆ ಮಾಡಲಾಗಿದ್ದು ಮಕ್ಕಳ ಮುದ್ದು ಮಾತುಗಳಿಗೆ ಅವರ ವ್ಯಾಪಾರಶೈಲಿಗೆ ಮನಸೋಲದ ಪೋಷಕರೇ ಇಲ್ಲ, ನಾನು ಕೂಡ ಪುಟಾಣಿ ವ್ಯಾಪಾರಿಯ ಬಳಿ ನಿಂಬೆಹಣ್ಣು ಖರೀದಿ ಮಾಡಿದ್ದೇನೆ. ಮಕ್ಕಳ ಈ ಲವಲವಿಕೆಯ ಚಟುವಟಿಕೆಯಿಂದ ಅವರ ಕಲಿಕೆ ಮತ್ತಷ್ಟು ಉತ್ತಮಗೊಳ್ಳಲಿದೆ ಎಂದರು.

ಇಂದು ಬೆಳಗಿನಿಂದಲೇ ಸಂಕ್ರಾಂತಿ ಸಂಭ್ರಮ ನಮ್ಮ ಶಾಲೆಯಲ್ಲಿ ಮನೆ ಮಾಡಿದೆ ಹಳ್ಳಿ ಸಂಸ್ಕೃತಿಯಿಂದ ಕೂಡಿರುವ ಈ ಹಬ್ಬ, ಸಂಭ್ರಮಾಚರಣೆ, ವಿವಿಧ ಸಾಂಪ್ರದಾಯಿಕ ಸಾಂಸ್ಕೃತಿಕ ಆಚರಣೆಗಳನ್ನ ಮಕ್ಕಳಿಗೆ ತಿಳಿಸುವ ಸಲುವಾಗಿ ಸಂಕ್ರಾಂತಿ ಹಬ್ಬವನ್ನು ಮಕ್ಕಳೊಟ್ಟಿಗೆ ಆಚರಿಸಲಾಯಿತು. ಸಂಕ್ರಾಂತಿ ಹಬ್ಬಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ ನಮ್ಮ ವಿದ್ಯಾರ್ಥಿ ಮಕ್ಕಳು ಪರಸ್ಪರ ಎಳ್ಳು–ಬೆಲ್ಲ ವಿನಿಮಯ ಮಾಡಿಕೊಳ್ಳುವ ಮೂಲಕ ವರ್ಷದ ಮೊದಲ ಹಬ್ಬವನ್ನು ಸ್ವಾಗತಿಸಿದ್ದಾರೆ ಎಂದರು.

ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯರಾದ ಶಂಕ್ರಪ್ಪ, ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಪೋಷಕರು ಹಾಜರಿದ್ದರು.
Ad

