
ದೊಡ್ಡಬಳ್ಳಾಪುರ : ಸಮಾವೇಶ, ಜಾತ್ರಾ ಮಹೋತ್ಸವ, ಹಬ್ಬ-ಹರಿದಿನಗಳನ್ನು ಆಚರಣೆ ಮಾಡುವುದು ನಮ್ಮಲ್ಲಿರುವ ಒಗ್ಗಟ್ಟನ್ನು ಪ್ರದರ್ಶಿಸಲು. ರಾಜ್ಯದಲ್ಲಿ ವಾಲ್ಮೀಕಿ ಸಮಾಜದ ಒಗ್ಗಟ್ಟು ಬಲಿಷ್ಠವಾಗಿದೆ. ನಮ್ಮ ಬಲಿಷ್ಠತೆಯನ್ನು ಪ್ರದರ್ಶನ ಮಾಡಲು ವಾಲ್ಮೀಕಿ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಫೆ.8 ಮತ್ತು 9ರಂದು ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಆಯೋಜನೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ತಿಳಿಸಿದರು.
ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾ ಸ್ವಾಮೀಜಿಯವರು ದೊಡ್ಡಬಳ್ಳಾಪುರದಲ್ಲಿ ತಾಲ್ಲೂಕು ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆ 2024 ಪೂರ್ವಭಾವಿ ಸಭೆ ಹಾಗೂ ತಾಲ್ಲೂಕು ಮಟ್ಟದ ಜನಜಾಗೃತಿ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಈಗಾಗಲೇ ಐದು ಜಾತ್ರೆಗಳು ಯಶಸ್ವಿಯಾಗಿ ನಡೆದಿವೆ. ಇದೀಗ ಆರನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಸಮುದಾಯದ ಮುಂದಿರುವ ಹತ್ತು ಹಲವು ಬೇಡಿಕೆಗಳನ್ನು ಸರ್ಕಾರಕ್ಕೆ ಆಗ್ರಹ ಮಾಡುವ ಮೂಲಕ ಸಮುದಾಯದ ಆಶೋತ್ತರಗಳನ್ನು ಈಡೇರಿಸುವ ಬೃಹತ್ ಜನಜಾಗೃತಿಗಾಗಿ ಜಾತ್ರಾ ಮಹೋತ್ಸವವೇ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ. ಜಾತ್ರಾ ಮಹೋತ್ಸವದಲ್ಲಿ ವಿಚಾರ ಗೋಷ್ಠಿಗಳು, ನಾಡಿನ ಹಾಗೂ ಸಮುದಾಯದ ಇತಿಹಾಸ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಬೃಹತ್ ಜನಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯುವ ರಾಮ ಪ್ರತಿಷ್ಠಾಪನ ಕಾರ್ಯಕ್ರಮ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ಜನವರಿ 22ರಂದು ಹಲವು ಮಠಗಳ ಶ್ರೀಗಳ ಸಂಗಡ ತಾವು ಆಯೋಧ್ಯೆಗೆ ತೆರಳಿ ರಾಮ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ, ತಾಲ್ಲೂಕು ಜಾತ್ರಾ ಸಮಿತಿ ಅಧ್ಯಕ್ಷರನ್ನಾಗಿ ಮುನಿರಾಜು(ಚಿಕ್ಕಪ್ಪಿ) ಅವರನ್ನು ಆಯ್ಕೆ ಮಾಡಲಾಯಿತು.
ವಾಲ್ಮೀಕಿ ಸಮಾಜದ ಮುಖಂಡ ಮುನಿರಾಜು (ಚಿಕ್ಕಪ್ಪಿ) ಮಾತನಾಡಿ, ನಮ್ಮ ಸಮಾಜದ ಪ್ರಮುಖರು ಪೂಜ್ಯರು ಆದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಜಾತ್ರಾ ಮಹೋತ್ಸವದ ಅಂಗವಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಜವಾಬ್ದಾರಿಯನ್ನು ವಹಿಸಿದ್ದಾರೆ. ಅವರ ವಿಶ್ವಾಸಕ್ಕೆ ಬದ್ಧನಾಗಿ ನಮ್ಮ ಸಮುದಾಯದ ಮುಖಂಡರು ಹಾಗೂ ಸಂಗಡಿಗರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗೊಳಿಸಲು ಶ್ರಮಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಪ್ರೇಮ್ ಕುಮಾರ್, ಕೇಬಲ್ ರಾಮಚಂದ್ರ, ಹಿರಿಯ ಹೋರಾಟಗಾರ ಸಂಜೀವ್ ನಾಯಕ, ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕರ ಯುವಪಡೆ ರಾಜ್ಯಾಧ್ಯಕ್ಷ ಸುಬ್ರಮಣಿ, ಕುಮಾರ್, ರಾಜಣ್ಣ, ಅಂಬರೀಶ್, ರಘು, ನವೀನ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿರಿದರು.