
ದೊಡ್ಡಬಳ್ಳಾಪುರ ಮಾರ್ಚ್ 03:
ಕಳೆದ ಮೂರು ವರ್ಷಗಳಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸರ್ಕಾರಿ ಶುಲ್ಕ ಕಟ್ಟಲು ಸಾಧ್ಯವಾಗದಷ್ಟು ಹಣವನ್ನು ಪ್ರತಿಭಾ ಪುರಸ್ಕಾರ ರೂಪದಲ್ಲಿ ನೀಡುತ್ತಿದ್ದೇವೆ ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.
ನಗರದ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಬಿಜೆಪಿ ಮತ್ತು ಅಂಜನಾದ್ರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಏಪ್ರಿಲ್ 1ರಿಂದ ಹಲವು ಸರ್ಕಾರಿ ಸೇವಾಪೂರ್ಟಲ್ ಗಳಾದ ಬಾಪೂಜಿ ಕೇಂದ್ರ, ಕರ್ನಾಟಕ ಒನ್, ಅಟಲ್ ಜೀ ಜನಸ್ನೇಹಿ ಕೇಂದ್ರದ ಅರ್ಜಿಗಳನ್ನು ಶಾಸಕರ ಕಚೇರಿಯಿಂದಲೇ ಉಚಿತವಾಗಿ ನಿರ್ಹಹಣೆ ಮಾಡಲಾಗುವುದು.ಸಾರ್ವಜನಿಕರಮನವಿ ಮೇರೆಗೆ ನಮ್ಮ ಸಿಬ್ಬಂದಿಯೇ ಮನೆಗಳಿಗೆ ತೆರಳಿ ಸರ್ಕಾರಿ ಸೇವೆಗಳಿಗೆ ಸಲ್ಲಿಸುವ ಅರ್ಜಿಗಳನ್ನು ಭರ್ತಿ ಮಾಡಲು ಹಾಗೂ ಸಲ್ಲಿಸಲು ಸಹಾಯ ಮಾಡಲಿದ್ದಾರೆ . ಈ ಮೂಲಕ ನಗರ ಮತ್ತು ತಾಲ್ಲೂಕಿನಾದ್ಯಂತ ಮೂಲಭೂತ ಸೌಕರ್ಯಗಳ ಸಮಸ್ಯೆ ನಿವಾರಣೆಗೆ 24*7 ಕೆಲಸ ಮಾಡಲಾಗುವುದು. ಸರ್ಕಾರಿ ಕಚೇರಿಗಳಲ್ಲಿ ಲಂಚ ಯಾಕೆ ಕೊಡಬೇಕು ಎಂದು ನಾವು ಪ್ರಶ್ನಿಸುವಂತಾಗಬೇಕು. ಪ್ರಶ್ನೆ ಮಾಡುವುದನ್ನ ಕಲಿತಾಗಲೇ ನಾವು ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಮುಂದಿನ ವರ್ಷದಿಂದ ತಂದೆ ಅಥವಾ ತಾಯಿ ಕಳೆದುಕೊಂಡಿರುವ 10 ವಿದ್ಯಾರ್ಥಿಗಳಿಗೆ ಸಿಇಟಿ ಶುಲ್ಕ ಮತ್ತು ಪಿಯುಸಿ ಶುಲ್ಕವನ್ನು ನಮ್ಮ ಟ್ರಸ್ಟ್ ವತಿಯಿಂದ ಕಟ್ಟಲಾಗುವುದು. ಪ್ರತಿವರ್ಷವೂ ನಮ್ಮ ಟ್ರಸ್ಟ್ ಮೂಲಕ ಜನಸೇವೆ ಮುಂದುವರಿಸಲಾಗುವುದು ಎಂದರು.
