
ದೊಡ್ಡಬಳ್ಳಾಪುರ : ಕಾಂಗ್ರೆಸ್ ಪಕ್ಷವು ಮತದಾರರಿಗೆ ಆಮಿಷಗಳನ್ನು ಒಡ್ಡಿ ಜಯಗಳಿಸಿದೆ , ತನ್ನ ಕುತಂತ್ರ ರಾಜಕಾರಣದಿಂದಾಗಿ ಈ ಉಪಚುನಾವಣೆಯಲ್ಲಿ ಜಯಗಳಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾ ಮುಖಂಡ ಶ್ರೀನಿವಾಸ್ ಗೌಡ ತಿಳಿಸಿದರು.
ರಾಜ್ಯ ಉಪ ಚುನಾವಣೆ ಫಲಿತಾಂಶ ಕುರಿತಂತೆ ಮಾತನಾಡಿದ ಅವರು ಏನ್ ಡಿ ಎ ಅಭ್ಯರ್ಥಿಗಳ ಸೋಲನ್ನು ನಾವು ಪರಿಗಣಿಸುವುದಿಲ್ಲ ಕಾರಣ ರಾಜ್ಯದಲ್ಲಿ ಆಡಳಿತ ನೆಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ತನ್ನ ಹಣಬಲ ಹಾಗೂ ಅಧಿಕಾರ ಬಲವನ್ನು ಬಳಸಿ ಈ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಈ ರೀತಿಯ ಬೆಳವಣಿಗೆಯನ್ನು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಸಹಿಸುವುದಿಲ್ಲ ಎಂದರು.
ಚನ್ನಪಟ್ಟಣದ ಮತದಾರರಿಗೆ ಹಲವು ಅಮಿಷಗಳನ್ನು ಒಡ್ಡಿ ಮತದಾರರ ದಿಕ್ಕು ತಪ್ಪಿಸುವ ಮೂಲಕ ಕಾಂಗ್ರೆಸ್ ಪಕ್ಷವು ಗೆಲವು ಸಾಧಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ, ಈ ಸೋಲಿನಿಂದ ಹೊರಬಂದು ನಿಖಿಲ್ ಕುಮಾರಸ್ವಾಮಿ ಅವರು ಮತ್ತಷ್ಟು ಛಲದೊಂದಿಗೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಜೆಡಿಎಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಅವರೊಟ್ಟಿಗೆ ಜೆಡಿಎಸ್ ಕಾರ್ಯಕರ್ತರು ಸದಾ ಇರುತ್ತೇವೆ ಎಂದರು.
ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಒಟ್ಟಿಗೆ ತಾವು ಕೂಡ ಮತಯಾಚನೆ ನಡೆಸಿದ್ದು, ಸ್ಥಳೀಯವಾಗಿ ನಿಖಿಲ್ ಕುಮಾರಸ್ವಾಮಿ ಅವರ ಪರ ಉತ್ತಮ ಸ್ಪಂದನ ದೊರೆಯುತ್ತಿತ್ತು, ಚುನಾವಣೆಯಲ್ಲಿ ಶೇಕಡ 100ರಷ್ಟು ಗೆಲ್ಲುವ ಭರವಸೆಯೂ ಇತ್ತು, ಆದರೆ ಕಾಂಗ್ರೆಸ್ ಪಕ್ಷದ ಕುತಂತ್ರ ರಾಜಕಾರಣದಿಂದಾಗಿ ಈ ಸೋಲು ಉಂಟಾಗಿದೆ , ಈ ಸೋಲಿನಿಂದ ನಾವು ಖಂಡಿತ ಹೊರ ಬರುತ್ತೇವೆ, ದೇವೇಗೌಡರ ಆಶೀರ್ವಾದದೊಂದಿಗೆ ಪಕ್ಷವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟುತ್ತೇವೆ ಎಂದು ಅವರು ತಿಳಿಸಿದರು.