
ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ ಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಆರೋಗ್ಯ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ, ಸೌಭಾಗ್ಯ ಸೇವಾ ಟ್ರಸ್ಟ್, ನೈಟಿಂಗೇಲ್ ಮೆಡಿಕಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾವಹಿಸಿದ್ದ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ರಮೇಶ್ ರವರು ಮಾತನಾಡಿ ನಮ್ಮ ಆಸ್ಪತ್ರೆಯಲ್ಲಿ ಪ್ರತಿ ಮಾಹೆ 250 ಕ್ಕಿಂತಲೂ ಹೆಚ್ಚಿನ ಹೆರಿಗೆಗಳು ಸಂಭವಿಸುತ್ತವೆ, ವಿವಿಧ ರೀತಿಯ 200 ಕ್ಕೂ ಹೆಚ್ಚಿನ ಶಸ್ತ್ರಚಿಕಿತ್ಸೆ ಗಳು ನಡೆಯುತ್ತವೆ. ಈ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಬಹಳ ಇರುತ್ತದೆ. ರಕ್ತ ದಾನಿಗಳು ರಕ್ತವನ್ನು ದಾನ ಮಾಡುವುದರಿಂದ ಸೂಕ್ತ ಸಂದರ್ಭದಲ್ಲಿ ರೋಗಿಗಳಿಗೆ ರಕ್ತದ ಲಬ್ಯತೆ ಆಗುತ್ತದೆ. ಈಗ ಬೆಂಗಳೂರಿನಿಂದ ರಕ್ತವನ್ನು ತರಿಸುತ್ತಿದ್ದೇವೆ. ಪ್ರಸ್ತುತ ಅಜಾಕ್ಸ್ ಕಂಪನಿಯ ವತಿಯಿಂದ ಕಟ್ಟಡ ನಿರ್ಮಾಣವು ಪ್ರಗತಿಯಲ್ಲಿದ್ದು ಇದೇ ವರ್ಷದಲ್ಲಿ ದೊಡ್ಡಬಳ್ಳಾಪುರ ದಲ್ಲಿ ರಕ್ತನಿಧಿ ಕೇಂದ್ರ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು. ಈಗ ತಾಲ್ಲೂಕಿನಾದ್ಯಂತ ನಡೆಯುವ ರಕ್ತದಾನ ಶಿಭಿರಗಳಿಂದ ಸಂಗ್ರಹವಾಗುವ ಪ್ರತೀ ನೂರು ಪ್ಯಾಕೆಟ್ ರಕ್ತದಲ್ಲಿ 25 ಪ್ಯಾಕೇಟ್ ಗಳು ಮಾತ್ರ ನಮಗೆ ವಾಪಸ್ ಸಿಗುತ್ತದೆ. ನಮ್ಮಲ್ಲೇ ರಕ್ತನಿಧಿ ಪ್ರಾರಂಭವಾದರೆ ಸಂಗ್ರಹವಾಗುವ ಅಷ್ಟು ರಕ್ತದ ಪ್ಯಾಕೆಟ್ ಗಳು ನಮ್ಮ ರೋಗಿಗಳಿಗೇ ಲಬ್ಯವಾಗುತ್ತವೆ ಎಂದು ತಿಳಿಸಿದರು.
