
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಮಹಿಳೆಯೊಬ್ಬರ ಗರ್ಭಕೋಶದ ಸುತ್ತ ಬೆಳೆದಿದ್ದ ಬೃಹತ್ ಗಾತ್ರದ ಗಡ್ಡೆ ಹೊರ ತೆಗೆಯುವಲ್ಲಿ ಸ್ಥಳೀಯ ವೈದ್ಯರ ತಂಡ ಯಶಸ್ವಿಯಾಗಿದೆ.
ತಾಲ್ಲೂಕಿನ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆ ವೈದ್ಯರು, ಖಾಸಗಿ ಆಸ್ಪತ್ರೆಗಳಿಗೆ ಸಡ್ಡು ಹೊಡಿದಿದ್ದಾರೆ.ಗರ್ಭಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಶಿಲ್ಪಾ (35) ಎಂಬವರು ಮಂಗಳವಾರ ನಗರದ ಸರ್ಕಾರಿ ಆಸ್ಪತ್ರೆಗೆ ಹೊಟ್ಟೆನೋವು, ಸುಸ್ತು ಎಂದು ದಾಖಲಾಗಿದ್ದರು. ವೈದ್ಯರು ಮಹಿಳೆಯನ್ನು ಪರೀಕ್ಷಿಸಿದಾಗ ಹೊಟ್ಟಿಯಲ್ಲಿ 4 ರಿಂದ ೫ ಕೆ.ಜಿಯಷ್ಟು ದೊಡ್ಡ ಗಾತ್ರದ ಗಡ್ಡೆ ಇರುವುದು ಪತ್ತೆಯಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪ್ರಸೂತಿ ಸ್ತ್ರಿರೋಗ ತಜ್ಞರಾದ ಡಾ.ಅರ್ಚನಾ ಕೆ.ಎಲ್ ನೇತೃತ್ವದ ವೈದ್ಯರ ತಂಡ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಬಳಿಕ ವೈದ್ಯೆ ಡಾ.ಅರ್ಚನಾ ಕೆ.ಎಲ್ ಮಾತನಾಡಿ ಸಾಮಾನ್ಯವಾಗಿ ಮಹಿಳೆಯರ ಗರ್ಭಕೋಶ, ಅಂಡಾಶಯಗಳಲ್ಲಿ ಗಡ್ಡೆಯು 100ಕ್ಕೆ 10 ಮಂದಿಯಲ್ಲಿ ಬಹಳ ಸಣ್ಣಪುಟ್ಟದಾಗಿ ಕಂಡುಬರುತ್ತದೆ ಆದರೆ, ಅಚ್ಚರಿ ಎಂಬಂತೆ ಈ ಮಹಿಳೆಯ ಹೊಟ್ಟೆಯಲ್ಲಿ ೪ ರಿಂದ 5 ಕೆಜಿ ಗಡ್ಡೆ ಪತ್ತೆಯಾಗಿದೆ. ಮಹಿಳೆ ಒಂದೆರಡು ದಿನ ತಡವಾಗಿ ಬಂದಿದ್ರೆ ಆಕೆಯ ಜೀವಕ್ಕೆ ಹಾನಿಯಾಗುತ್ತಿತ್ತು. ಸದ್ಯ ಗರ್ಭಕೋಶದ ಸುತ್ತ ಬೆಳೆದಿದ್ದ ದೊಡ್ಡ ಗಾತ್ರದ ಗೆಡ್ಡೆ ಹೊರತೆಗೆಯಲಾಗಿದ್ದು, ಯಾವುದೇ ಅಪಾಯವಿಲ್ಲ ಮಹಿಳೆ ಆರೋಗ್ಯವಾಗಿದ್ದಾರೆ. ಇದೊಂದು ಕ್ಲಿಷ್ಟಕರವಾದ ಶಸ್ತ್ರ ಚಿಕಿತ್ಸೆ ಎಂದು ಪರಿಗಣಿಸಲಾಗಿದ್ದು, ಮಹಿಳೆ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.
ಶಸ್ತ್ರಚಿಕತ್ಸೆ ತಂಡದ ಭಾಗವಾಗಿದ್ದ ಡಾ.ಪ್ರೇಮಲತಾ ಮಾತನಾಡಿ ಇದೊಂದು ಗಂಭೀರ ಮತ್ತು ವೈದ್ಯರಿಗೆ ಸವಾಲದ ಪ್ರಕರಣವಾಗಿತ್ತು ಅನಸ್ತೆಷಿಯಾ ನೀಡುವ ಮುನ್ನಾ ಬಿ.ಪಿ, ಉಸಿರಾಟದ ಸಮಸ್ಯೆಗಳನ್ನು ನಿಯಂತ್ರಣಕ್ಕೆ ಪಡೆದು ಬಳಿಕ ಆಪರೇಷನ್ ಆರಂಭಿಸಿದೆವು. ರಕ್ತದ ಅಗತ್ಯತೆ ಹೆಚ್ಚು ಇದ್ದಿದ್ದರಿಂದ ಮುಂಚಿತವಾಗಿಯೇ ೪ ಬಾಟಲ್ ಗಳಷ್ಟು ರಕ್ತವನ್ನು ತರೆಸಿಕೊಂಡಿದ್ದೇವು. ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದರು.
ಅಪರೂಪದ ಪ್ರಕರಣದ ಶಸ್ತ್ರಚಿಕಿತ್ಸೆಯಲ್ಲಿ ಪ್ರಸೂತಿ ಸ್ತ್ರಿರೋಗ ತಜ್ಞೆ ಅರ್ಚನಾ ಕೆ.ಎಲ್ ಜೊತೆಗೆ ವೈದ್ಯರಾದ ಡಾ.ಗಿರೀಶ್, ಡಾ.ಪ್ರೇಮಲತಾ, ನರ್ಸ್ ಗಾಯತ್ರಿ, ನಂದಿನಿ, ಭವ್ಯ, ರಾಜು ತಂಡ ಕೈಜೋಡಿಸಿತ್ತು.