ಕಳೆದ ವರ್ಷ ಕ್ರೀಡಾಕೂಟದ ವೇಳೆ ಆಕಸ್ಮಿಕವಾಗಿ ಸಾವನ್ನಪ್ಪಿದ್ದ ವಿದ್ಯಾರ್ಥಿಗಳಾದ ಭರತ್ ಮತ್ತು ಪ್ರತೀಶ್ ನೆನಪಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರ್ಯಾಂಕ್ ಬರುವ ವಿದ್ಯಾರ್ಥಿಗಳಿಗೆ ಪ್ರತಿವರ್ಷ 10,000 ರೂಗಳ ಪ್ರೋತ್ಸಾಹ ಧನ ನೀಡಲಾಗುವುದು. ಬಳಿಕ ಮುಂದಿನ ವಿದ್ಯಾಭ್ಯಾಸಕ್ಕೂ ನಮ್ಮ ಟ್ರಸ್ಟ್ ವತಿಯಿಂದ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಮೇ.13ರಕ್ಕೆ ವರ್ಷದ ಸಾಧನೆ ಪ್ರಕಟ:
ಮೇ.13 ರಂದು ನಾನು ಒಂದು ವರ್ಷದಲ್ಲಿ ತಾಲ್ಲೂಕಿಗೆ ಶಾಸಕನಾಗಿ ಆಯ್ಕೆಯಾದ ಬಳಿಕ ಕೊಟ್ಟಿರುವಂತ ಯೋಜನೆಗಳು, ಸೌಲಭ್ಯಗಳ ಕುರಿತು, ಸರ್ಕಾರದೊಂದಿಗೆ ನಾನು ಅಭಿವೃದ್ಧಿ ಕುರಿತು ನೆಡೆಸಿರುವ ಪತ್ರವ್ಯವಹಾರಗಳ ಮಾಹಿತಿ ಅದಕ್ಕೆ ಸರ್ಕಾರ ಸ್ಪಂದಿಸಿರುವ ರೀತಿಯನ್ನು ಜನರ ಮುಂದೆ ಪ್ರಕಟಿಸುತ್ತೇನೆ. ಶಾಸಕನಾಗಿ ನನ್ನ ಶಕ್ತಿ ಮೀರಿ ಕರ್ತವ್ಯ ನಿರ್ಹಹಿಸುತ್ತಿದ್ದೇನೆ. ಜನತೆಗಾಗಿ ನನ್ನ ಕೆಲಸವನ್ನು 24*7 ಕಾರ್ಯನಿರ್ಹಹಣೆ ಮಾಡುತ್ತಿದ್ದೇನೆ ಎಂದರು.
ಸಿಎಂ ಸಿದ್ಧರಾಮಯ್ಯ ಕಾರ್ಯಕ್ರಮಕ್ಕೆ ಗೈರು:
ಸೋಮವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಉಪಮುಖ್ಯಮಂತ್ರಿ ಸೇರಿದಂತೆ ಸಚಿವರ ಸಮ್ಮುಖದಲ್ಲಿ ನೆಲಮಂಗಲದಲ್ಲಿ ಹಮ್ಮಿಕೊಂಡಿರುವ ಸರ್ಕಾರಿ ಕಾರ್ಯಕ್ರಮವನ್ನು ನಾನು ಬಹಿಷ್ಕಾರ ಹಾಕಿದ್ದೇನೆ. ನನ್ನ ತಾಲ್ಲೂಕಿಗೆ ಬಜೆಟ್ ನಲ್ಲಿ ಮತ್ತು ವಿವಿಧ ಯೋಜನೆಗಳು, ಅನುದಾನಗಳನ್ನೂ ನೀಡುವಲ್ಲಿ ತೀವ್ರ ಕಡೆಗಣನೆ ಮಾಡಲಾಗಿದೆ. ಇದನ್ನು ಸದನದಲ್ಲಿ ಪ್ರಶ್ನಿಸಿ ನ್ಯಾಯ ಪಡೆಯುತ್ತೇನೆ. ಮುಂದಿನ ಕಲಾಪದ ವೇಳೆ ಏಕಾಂಗಿಯಾಗಿಯಾದರೂ ಸರಿಯೇ ಸದನದ ಬಾವಿಗಿಳಿದು ಪ್ರತಿಭಟನೆ ಮಾಡಿ ತಾಲ್ಲೂಕಿಗೆ ಆಗಿರುವ ಅನ್ಯಾಯವನ್ನ ಪ್ರಶ್ನಿಸುತ್ತೇನೆ. ಸೋಮವಾರದಂದು ನೆಡೆಯುವ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ನನ್ನ ಆಕ್ರೋಶ ವ್ಯಕ್ತಪಡಿಸುತ್ತಿದ್ದೇನೆ ಎಂದರು.