ಸೌಭಾಗ್ಯ ಸೇವಾ ಟ್ರಸ್ಟ್ ನ ಅದ್ಯಕ್ಷರಾದ ರಾಜಗೋಪಾಲ್ ರವರು ಮಾತನಾಡಿ ಸಕಾಲದಲ್ಲಿ ಅಗತ್ಯ ರೋಗಿಗಳಿಗೆ ರಕ್ತದ ಲಬ್ಯತೆ ಆಗುವುದು ಅತ್ಯಂತ ಮಹತ್ವದ ವಿಷಯವಾಗಿರುತ್ತದೆ. ಈ ದಿನವನ್ನು ರಕ್ತದಾನಿಗಳನ್ನು ಅಭಿನಂದಿಸುವ ಸಲುವಾಗಿ 2004 ರಿಂದ ಆಚರಿಸಲಾಗುತ್ತಿದೆ. ಪ್ರತೀ ಆರೋಗ್ಯಕರ ವ್ಯಕ್ತಿಯು ಆರು ತಿಂಗಳಲ್ಲಿ ಒಮ್ಮೆ ರಕ್ತದಾನ ಮಾಡಬಹುದಾಗಿದೆ ಎಂದು ತಿಳಿಸಿದರು. ಗ್ರಾಮೀಣ ಭಾಗದಲ್ಲಿ ಹಲವು ಜನರು ರಕ್ತಹೀನತೆ, ಅಪೌಷ್ಟಿಕತೆಯಿಂದ ಬಳಲುತ್ತಾರೆ. ಅತಿಯಾದ ಆಲ್ಕೋಹಾಲ್ ಸೇವನೆ, ಗುಟ್ಕಾ, ಪಾನ್ ತಿನ್ನುತ್ತಾ ಸರಿಯಾಗಿ ಆಹಾರ ಸೇವನೆ ಮಾಡುವುದಿಲ್ಲ. ಇದರಿಂದ ಅವರಲ್ಲಿ ರಕ್ತದ ಅಂಶ ಕಡಿಮೆ ಆಗುತ್ತದೆ. ಅವರ ಕುಟುಂಬ ಸದಸ್ಯರಿಗೇ ರಕ್ತದ ಅವಶ್ಯಕತೆ ಇದ್ದಾಗ ರಕ್ತ ಕೊಡಲು ಆಗದಂತಹ ಪರಿಸ್ಥಿತಿ ಇರುತ್ತದೆ. ಆದ್ದರಿಂದ ಸಾದ್ಯವಾದಷ್ಟು ಉತ್ತಮ ಆಹಾರ ಸೇವನೆ, ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಂಡು ಆರೋಗ್ಯ ಪೂರ್ಣವಾಗಿ ಜೀವನ ಮಾಡುವ ಬಗ್ಗೆ ತಿಳಿಸಿದರು.
ಗ್ರಾಮೀಣ ಅಭ್ಯುದಯ ಸಂಸ್ಥೆಯ ಗೋಪಾಲ್ ನಾಯ್ಕ್ ಅವರು ಮಾತನಾಡಿ ಸ್ವಯಂ ಪ್ರೇರಿತ ರಕ್ತದಾನವು ಅತ್ಯಂತ ಉತ್ತಮ ಕಾರ್ಯ ವಾಗಿದ್ದು ಪ್ರತಿ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದಾಗಿದೆ. ತಮ್ಮ ರಕ್ತವನ್ನು ಉತ್ತಮವಾಗಿ, ಶುದ್ದವಾಗಿ ಇಟ್ಟುಕೊಂಡರೆ ಅದರಿಂದ ಅಗತ್ಯ ಸಂದರ್ಭಗಳಲ್ಲಿ ಬೇರೆಯವರಿಗೆ ರಕ್ತದಾನ ಮಾಡಲು ಅವಕಾಶವಾಗುತ್ತದೆ. ಆಲ್ಕೋಹಾಲ್ ಸೇವನೆ ಮಾಡಿದವರಲ್ಲಿ, ಕೆಲವು ಖಾಯಿಲೆಗಳಿಂದ ಬಳಲುತ್ತಿರುವವರಿಂದ ರಕ್ತವನ್ನು ಪಡೆಯುವುದಿಲ್ಲ. ಆಗ ತಮ್ಮದೇ ಕುಟುಂಬದ ಸದಸ್ಯರಿಗೆ ರಕ್ತದ ಅಗತ್ಯ ಇದ್ದಾಗಲೂ ಸಹ ಉಪಯೋಗ ಆಗಲ್ಲ. ಆದ್ದರಿಂದ ಉತ್ತಮ ರೀತಿಯಲ್ಲಿ ಜೀವನವನ್ನು ರೂಪಿಸಿಕೊಳ್ಳುವುದು ಅಗತ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ಎಲ್ಲಾ ರಕ್ತದಾನಿಗಳಿಗೆ ಶುಭಾಶಯ ವನ್ನು ತಿಳಿಸುತ್ತೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಡಾ.ಪರಮೇಶ್, ನೈಟಿಂಗೇಲ್ ಮೆಡಿಕಲ್ ಟ್ರಸ್ಟ್ ನ ಸುರೇಶ್ ರವರು, ನಿಮ್ಹಾನ್ಸ್ ಆಸ್ಪತ್ರೆಯ ಆಶಾ ರವರು, ಅನ್ನಪೂರ್ಣೇಶ್ವರಿ ರವರು ಆಶಾ ಕಾರ್ಯಕರ್ತೆ ಯರು ಭಾಗವಹಿಸಿದ್ದರು.