
ಚಿಕ್ಕಬಳ್ಳಾಪುರ ಏಪ್ರಿಲ್ 14 ( ವಿಜಯ ಮಿತ್ರ ) : ಪ್ರಧಾನಿ ನರೇಂದ್ರ ಮೋದಿಯವರು ಬಾಬಾ ಸಾಹೇಬರ ಪರಂಪರೆಯನ್ನುಳಿಸಲು ಶ್ರಮಿಸಿದ್ದರೆ, ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಬಾಬಾ ಸಾಹೇಬರನ್ನು ಮೂಲೆಗೆ ಸರಿಸಲು ಸಾಕಷ್ಟು ಪ್ರಯತ್ನ ಪಟ್ಟಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಸೂರ್ಯ ಕನ್ವೆನ್ಷನಲ್ ಹಾಲ್ ನಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ಒಂದು ಶಕ್ತಿ. ದೇಶದಲ್ಲಿ ಸಾವಿರಾರು ಭಾಷೆ, ಬೇರೆ ಬೇರೆ ಜಾತಿ, ಧರ್ಮಗಳಿದ್ದರೂ ಎಲ್ಲರೂ ಅಂಬೇಡ್ಕರ್ ರಚಿತ ಸಂವಿಧಾನದಡಿ ಸಮನ್ವಯದಿಂದ ಜೀವನ ನಡೆಸುತ್ತಿದ್ದಾರೆ. ಸಮ ಸಮಾಜವನ್ನು ನಿರ್ಮಿಸಿದ ಅವರು ಶೋಷಿತರ ಕಣ್ಣೀರು ಒರೆಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದರು ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಡಾ.ಬಿ.ಆರ್.ಅಂಬೇಡ್ಕರರ ಆಶಯದ ಹಾದಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಅದರೆ ಕಾಂಗ್ರೆಸ್ ಸರ್ಕಾರ, ಜವಹರಲಾಲ್ ನೆಹರೂ ಹಾಗೂ ಇಂದಿರಾಗಾಂಧಿ ಅವರು ಅಂಬೇಡ್ಕರ್ ಗೆ ಅಪಮಾನ ಮಾಡಿದ್ದರು ಎಂದರು.
ಸ್ವಾತಂತ್ರ್ಯ ದೊರೆತ ಆರಂಭದಿಂದಲೇ, ಡಾ.ಅಂಬೇಡ್ಕರ್ ಅವರನ್ನು ಬದಿಗೆ ಸರಿಸಲು ಕಾಂಗ್ರೆಸ್ ಪಕ್ಷ ಪ್ರಯತ್ನಿಸಿತ್ತು. *1952 ರ ಲೋಕಸಭಾ ಚುನಾವಣೆ* ಮತ್ತು 1954 ರ ಉಪಚುನಾವಣೆಯಲ್ಲಿ, ಅಂಬೇಡ್ಕರ್ ವಿರುದ್ಧ ಜವಹರಲಾಲ್ ನೆಹರು ನೇತೃತ್ವದಲ್ಲಿ ಪ್ರಚಾರ ಮಾಡಿದ ಕಾಂಗ್ರೆಸ್, ದಾದರ್‌ನಲ್ಲಿ ಅವರನ್ನು ಸೋಲಿಸಿತು. ನಂತರ, ಭಾರತೀಯ ಜನಸಂಘ ಮತ್ತು ಇತರ ಪಕ್ಷಗಳು ಕೈಜೋಡಿಸಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಮತ್ತೆ ಸಂಸತ್ತಿಗೆ ಕಳುಹಿಸಿದವು ಎಂದು ವಿವರಿಸಿದರು.
ಅಂಬೇಡ್ಕರ್ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಆದರೆ ಅವರ ಪುಸ್ತಕ ಮತ್ತು ಸಮಾಜ ಸುಧಾರಣಾ ಕಾರ್ಯಗಳನ್ನು ಕಾಂಗ್ರೆಸ್ ಎಂದಿಗೂ ಪ್ರಚಾರ ಮಾಡಲಿಲ್ಲ. ಏಕೆಂದರೆ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಪರಂಪರೆಯನ್ನು ಅಳಿಸಿ ಹಾಕಲು ಬಹಳ ಶ್ರಮ ವಹಿಸಿತ್ತು. ಸ್ವಾತಂತ್ರ್ಯದ ನಂತರ 35 ವರ್ಷಗಳ ಕಾಲ ಅಂಬೇಡ್ಕರ್ ಅವರಿಗೆ *ಭಾರತರತ್ನ ನೀಡಲು ಕಾಂಗ್ರೆಸ್ ನಿರಾಕರಿಸಿತ್ತು.* ಆದರೆ ಅದೇ ಪ್ರಶಸ್ತಿಯನ್ನು ಜವಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಅವರಿಗೆ ನೀಡಲಾಗಿತ್ತು. ನಂತರ 1990 ರಲ್ಲಿ ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್ ಸರ್ಕಾರ ಅಂಬೇಡ್ಕರ್ ಅವರಿಗೆ ಮರಣೋತ್ತರ ಭಾರತರತ್ನ ನೀಡಿ ಗೌರವ ಸಲ್ಲಿಸಿತ್ತು ಎಂದು ಸ್ಮರಿಸಿದರು.