ತೀವ್ರ ನಿಗಾ ಘಟಕ(ಐಸಿಯು) ಸಾಧನೆ ನನ್ನ ಖಾತೆಗೆ:
ತಾಲ್ಲೂಕಿನ ತಾಯಿ-ಮಗು ಸಾರ್ವಜನಿಕ ಆಸ್ಪತ್ರೆಗೆ ಸರ್ಕಾರ ಮಂಜೂರು ಮಾಡಿರುವ 50 ಬೆಡ್ ಗಳ ತೀವ್ರ ನಿಗಾ ಘಟಕ ವಿಚಾರ ಮಾಜಿ ಶಾಸಕ ವೆಂಕಟರಮಣಯ್ಯ ಮತ್ತು ಹಾಲಿ ಶಾಸಕ ಧೀರಜ್ ಮುನಿರಾಜು ಅಭಿಮಾನಿಗಳ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಕ್ರೆಡಿಟ್ ವಾರ್ ಶುರುವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಧೀರಜ್ ಮುನಿರಾಜು ಸಂವಿಧಾನಿಕವಾಗಿ ಸರ್ಕಾರದಿಂದ ತಾಲ್ಲೂಕಿಗೆ ಲಭಿಸುವ ಯಾವುದೇ ಅನುದಾನ ಅಥವಾ ಯೋಜನಗಳು ತಾಲ್ಲೂಕಿನ ಪ್ರತಿನಿಧಿಗಳಾದ ಶಾಸಕರ ಮೂಲಕವೇ ಜನತೆಗೆ ತಲುಪುವುದು ಎಂದು ಹೇಳುವ ಮೂಲಕ ಇದು ನನ್ನ ಸಾಧನೆ ಎಂದು ಒತ್ತಿ ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ತಿ.ರಂಗರಾಜು ಮಾತನಾಡಿ ವಿದ್ಯಾರ್ಥಿಗಳು, ಯುವ ಜನತೆಗಾಗಿ ಅಂಜನಾದ್ರಿ ಟ್ರಸ್ಟ್ ನಿರಂತರ ಶ್ರಮಿಸುತ್ತಿರುವುಸು ಶ್ಲಾಘನೀಯ, ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡಲಿ ಎಂದು ಆಶೀಸಿದರು.
ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು, ಅಂಜನಾದ್ರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿರಾಜು, ಸುಜಾತ, ಮುಖಂಡರಾದ ತಿ.ರಂಗರಾಜು, ಟಿವಿ ಲಕ್ಷ್ಮೀನಾರಾಯಣ, ಬಿಸಿ ನಾರಾಯಣಸ್ವಾಮಿ, ತಾಲ್ಲೂಕು ಅಧ್ಯಕ್ಷ ನಾಗೇಶ್, ನಗರಾಧ್ಯಕ್ಷ ಮುದ್ದಪ್ಪ, ಪುಷ್ಷಶಿವಶಂಕರ್, ವತ್ಸಲಾ, ಎನ್ ಕೆ ರಮೇಶ್, ಭಾಸ್ಕರ್, ಬಂತಿ ವೆಂಕಟೇಶ್, ಉಮಾಮಹೇಶ್ವರಿ, ಶಿವಾನಂದರೆಡ್ಡಿ, ರಾಜಗೋಪಾಲ ಮತ್ತಿತ್ತರು ಇದ್ದರು.