
ದೊಡ್ಡಬಳ್ಳಾಪುರ ( ಮಾ.05): ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ. ನಾರಾಯಣಗೌಡರ ಆದೇಶದ ಮೇರೆಗೆ ಇಂದು ನಮ್ಮ ತಾಲ್ಲೂಕಿನ ಅಂಗಡಿ, ಹೋಟಲ್ ಸೇರಿದಂತೆ ಹಲವು ಭಾಗಗಳಿಗೆ ಜಿಲ್ಲಾ ಸಮಿತಿಯ ಸಹಯೋಗದೊಂದಿಗೆ ಭೇಟಿ ನೀಡಿ ಕನ್ನಡ ಭಾಷೆಯ ನಾಮಫಲಕ ಅಳವಡಿಸುವಂತೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕರವೇ (ನಾರಾಯಣಗೌಡರ ಬಣ) ಜಿಲ್ಲಾಧ್ಯಕ್ಷರಾದ ಪುರುಷೋತ್ತಮ್ ಗೌಡ ತಿಳಿಸಿದರು
ಕನ್ನಡ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಮ್ಮ ನಾಡಿನಲ್ಲಿ ಜೀವನ ಕಟ್ಟಿಕೊಳ್ಳುವ ಹಲವರಿಗೆ ