
ದೊಡ್ಡಬಳ್ಳಾಪುರ : ಇದೇ ಮೇ ತಿಂಗಳ 25 ರಂದು ನಡೆಯಲಿರುವ ಬಮೂಲ್ ಚುನಾವಣೆಗೆ ಸ್ಥಳೀಯವಾಗಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನಾಗಿ ಹುಸ್ಕೂರು ಟಿ ಆನಂದ್ ರವರನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.
ನಗರದ ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ ಮುನೇಗೌಡ ಅಭ್ಯರ್ಥಿಯ ಘೋಷಣೆ ಮಾಡಿದರು, ಈ ಸಂದರ್ಭದಲ್ಲಿ ಮಾತನಾಡಿದ ಅವರು ಸ್ಥಳೀಯವಾಗಿ ಜೆಡಿಎಸ್ ಪಕ್ಷದ ಶಕ್ತಿ ಪ್ರದರ್ಶನ ಹಾಗೂ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಬಮೂಲ್ ಚುನಾವಣೆಯ ವಿಷಯದಲ್ಲಿ ಸ್ಥಳೀಯವಾಗಿ ನಮ್ಮ ಪಕ್ಷದಲ್ಲಿ ಸೂಕ್ತ ಅಭ್ಯರ್ಥಿಗಳೇ ಇಲ್ಲ ಎಂಬ ಮಾತು ಕೇಳಿಬಂದಿತ್ತು, ಆದರೆ ಪ್ರತಿ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಮ್ಮ ಜೆಡಿಎಸ್ ಪಕ್ಷಕ್ಕೆ ತನ್ನ ಸ್ವಂತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಮರ್ಥ್ಯವಿದೆ ಎಂಬುದನ್ನು ಇತರರಿಗೆ ಅರ್ಥ ಮಾಡಿಸಲು ಇದೊಂದು ಸೂಕ್ತ ಉದಾಹರಣೆ ಎಂದರು.
ಕ್ರಮ ಸಂಖ್ಯೆ. 2, ಗುರುತು, ಹಣ್ಣಿನ ಬುಟ್ಟಿ ಗುರುತು. ದಿ.ಎಚ್.ಅಪ್ಪಯ್ಯಣ್ಣನವರಿಗೆ ಆತ್ಮಕ್ಕೆ ಶಾಂತಿ ಹಾಗೂ ನ್ಯಾಯ ಒದಗಿಸಲು ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಹೇಳಿದರು.
ಸ್ಥಳೀಯವಾಗಿ ಮೈತ್ರಿ ನಿಭಾಯಿಸುವ ನಿಯಮವೇನು ಇಲ್ಲ
ಬಮೂಲ್ ಚುನಾವಣೆ ಕುರಿತಂತೆ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಪಕ್ಷವೂ ಪ್ರತಿ ಚುನಾವಣೆಯಲ್ಲಿಯೂ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಬಾರಿ ನಮ್ಮ ಅಭ್ಯರ್ಥಿಗೆ ಕಾಂಗ್ರೆಸ್ ಪಕ್ಷವು ಬೆಂಬಲ ನೀಡಲಿದೆ ಎಂಬ ವಿಶ್ವಾಸ ಇದೆ, ಇದು ಕಾಂಗ್ರೆಸ್ ನೊಂದಿಗೆ ಮೈತ್ರಿ ಅಲ್ಲ, ಬಮೂಲ್ ಚುನಾವಣೆ ಯಾವುದೇ ರಾಜಕೀಯ ಪಕ್ಷದ ಚಿಹ್ನೆಯ ಅಡಿಯಲ್ಲಿ ನಡೆಯುವುದಿಲ್ಲ ಇದೊಂದು ರೈತಾಪಿ ವರ್ಗದ ಚುನಾವಣೆ, ಹಾಗಾಗಿ ಯಾವುದೇ ರೀತಿಯ ಮೈತ್ರಿ ಇಲ್ಲ , ಸ್ಥಳೀಯ ಚುನಾವಣೆಗಳಲ್ಲಿ ನಮ್ಮ ಪಕ್ಷದ ಉಳಿವು ಮತ್ತು ಬಲಪಡಿಸುವ ನಿಟ್ಟಿನಲ್ಲಿ ಇಂತಹ ನಿರ್ಧಾರಗಳ ಅವಶ್ಯಕತೆವಾಗಿರುತ್ತವೆ. ಅಲ್ಲದೆ ಸ್ಥಳೀಯ ಚುನಾವಣೆಗಳಲ್ಲಿ ಎನ್ ಡಿ ಎ ಮೈತ್ರಿ ಪಾಲಿಸಲೇಬೇಕೆಂಬ ನಿಯಮವೇನು ಇಲ್ಲ. ರಾಷ್ಟ್ರ ನಾಯಕರು ರಾಜ್ಯನಾಯಕರ ಆದೇಶದ ಮೇರೆಗೆ ಮೈತ್ರಿ ನಿಯಮ ಪಾಲನೆ ಮಾಡಲಾಗುವುದು ಎಂದರು.
ನಮ್ಮ ಅಭ್ಯರ್ಥಿ ಹುಸ್ಕೂರ್ ಟಿ ಆನಂದ್ ರವರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಹಲವಾರು ತೊಂದರೆ ಕೊಟ್ಟಿದ್ದಾರೆ ಆದರೆ ನೆನಪಿರಲಿ ತಾಲೂಕಿನಲ್ಲಿ ಜೆಡಿಎಸ್ ಪಕ್ಷವು ಸುಭದ್ರವಾಗಿದೆ , ರೈತಾಪಿ ವರ್ಗದ ಪಕ್ಷವಾಗಿರುವ ಜೆಡಿಎಸ್ ತನ್ನದೇ ಆದ ಬಲ ಹೊಂದಿದೆ ಈ ಬಾರಿಯ ಬಮೂಲ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವುದು ಶತಸಿದ್ದ ಎಂದರು.
ಸ್ಥಳೀಯವಾಗಿ ಕಾಂಗ್ರೆಸ್ ಪಕ್ಷವು ನಮ್ಮ ಪಕ್ಷದ ಅಭ್ಯರ್ಥಿ ಬೆಂಬಲಿಸುತ್ತದೆ ಎಂಬ ವಿಶ್ವಾಸ ಇದೆ , ಬಿಜೆಪಿ ಪಕ್ಷದ ಅಭ್ಯರ್ಥಿಗೆ ಕಾನೂನು ತೊಡಕು ಇರುವುದರಿಂದ ಮತದಾರ ಬಂಧುಗಳು ತಮ್ಮ ವೋಟನ್ನು ವ್ಯರ್ಥ ಮಾಡದೆ ಜೆಡಿಎಸ್ ಅಭ್ಯರ್ಥಿಗೆ ನೀಡುವ ಮೂಲಕ ಬಮೂಲ್ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿಮುಖಂಡರಾದ ಎ.ನರಸಿಂಹಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ವಿಜಯಕುಮಾರ್, ಹರೀಶ್ ಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದೇವರಾಜಮ್ಮ, ನಗರ ಮಹಿಳಾ ಘಟಕದ ಅಧ್ಯಕ್ಷೆ ಶಾಂತಮ್ಮ, ಬೆಂ.ಗ್ರಾ ಮಹಿಳಾ ವಕ್ತಾರೆ ಶಶಿಕಲಾ, ಹೋಬಳಿ ಅಧ್ಯಕ್ಷರಾದ ಜಗನ್ನಾಥ ಚಾರಿ, ರಂಗಸ್ವಾಮಿ, ಸತೀಶ್, ಸಿದ್ದಪ್ಪ, ರಾಜಗೋಪಾಲ್, ಜಗದೀಶ, ಅಶ್ವತ್ಥನಾರಾಯಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.