
ದೊಡ್ಡಬಳ್ಳಾಪುರ : ಮಧುರೆ ಹೋಬಳಿಯ ಹೊನ್ನಾವರ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಗಂಡರಗೂಳಿಪುರ ವ್ಯವಸಾಯೋತ್ಪನ್ನ ಸೇವಾ ಸಹಕಾರ ಸಂಘದ ಚುನಾವಣಾ ಪ್ರಕ್ರಿಯೆ ಕ್ರಮಬದ್ಧವಾಗಿಲ್ಲ ಹಾಗೂ ನಿಗದಿಯಾಗಿರುವ ವಿಎಸ್ಎಸ್ಎನ್ ಚುನಾವಣೆ ಮುಂದೂಡಬೇಕು ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಆಗ್ರಹಿಸಿದರು.
ಗಂಡರಗೂಳಿಪುರ ಗ್ರಾಮದ ನೂತನ ವಿಎಸ್ಎಸ್ಎನ್ ಕಚೇರಿ ಬಳಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಪಂಚಾಯ್ತಿ ವ್ಯಾಪ್ತಿಯ 17 ಗ್ರಾಮಗಳಲ್ಲಿ ಅರ್ಹ ಷೇರುದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಸಂಘವನ್ನು ನೋಂದಣಿ ಮಾಡಿಸಿದ ನಾಲ್ಕು ಮಂದಿ ಪ್ರವರ್ತಕರನ್ನೂ ಪಟ್ಟಿಯಿಂದ ಹೊರಗಿಡಲಾಗಿದೆ . ಪಹಣಿ ಹೊಂದಿಲ್ಲದ ರೈತರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಶೇರುದರಾರರಾದ ರೈತರನ್ನು ಕನಸವಾಡಿಯಿಂದ ಬಿಡುಗಡೆಗೊಳಿಸಿ ಗಂಡರಗುಳಿಪುರ VSSN ಗೆ ಸೇರಿಸಿ ನೂತನ ಸಂಘ ರಚಿಸಲು ಸೂಚಿಸಲಾಗಿದೆ , ಆದರೆ ವಾಸ್ತವವಾಗಿ ಅಧಿಕಾರಿಗಳ ನಿರ್ಲಕ್ಷದ ಕಾರಣ ಸ್ಥಳೀಯ ರೈತರಿಗೆ ಮೊಸವಾಗುತ್ತಿದ್ದೆ ಚುನಾವಣೆ ಪ್ರಕ್ರಿಯೆ ಕ್ರಮಬದ್ಧವಾಗಿಲ್ಲದ ಕಾರಣ ಈಗಾಗಲೇ ಘೋಷಣೆಯಾಗಿರುವ ವಿಎಸ್ಎಸ್ಎನ್ ಚುನಾವಣೆ ಮುಂದೂಡಬೇಕು. ಇಲ್ಲವಾದಲ್ಲಿ ಮುಂದಾಗುವ ಅನಾಹುತಗಳಿಗೆ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕನಸವಾಡಿ, ಹೊನ್ನಾವರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಮಾರು 800 ಷೇರುದಾರರು ಕನಸವಾಡಿ ವ್ಯವಸಾಯೋತ್ಪನ್ನ ಸಹಕಾರ ಸಂಘದ ಯಶಸ್ಸಿಗೆ ಕಾರಣರಾಗಿದ್ದಾರೆ. ರೈತರ ಒತ್ತಾಯದ ಮೇರೆಗೆ ಕನಸವಾಡಿಯಿಂದ ಬೇರ್ಪಟ್ಟು ಗಂಡರಗೂಳಿಪುರ ವ್ಯವಸಾಯೋತ್ಪನ್ನ ಸೇವಾ ಸಹಕಾರ ಸಂಘ ಅಸ್ತಿತ್ವಕ್ಕೆ ಬಂದಿದೆ. ಆದರೆ, ನೂತನ VSSN ಸೊಸೈಟಿಯಲ್ಲಿ ನಕಲಿ ಮತದಾರರನ್ನು ಪಟ್ಟಿಗೆ ಸೇರಿಸಿ ವಾಮಮಾರ್ಗದಲ್ಲಿ ಚುನಾವಣೆ ಗೆಲ್ಲಲು ಕಾಂಗ್ರೆಸ್ ನಾಯಕರು ಯತ್ನಿಸಿದ್ದಾರೆ ಎಂದು ಆರೋಪಿಸಿದರು.
ಗಂಡರಗೂಳಿಪುರ ವಿಎಸ್ಎಸ್ಎನ್ ಮುಖ್ಯ ಪ್ರವರ್ತಕ ಗಂಗಾಧರಯ್ಯ ಮಾತನಾಡಿ ಚುನಾವಣೆ ಘೋಷಿಸಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ನನ್ನ ಹೆಸರನ್ನೂ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಹಾಗಾಗಿ ಮತದಾರ ಪಟ್ಟಿ ಸರಿಪಡಿಸಿ ಪಾರದರ್ಶಕವಾಗಿ ಚುನಾವಣೆ ನಡೆಸಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಹೊನ್ನಾವರ ಗ್ರಾ.ಪಂ. ಸದಸ್ಯ ಮಲ್ಲಿಕಾರ್ಜುನ ಮಾತನಾಡಿ, ಸೊಸೈಟಿಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ತಮಗೆ ಅನುಕೂಲವಾಗುವಂತೆ ಷೇರುಗಳನ್ನು ಹಾಕಿಸಿ ಅರ್ಹರನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ . ಸೊಸೈಟಿಯಲ್ಲಿ ಕೆಲವು ಕಾಂಗ್ರೆಸ್ ಮುಖಂಡರು ತಮ್ಮ ಕುಟುಂಬದವರನ್ನೇ ಷೇರುದಾರರನ್ನಾಗಿ ಮಾಡಿಕೊಂಡು ಚುನಾವಣೆಗೆ ಮುಂದಾಗಿದ್ದಾರೆ . ಅಕ್ರಮ ಚುನಾವಣೆ ನಡೆಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಗ್ರಾ.ಪಂ.ಮಾಜಿ ಸದಸ್ಯ ವಿಶ್ವನಾಥ್, ಮುಖಂಡರಾದ ರಘು ಇತರರು ಉಪಸ್ಥಿತರಿದ್ದರು.