
ದೊಡ್ಡಬಳ್ಳಾಪುರ ತಾಲ್ಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಲೋಕಾಯುಕ್ತ ಪೊಲೀಸರು ಸೋಮವಾರ ದಿಢೀರ್ ದಾಳಿ ಮಾಡಿದ್ದಾರೆ.
ಇಡೀ ದಿನ ಹೊಂಚಿಹಾಕಿ ಕಾಯುತ್ತಿದ್ದ ಲೋಕಾಯುಕ್ತ ಪೊಲೀಸರು ಮಧ್ಯಾಹ್ನ ಮೂರು ಗಂಟೆ ವೇಳೆಗೆ ಸರ್ವೆಯರ್ ವೀರಣ್ಣ, ರೈತ ನಂದೀಶ್ ಎಂಬುವರಿಂದ 80000 ಹಣವನ್ನು ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಖೆಡ್ಡಾಗೆ ಕೆಡವಿದ್ದಾರೆ.
ಜಿಲ್ಲಾ ಲೋಕಾಯುಕ್ತ ಎಸ್ಪಿ ಪವನ್ ನಜ್ಜೂರು ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ರಮೇಶ್ .ಜೆ, ನಂದಕುಮಾರ್ ನೇತೃತ್ವದಲ್ಲಿ ಒಟ್ಟು 8 ಕ್ಕೂ ಹೆಚ್ಚಿನ ಅಧಿಕಾರಿಗಳ ತಂಡ ದಾಳಿ ಮಾಡಿದೆ.
ದೂರುದಾರ ನಂದೀಶ್ ಎಂಬುವರ ದೊಡ್ಡಬೆಳವಂಗಲ ಹೋಬಳಿಯ ಗುಂಡ್ಲಹಳ್ಳಿ ಗ್ರಾಮದ ಮೂರು ಎಕರೆ ಜಮೀನನ್ನು ಪೋಡಿ ಮಾಡಲು ಸರ್ವೆಯರ್ ವೀರಣ್ಣ ಮೇಲಾಧಿಕಾರಿಗಳ ಹೆಸರುಗಳನ್ನು ಹೇಳಿ ಪ್ರತಿ ಎಕರೆಗೆ ಒಂದು ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಒಟ್ಟು ಮೂರು ಎಕರೆ ಜಮೀನಿಗೆ ಮೂರು ಲಕ್ಷ ರೂ. ಮಾತನಾಡಿ 20000 ಸಾವಿರ ರೂ.ಹಣವನ್ನು ಮುಂಗಡವಾಗಿ ಪಡೆದಿದ್ದರು. ಸೋಮವಾರ 80ಸಾವಿರ ರೂ. ಹಣವನ್ನು ಪಡೆಯುತ್ತಿದ್ದಾಗ ಜಿಲ್ಲಾ ಲೋಕಾಯುಕ್ತ ಇನ್ಸ್ಪೆಕ್ಟರ್ ರಮೇಶ್.ಜೆ ನೇತೃತ್ವದಲ್ಲಿ ದಾಳಿ ಮಾಡಿ ಸರ್ವೇಯರ್ ವೀರಣ್ಣ ಮತ್ತು ಸಹಚರ ಸತೀಶ್ ಎಂಬುವರ ವಿಚಾರಣೆ ನಡೆಸಿದರು.
ಈ ಕುರಿತು ದೂರುದಾರ ನಂದೀಶ್ ಮಾತನಾಡಿ ನಮ್ಮ ಜಮೀನನ್ನ ಪೋಡಿ ಮಾಡಿಸಿಕೊಳ್ಳಲು ಕಳೆದ ಮೂರು ವರ್ಷದಿಂದ ಕಚೇರಿಗೆ ಅಲೆದಾಡುತ್ತಿದ್ದೇನೆ. ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲೂ ಅಧಿಕಾರಿಗಳ ಬೇಜವಾಬ್ದರಿತನದ ವಿರುದ್ಧ ದೂರು ನೀಡಿದ್ದೆ. ಉಪವಿಭಾಗಾಧಿಕಾರಿಗಳು ಪೋಡಿ ಮಾಡಿಕೊಡುವಂತೆ ಆದೇಶ ನೀಡಿದ್ದರೂ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಸಿಬ್ಬಂದಿ ಮಾತ್ರ ಮೀನಾಮೇಷ ಎಣಿಸುತ್ತಿದ್ದರು. ಕೊನೆಗೆ ಸರ್ವೇಯರ್ ವೀರಣ್ಣ ಪ್ರತಿ ಎಕರೆಗೆ ಒಂದು ಲಕ್ಷ ರೂ. ಖರ್ಚಾಗುತ್ತದೆ ಎಂದು ಹೇಳಿದ್ದರು. 20ಸಾವಿರ ಅಡ್ವಾನ್ಸ್ ಕೊಟ್ಟಿದ್ದೆ. ಬಳಿಕ ಮನನೊಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದೆ. ಅವರ ಸಹಕಾರದಿಂದ ಸೋಮವಾರ 80 ಸಾವಿರ ಹಣ ನೀಡುವಾಗ ರೆಡ್ ಹ್ಯಾಂಡ್ ಆಗಿ ಭ್ರಷ್ಠ ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದರು.