
ದೊಡ್ಡಬಳ್ಳಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯನಿಗೆ ಮಾನ್ಯ ಸಂಸದರಾದ ಅನಂತ್ ಕುಮಾರ್ ಹೆಗ್ಡೆ ಯವರು ಅವಹೇಳನಕಾರಿಯಾಗಿ ಸಂಭೋಧಿಸಿದ್ದಾರೆ ಎಂಬುದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ರಾಷ್ಟ್ರ , ಧರ್ಮ, ಸಂಸ್ಕೃತಿ ವಿಚಾರಕ್ಕೆ ಬಂದರೆ ಅವರ ಭಾಷೆಯಲ್ಲೇ ಉತ್ತರಿಸುವ ಸಂಸ್ಕೃತಿ ನಮ್ಮ ಅನಂತ್ ಕುಮಾರ್ ಹೆಗಡೆಯವರದು ಎಂದು ಕದಂಬ ಬ್ರಿಗೇಡ್ ಸಂಸ್ಥಾಪಕ ಜಿ.ಎನ್.ಪ್ರದೀಪ್ ತಿಳಿಸಿದರು
ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆಯ ಕುರಿತು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು,
ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಯಲ್ಲಿ ಯಾವುದೇ ಅಸಭ್ಯತನ ಇಲ್ಲ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಪ್ರಧಾನಿ ಮೋದಿ ವಿರುದ್ದ ಏಕವಚನ ಶಬ್ದಗಳ ಪ್ರಯೋಗ ಮಾಡಿದ್ದಾರೆ . ಗಾಜಿನ ಮನೆಯಲ್ಲಿ ನಿಂತು ಕಲ್ಲು ಹೊಡೆಯುತ್ತಿರುವ ಕಾಂಗ್ರೆಸ್ಸಿಗರಿಗೆ ಅನಂತ್ ಕುಮಾರ್ ಹೆಗಡೆ ಹೇಳಿಕೆಯನ್ನು ಪ್ರಶ್ನಿಸುವ ಯಾವುದೇ ನೈತಿಕ ಹಕ್ಕಿಲ್ಲ.
ಸಂಸದ ಅನಂತ್ ಕುಮಾರ್ ಹೆಗಡೆ ಅವರ ವಿರುದ್ಧ ಕಾಂಗ್ರೆಸ್ ನಾಯಕರು ಅನಗತ್ಯವಾಗಿ ಗೊಂದಲ ಮೂಡಿಸುತ್ತಿದ್ದಾರೆ.ರಾಜ್ಯ ಸರ್ಕಾರ ತನ್ನ ದೌರ್ಬಲ್ಯಗಳನ್ನು ರಾಜ್ಯದ ಜನತೆ ಮುಂದೆ ಮರೆಮಾಚಲು ನೆಡೆಸಿರುವ ಷಡ್ಯಂತ್ರವಾಗಿದೆ , ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಂಸದ ಅನಂತ್ ಕುಮಾರ್ ಹೆಗಡೆ ಅವರು ನೇರ ಮತ್ತು ನಿಷ್ಠೂರವಾಗಿ ಮಾತನಾಡುವ ವ್ಯಕ್ತಿಯಾಗಿದ್ದಾರೆ . ಅವರು ಮಾತನಾಡುವ ಎಲ್ಲಾ ಹೇಳಿಕೆಗಳನ್ನು ವಿವಾದಾತ್ಮಕ ಹೇಳಿಕೆಗಳನ್ನಾಗಿ ಬಿಂಬಿಸುವ ಉತ್ತಮ ಪ್ರಯತ್ನ ಪ್ರಸ್ತುತ ಕಾಂಗ್ರೆಸ್ ಸರ್ಕಾರದ್ದಾಗಿದೆ. ಹಾಗಾಗಿ ಅವರ ಹೇಳಿಕೆಗಳನ್ನೇ ವಿವಾದವನ್ನಾಗಿಸುತ್ತಿದ್ದಾರೆ. ಕಾರಣ ಉತ್ತರ ಕನ್ನಡ ಮತ್ತು ಸುತ್ತಮುತ್ತಲಿನ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಿನ ಭಯ ಕಾಡುತ್ತಿದ್ದು ಅನಂತ್ ಕುಮಾರ್ ಹೆಗಡೆ ವಿರುದ್ಧ ಮಾತನಾಡುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬಹುದೆಂಬ ಭ್ರಮೆಯಲ್ಲಿ ಮಾತನಾಡುತ್ತಿದ್ದಾರೆ ಆದರೆ ಅದು ಎಂದಿಗೂ ಸಾಧ್ಯವಿಲ್ಲ. ದೇಶದ ಪ್ರಧಾನಿ ನರೇಂದ್ರ ಮೋದಿ ಜೀ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವ ಸಿದ್ದರಾಮಯ್ಯನವರೇ , ಹೆಗಡೆಯವರ ವಿರುದ್ಧ ಯಾವ ನೈತಿಕತೆ ಇಟ್ಟುಕೊಂಡು ಮಾತನಾಡುತ್ತಿರಿ. ಹೆಗಡೆಯವರ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ನೀವು ಹೇಳುವ ಮಾತನಾಡುವ ಸಂಸ್ಕೃತಿ, ನೀವು ಹಾಗೂ ನಿಮ್ಮ ಕ್ಯಾಬಿನೆಟ್ ನ ಸದಸ್ಯರು ಗೌರವಾನ್ವಿತ ಪ್ರಧಾನ ಮಂತ್ರಿಗಳ ವಿರುದ್ಧ ಏಕವಚನ ಅಥವಾ ಅವಹೇಳನಕಾರಿ ಶಬ್ದಗಳನ್ನು ಮಾತನಾಡುವಾಗ ಎಲ್ಲಿ ಸತ್ತು ಮಲಗಿತ್ತು ಎಂದು ಪ್ರಶ್ನಿಸಿದರು . ರಾಜ್ಯದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಬಿಜೆಪಿ ನಡವಳಿಕೆ ಸಂಶಯಾಸ್ಪದವಾಗಿ ಕಾಣುತ್ತಿದೆ . ಸಂಸದರಿಗೂ ರಾಜ್ಯ ಬಿಜೆಪಿ ನಾಯಕರಿಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿರುವ ನಡವಳಿಕೆ ಕಂಡಾಗ
ಯತ್ನಾಳ್ ರವರ ಹೇಳಿಕೆಯಂತೆ ಬಿಜೆಪಿಯವರ ಮನಸ್ಥಿತಿ ಸಹ ಅನುಮಾನಕ್ಕೆ ಕಾರಣವಾಗಿದೆ. ಹಿಂದೂ ಧರ್ಮದ ಕುರಿತು ಪದೇ ಪದೇ ಅವಹೇಳನ ಮಾಡುತ್ತಿದ್ದರು ಸುಮ್ಮನಿದ್ದರೆ ಏನೆಂಬುದು ಅರ್ಥವಾಗುತ್ತಿಲ್ಲ.
