
ಮೇ 03 ( ವಿಜಯಮಿತ್ರ ) : ದೇವನಹಳ್ಳಿ ತಾಲ್ಲೂಕಿನ ದೊಡ್ಡಗೊಲ್ಲಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಬೃಹತ್ ಐಟಿ ಪಾರ್ಕ್ ಗೆ ಕೆಐಎಡಿಬಿ ನೂರಾರು ಎಕರೆ ಜಮೀನನ್ನು ವಶಕ್ಕೆ ಪಡೆದಿದೆ. ಆದರೆ 30 ಎಕರೆಗಳ ಫಲವತ್ತಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿರುವ ಕೆಐಎಡಿಬಿ ಪರಿಹಾರದ ಹಣ ನೀಡದೆ ವಂಚಿಸುತ್ತಿದೆ ಎಂದು ಆರೋಪಿಸಿ ರೈತರು ಜಮೀನಿನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ದೇವನಹಳ್ಳಿ ಗಡಿಭಾಗದ ದೊಡ್ಡ ಗೊಲ್ಲಹಳ್ಳಿ ಗ್ರಾಮದ ರೈತರಾದ ಶ್ರೀನಿವಾಸ್ ಮತ್ತು ಕುಟುಂಬಸ್ಥರು ಕೆಐಎಡಿಬಿ ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಎಂದು ದೊಡ್ಡ ಗೊಲ್ಲಹಳ್ಳಿ ರೈತ ಶ್ರೀನಿವಾಸ್, ನಮ್ಮ ಸ್ವಯಾರ್ಜಿತ ಜಮೀನು ಸರ್ವೆ ನಂಬರ್ 98/1, 98/2, 98/4 ಹಾಗೂ ಪಿತ್ರಾರ್ಜಿತ ಜಾಗದ ಸರ್ವೇ ನಂಬರ್ 8/2, 8/3, 8/5, 90/1, 92, 93, 81/11, 76, 80/1, 87/4, 91/1.ಗಳಾಗಿದ್ದು ಈ ಸರ್ವೆ ನಂಬರ್ ಗಳ ಜಾಗವನ್ನು ಕೆಐಎಡಿಬಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಸ್ವಾಧೀನ ಪಡಿಸಿಕೊಂಡಿದ್ದು ಈವರೆಗೂ ಯಾವುದೇ ರೀತಿಯ ಪರಿಹಾರ ಧನ ನೀಡಿರುವುದಿಲ್ಲ, ಹಣ ಕೇಳಲು ಹೋದಲ್ಲಿ ಪ್ರತಿ ಬಾರಿ ಕೇವಲ ಭರವಸೆ ನೀಡುವ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ 30 ಜನರ ಕುಟುಂಬ ಬೀದಿ ಪಾಲಾಗಿದ್ದು. ನಮಗೆ ನ್ಯಾಯ ಒದಗಿಸುವಲ್ಲಿ ಕೆಐಎಡಿಬಿ ಮೀನಾಮೇಷ ಎಣಿಸುತ್ತಿದ್ದಾರೆ. ರೈತರ ತಾಳ್ಮೆ ನೋಡಿರುವ ಕೆಐಎಡಿಬಿ ರೈತರ ಆಕ್ರೋಶ ನೋಡಲಿ ನಮ್ಮ ಭೂಮಿಯನ್ನು ಕಸಿಯುವ ಹುನ್ನಾರ ನೆಡೆಯುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಸ್ಥಳೀಯ ರೈತ ಮುಖಂಡ ಆನಂದ್ ಮಾತನಾಡಿ ಸುಮಾರು 150 ವರ್ಷಗಳಿಂದ ಉಳಿಮೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರ ಭೂಮಿಯನ್ನು ಕಬಳಿಸಲು ಎಜೆಂಟ್ ಗಳ ಮುಖಾಂತರ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂ ಸ್ವಾಧೀನಕ್ಕೆ ಕೆಐಎಡಿಬಿ ಹುನ್ನಾರ ನಡೆಸುತ್ತಿದೆ. ರೈತ ಶ್ರೀನಿವಾಸ್ ರವರ ಕುಟುಂಬಕ್ಕೆ ತೊಂದರೆ ನೀಡುತ್ತಿರುವ ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ ಬಾಳಪ್ಪ ಮತ್ತು ಸಹಚರರ ವಿರುದ್ಧ ನಮ್ಮ ಕಾನೂನು ರೀತಿಯ ಹೋರಾಟ ಮುಂದುವರೆಯುತ್ತದೆ ಹಾಗೂ ತಾಲ್ಲೂಕಿನ ರೈತರಿಗೆ ಅನ್ಯಾಯವಾದಲ್ಲಿ ನಮ್ಮ ಹೋರಾಟ ಸಮಿತಿಯ ವತಿಯಿಂದ ರೈತರಿಗೆ ಬೆಂಬಲವಾಗಿ ನಿಂತು ನ್ಯಾಯ ದೊರಕಿಸಲು ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಕೆಐಎಡಿಬಿ ಅಧಿಕಾರಿ ಬಾಳಪ್ಪ ಮಾತನಾಡಿ ಸರಿಸುಮಾರು 300 ಎಕ್ಕರೆ ಪ್ರದೇಶವನ್ನು ಫಾಕ್ಸ್ಕನ್ ಕಂಪನಿ ವ್ಯಾಪ್ತಿಗೆ ನೀಡಿದ್ದು ಸದರಿ ವ್ಯಾಪ್ತಿಯ 30 ಎಕರೆ ಪ್ರದೇಶವು ಕೌಟುಂಬಿಕ ಕಲಹಗಳ ಕಾರಣ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ರೈತರಿಗೆ ಪರಿಹಾರ ನೀಡಲು ತಡೆಯಾಜ್ಞೆ ನೀಡಿರುವ ಕಾರಣ ಪರಿಹಾರದ ಹಣ ಬಿಡುಗಡೆ ತಡವಾಗಿದೆ. ಈ ಕುರಿತು ರೈತ ಕುಟುಂಬ ಪ್ರತಿಭಟನೆ ನೆಡೆಸುತ್ತಿದೆ. ರೈತರೊಂದಿಗೆ ಮಾತುಕತೆ ನೆಡೆಸಿ ಸಮಸ್ಯೆ ಬಗೆಹರಿಸುತ್ತೇವೆ ಎಂದರು.
*ಕಾಮಗಾರಿ ನಿಲ್ಲಿಸಲು ರೈತರ ಒತ್ತಾಯ*
ಕೆಐಎಡಿಬಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ರೈತರು ತಮಗೆ ನ್ಯಾಯ ಕೊಡುಸುವಂತೆ ಆಗ್ರಹಿಸಿದರು. ಕಾಂಪೌಂಡ್ ನಿರ್ಮಾಣಕ್ಕೆ ಮುಂದಾದ ಕೆಐಎಡಿಬಿ ವಿರುದ್ಧ ಆಕ್ರೋಶಗೊಂಡ ರೈತರು ಕಾಮಗಾರಿ ನಿಲ್ಲಿಸಲು ಮುಂದಾದರು ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.