ದೊಡ್ಡಬಳ್ಳಾಪುರ : ರಾಜ್ಯ ಸರ್ಕಾರ ಒಳ ಮೀಸಲಾತಿ ಕುರಿತಂತೆ ರಾಜ್ಯಪಾಲರಿಗೆ ಸಲ್ಲಿಸಿದ್ದ ವರದಿಯನ್ನು ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ವಾಪಾಸ್ ಕಳಿಸಿದ್ದಾರೆ. ಈಗಲಾದರೂ ವರದಿಯಲ್ಲಿ ಮಾಡಿರುವ ತಪ್ಪುಗಳನ್ನು ಸರಿಪಡಿಸಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ಯಥಾವತ್ ಜಾರಿ ಮಾಡಿ ಎಂದು ಮಾದರ ಚನ್ನಯ್ಯ ಮಹಾಸಭಾ ಮುಖಂಡ ಬಚ್ಚಹಳ್ಳಿ ನಾಗರಾಜು ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾದರ ಚನ್ನಯ್ಯ ಮಹಾಸಭಾದಿಂದ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸತತವಾಗಿ 30 ವರ್ಷಗಳ ಹೋರಾಟದ ನಂತರ ಒಳ ಮೀಸಲಾತಿ ದೊರೆಯುತ್ತಿದ್ದು, ರಾಜ್ಯ ಸರ್ಕಾರ ಕೆಲ ರಾಜಕೀಯ ಪ್ರಭಾವಗಳಿಗೆ ಒಳಗಾಗಿ ಮಾದಿಗ ಹಾಗೂ ಅಲೆಮಾರಿ ಸಮುದಾಯಗಳಿಗೆ ಅರ್ಹ ಮೀಸಲಾತಿ ನೀಡುವಲ್ಲಿ ಎಡವಿದೆ ಆದರೆ ಅದನ್ನು ಸರಿ ಪಡಿಸಲು ಈಗ ಅವಕಾಶವಿದ್ದು ರಾಜ್ಯಪಾಲರಿಂದ ಮರಳಿ ಬಂದಿರುವ ವರದಿಯನ್ನು ಸರಿ ಪಡಿಸುವ ಮೂಲಕ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದರು.
ಮುಖಂಡ ತಳಗವಾರ ನಾಗರಾಜ್ ಮಾತನಾಡಿ ಮೀಸಲಾತಿ ನಮ್ಮ ಹಕ್ಕು ಅದನ್ನು ನಾವು ಕೇಳುತ್ತಿದ್ದೇವೆ ಅಷ್ಟೇ ಜನಸಂಖ್ಯೆ ಹೆಚ್ಚಿರುವ ಮಾದಿಗ ಸಮುದಾಯಕ್ಕೆ ಅರ್ಹ ಮೀಸಲಾತಿ ನೀಡಬೇಕು ಹಾಗೂ ಅಲೆಮಾರಿ ಸಮುದಾಯವನ್ನು ಬಲಿಷ್ಠ ಸಮುದಾಯಗಳ ಪಟ್ಟಿಯಲ್ಲಿ ಸೂಚಿಸಲಾಗಿದೆ ದಯವಿಟ್ಟು ಅವರನ್ನು ಪ್ರತ್ಯೇಕಗೊಳಿಸಿ ಮೀಸಲಾತಿ ಜಾರಿಗೊಳಿಸಬೇಕು ಎಂದರು.
26ಕ್ಕೆ ಕಪ್ಪು ಪಟ್ಟಿ ಧರಿಸಿ ಸರ್ಕಾರದ ವಿರುದ್ಧ ಹೋರಾಟ
ಒಳ ಮೀಸಲಾತಿ ಕುರಿತಂತೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡು ಎಲ್ಲಾ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು. ಅಲೆಮಾರಿ ಸಮುದಾಯಕ್ಕೆ ಹಾಗೂ ಮಾದಿಗ ಸಮುದಾಯಕ್ಕೆ ಅರ್ಹ ಮೀಸಲಾತಿ ನೀಡಿ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಬೇಕು. ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕುತ್ತಿರುವ ಗುಲಾಮರ ಅಪ್ಪ ಎಂಬ ಗ್ರೂಪಿನ ಅಡ್ಮಿನನ್ನು ಜನವರಿ 26ರ ಒಳಗಾಗಿ ಬಂಧಿಸಬೇಕು ಇಲ್ಲವೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಮುಖಂಡರು ಎಚ್ಚರಿಕೆ ನೀಡಿದರು.
ಶೀಘ್ರ ಕ್ರಮ ಕೈಗೊಳ್ಳಲು ಒತ್ತಾಯ:
ಇನೇನು ಸಿಇಟಿ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿದ್ದು ಸಮುದಾಯದ ಮಕ್ಕಳಿಗೆ ಮೀಸಲಾತಿ ಸಹಾಯವಗಲಿದೆ. ಸರ್ಕಾರ ಶೀಘ್ರವಾಗಿ ಒಳ ಮೀಸಲಾತಿ ವರದಿ ವಿಚಾರದಲ್ಲಿನ ಲೋಪದೋಷಗಳನ್ನ ಸರಿಪಡಿಸಿ ರಾಜ್ಯಪಾಲರಿಗೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮುಖಂಡರಾದ ನಾಗರಾಜು ಬಚ್ಚಹಳ್ಳಿ, ರಾಮಕೃಷ್ಣಪ್ಪ, ವೆಂಕಟೇಶ್, ಹನುಮಣ್ಣ, ಟಿ ಡಿ ಮುನಿಯಪ್ಪ, ಗಂಗರಾಜು ನರಸಿಂಹನಹಳ್ಳಿ, ಕೆ ವಿ ಮುನಿಯಪ್ಪ, ರಾಮ, ನರಸಪ್ಪ, ಮೈಲಾರಪ್ಪ, ತಳವಾರ ನಾಗರಾಜು, ಕೆ ನಾರಾಯಣಪ್ಪ, ಹರ್ಷ, ಕಾಂತರಾಜ, ಮುನಿಯಪ್ಪ, ಗಂಗರಾಜು ಮತ್ತಿತ್ತರರಿದ್ದರು.