90ರ ದಶಕದಲ್ಲಿ ರಾಷ್ಟ್ರ ದ್ವಜ ಹಾರಿಸಬಾರದೆಂದು ಅಂದಿನ ಕಾಂಗ್ರೆಸ್ ಸರ್ಕಾರ 144 ಸೆಕ್ಷನ್ ಜಾರಿಗೊಳಿಸಿ ಕರ್ಫ್ಯೂ ಜಾರಿಗೊಳಿಸಿ ಆದೇಶ ನೀಡಿದ್ದರು ಸಹ ಯಾವುದೇ ಭಯವಿಲ್ಲದೆ ಅದಕ್ಕೆ ಸೆಡ್ಡು ಹೊಡೆದು ರಾಷ್ಟ್ರ ದ್ವಜ ಹಾರಿಸಿದವರು ಇದೆ ಅನಂತ್ ಕುಮಾರ್ ಹೆಗಡೆ ಎಂಬುದು ತಿಳಿದಿರಲಿ. ಭಾರತ ದೇಶದಲ್ಲಿ ಭಾರತದ ರಾಷ್ಟ್ರ ಧ್ವಜವನ್ನು ಹಾರಿಸಬಾರದೆಂಬ ಆದೇಶ ಹೊರಡಿಸಿದ್ದ ಏಕೈಕ ಸಂವಿಧಾನ ವಿರೋಧಿ ಪಕ್ಷ ಕಾಂಗ್ರೆಸ್ ಪಕ್ಷವಾಗಿದೆ.
ಸಂಸದರ ವಿರುದ್ಧ ಅಭಿವೃದ್ಧಿಯ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಪ್ರದೀಪ್ ಅನಂತ್ ಕುಮಾರ್ ಹೆಗಡೆ ಅವರ ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿಯಲ್ಲಿ ಯಾವುದೇ ಹಿನ್ನಡೆಯಾಗಿಲ್ಲ. ಆರು ಬಾರಿ ಸಂಸದರಾದರು ಇಲ್ಲಿಯವರೆಗೂ ಯಾವುದೇ ಹಗರಣ , ಭ್ರಷ್ಟಾಚಾರ ನಡೆಸದೆ ಪಾರದರ್ಶಕತೆಯ ಜೀವನ ಸಾಗಿಸುತ್ತಿರುವ ನಾಯಕ ಅನಂತ್ ಕುಮಾರ್ ಹೆಗ್ಡೆ ಅವರು ಯಾವುದೇ ರಾಜಕೀಯ ಬೆಂಬಲವಿಲ್ಲದೆ ಸಂಘರ್ಷದ ಹಾದಿಯಲ್ಲಿ ಬೆಳೆದು ಬಂದವರು. ಟಿಕೆಟ್ ಗಾಗಲಿ ಸಚಿವ ಸ್ಥಾನಕ್ಕಾಗಲಿ ಬೇರೆ ನಾಯಕರಂತೆ ಯಾವ ನಾಯಕರ ಮನೆ ಬಾಗಿಲಿಗೆ ಹೋದವರಲ್ಲ ಅಥವಾ ತಮ್ಮ ಹೇಳಿಕೆಗಳಿಂದ ಯಾವುದೇ ವಿವಾದಗಳು ಎದುರಾದಾಗ ರಾಜ್ಯ ಬಿಜೆಪಿ ಅವರನ್ನು ಸಮರ್ಥನೆ ಮಾಡಿಕೊಳ್ಳಲಿ ಎಂದು ಅನಂತಕುಮಾರ್ ಹೆಗಡೆ ಎಂದಿಗೂ ಬಯಸಿಲ್ಲ . ಅವರ ಬೆಂಬಲಕ್ಕೆ ಅಸಂಖ್ಯಾತ ಹಿಂದೂ ಕಾರ್ಯಕರ್ತರ ಪಡೆಯೇ ಇದೆ. ಅವರ ವಿರುದ್ಧ ಅವಹೇಳನ, ವಿಕೃತ ಮನೋಭಾವ ತೋರುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು .
ಸುದ್ದಿಗೋಷ್ಟಿಯಲ್ಲಿ ಕದಂಬ ಬ್ರಿಗೇಡ್ ಮುಖಂಡರಾದ ಸಿ.ಕೆ.ದಯಾನಂದ್, ಸುರೇಶ್ ಬಾಬು, ಕನಕರಾಜು, ಶಿವರಾಜ್, ಆಟೋ ರಮೇಶ್ ಮತ್ತಿತರರು ಉಪಸ್ಥಿತರಿದ್ದರು