
ದೊಡ್ಡಬಳ್ಳಾಪುರ ಏಪ್ರಿಲ್ 11 ( ವಿಜಯ ಮಿತ್ರ ) : ನಮ್ಮ ಪಂಚಾಯಿತಿಯಲ್ಲಿ ಯಾವ ಗ್ರಾಮಗಳಿಗೂ ಕುಡಿಯಲು ನೀರಿಲ್ಲ, ಮನವೊಲಿಸಲು ಬರುವ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಲ್ಲಿ ಕಾಳಜಿವಹಿಸಿ ಎಂದು ಅಧಿಕಾರಿಗಳ ವಿರುದ್ಧ ದೊಡ್ಡತುಮಕೂರು ಹಾಗೂ ಮಜರಾಹೊಸಹಳ್ಳಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
ಲೋಕಸಭೆ ಚುನಾವಣೆ ಬಹಿಷ್ಕಾರದ ಹಿನ್ನಲೆ ತಾಲ್ಲೂಕು ಆಡಳಿತದ ವತಿಯಿಂದ ತಾಲ್ಲೂಕು ದಂಡಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಎರಡು ಗ್ರಾಮಗಳ ಗ್ರಾಮಸ್ಥರನ್ನು ಮನವೊಲಿಸಲು ಮುಂದಾದರು.
ಪಟ್ಟು ಬಿಡದ ಹೋರಾಟಗಾರರು ಕೂಡಲೇ 3ನೇ ಹಂತದ ಕುಡಿಯುವನೀರಿನ ಶುದ್ದಿಕಾರಣ ಪ್ರಾರಂಭಿಸುವಂತೆ ಒತ್ತಾಯಿಸಿದರು. ಹಾಗೂ ಗ್ರಾಮಗಳಿಗೆ ತಕ್ಷಣಕ್ಕೆ ಜಾರಿಗೆ ಬರುವಂತೆ ಜಕ್ಕಲ ಮಡುಗು ಯೋಜನೆಯ ಕುಡಿಯುವ ನೀರನ್ನು ಸರಬರಾಜು ಮಾಡುವಂತೆ ಅಗ್ರಹಿಸಿದರು.
ಮೌಖಿಕ ಆದೇಶ ಒಪ್ಪದ ಹೋರಾಟಗಾರರು ಲಿಖಿತ ರೂಪದಲ್ಲಿ ಅದೇಶ ಹೊರಡಿಸುವಂತೆ ಪಟ್ಟು ಹಿಡಿದರು. ಹಾಗೂ ಎರಡು ಪಂಚಾಯಿತಿಯ ಎಲ್ಲಾ ಗ್ರಾಮಗಳಲ್ಲಿ ಮಳೆ ನೀರಿನ ಕೊಯ್ಲು ಯೋಜನೆ ರೂಪಿಸುವಂತೆ ಹಾಗೂ ಸದರಿ ಕಾಮಗಾರಿಗಳಿಗೆ ತಗುಲುವ ವೆಚ್ಚವನ್ನು ಸರ್ಕಾರವೇ ಭರಿಸುವಂತೆ ಒತ್ತಾಯಿಸಿದರು.
ತಾಲೂಕುದಂಡಾಧಿಕಾರಿ ವಿದ್ಯಾ ವಿಭಾ ರಾಠೋಡ್ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗ್ರಾಮಸ್ಥರ ಮನವೊಲಿಕೆಗೆ ಪ್ರಯತ್ನಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಬಹಿಷ್ಕಾರ ಸರಿ ಅಲ್ಲ, ಸರ್ಕಾರ, ಅಧಿಕಾರಿಗಳು ನಿಮ್ಮೊಂದಿಗಿದ್ದೇವೆ. ನಮ್ಮೊಂದಿಗೆ ಸಹಕರಿಸಿ. ಕುಡಿಯುವ ನೀರಿನ ಯೋಜನೆ ತ್ವರಿತಗತಿಯಲ್ಲಿ ಸಾಗುವಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಅಧಿಕಾರಿಗಳ ಪ್ರಯತ್ನ ವಿಫಲವಾಗಿದ್ದು. ಸೂಕ್ತ ಪರಿಹಾರ ನೀಡದೆ ಚುನಾವಣಾ ಬಹಿಷ್ಕಾರ ಹಿಂಪಡೆಯುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಕೆ ಎಚ್ ಕೆಂಪಣ್ಣ, ಆದಿತ್ಯ ನಾಗೇಶ್, ಟಿ. ರಂಗರಾಜು, ಸಂದೇಶ್,ರೈತ ಮುಖಂಡರಾದ ವಸಂತ್ ಕುಮಾರ್ , ಸತೀಶ್, ಸೇರಿದಂತೆ ನೂರಾರು ರೈತರು ಎರಡು ಪಂಚಾಯಿತಿಗಳ ಗ್ರಾಮಸ್ಥರು ಉಪಸ್ಥಿತರಿದ್ದರು.