ಅಂಬೇಡ್ಕರ್ ಅವರ ದೇಹಾಂತ್ಯವಾದಾಗ ಕೂಡ ಅವರ *ಅಂತ್ಯಸಂಸ್ಕಾರ ಮಾಡಲು* ಹಾಗೂ ಸ್ಮಾರಕ ಮಾಡಲು ಕಾಂಗ್ರೆಸ್ ಅವಕಾಶ ನೀಡಲಿಲ್ಲ. ಇದನ್ನು ಇತಿಹಾಸ ಎಂದಿಗೂ ಕ್ಷಮಿಸಲ್ಲ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಅಂಬೇಡ್ಕರ್ ಪರಂಪರೆಗೆ ಹೊಸ ದಿಕ್ಕು ನೀಡಿದರು ಎಂದರು.
ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು 1949 ರ ನವೆಂಬರ್ 26 ರಂದು ಅಳವಡಿಸಿಕೊಳ್ಳಲಾಯಿತು. ಪ್ರಧಾನಿ ಮೋದಿಯವರು ನವೆಂಬರ್ 26 ರಂದು *ಸಂವಿಧಾನ ದಿನ* ಎಂದು ಘೋಷಣೆ ಮಾಡಿದರು. ಪ್ರಧಾನಿ ಮೋದಿ 2016 ರಲ್ಲಿ ಪಂಚತೀರ್ಥ ಯೋಜನೆ ಜಾರಿ ಮಾಡಿದರು. ಅಂಬೇಡ್ಕರರ ಬದುಕಿನ ಪ್ರಮುಖ ಐದು ಸ್ಥಳಗಳ ಅಭಿವೃದ್ಧಿ ಮಾಡಿ ಇಲ್ಲಿಗೆ ಜನರು ಪ್ರವಾಸ ಮಾಡುವಂತೆ ಉತ್ತೇಜನ ನೀಡಿದರು ಎಂದರು.
*ದಲಿತರ ಮನೆಯಲ್ಲಿ ಉಪಾಹಾರ*
ಅಭ್ಯರ್ಥಿ ಡಾ.ಕೆ.ಸುಧಾಕರ್ ಬಾಗೇಪಲ್ಲಿಯ ಗೂಳೂರು ಗ್ರಾಮದ ಬಿಜೆಪಿ ಪಕ್ಷದ ದಲಿತ ಕಾರ್ಯಕರ್ತ ನಾರಾಯಣಪ್ಪ ಅವರ ಮನೆ ಭೇಟಿ ನೀಡಿ ಬೆಳಗಿನ ಉಪಾಹಾರ ಸೇವಿಸಿದರು.
ನಾರಾಯಣಪ್ಪನವರ ಕುಟುಂಬ ಸದಸ್ಯರು ಅತ್ಯಂತ ಆತ್ಮೀಯತೆಯಿಂದ ನೀಡಿದ ಆತಿಥ್ಯ, ಮನೆ ಮಂದಿಯೆಲ್ಲಾ ತೋರಿದ ಪ್ರೀತಿ, ವಿಶ್ವಾಸಕ್ಕೆ ನಾನು ಆಭಾರಿ ಎಂದು ಅವರು ಕೃತಜ್ಞತೆ ಸಲ್ಲಿಸಿದರು.
ಇದಕ್ಕೂ ಮುನ್ನ ಬಾಗೇಪಲ್ಲಿ ಪಟ್ಟಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಣೆ ಮಾಡಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು, ಸಂಸದ ಮುನಿಸ್ವಾಮಿ, ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಮಂಡಲ ಅಧ್ಯಕ್ಷ ಪ್ರತಾಪ್, ಗಂಗರೆಡ್ಡಿ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವೆಂಕಟರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಜೆಡಿಎಸ್ ಮುಖಂಡ ಹರಿನಾಥರೆಡ್ಡಿ, ತಾಲ್ಲೂಕು ದಲಿತಪರ ಸಂಘಟನೆಯ ಮುಖಂಡ ಆರ್.ವೆಂಕಟೇಶ್, ಚಿನ್ನಪುಜಪ್ಪ, ಕೆ.ಟಿ.ವೀರಾಂಜನೇಯ, ಜಯಂತ್, ಎಸ್.ಆರ್.ಲಕ್ಷ್ಮೀನಾರಾಯಣ , ರಾಮಪ್ಪ, ಪಿ.ಡಿ.ವೆಂಕಟರಮಣ, ವಿನಯ್ ಕುಮಾರ್, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.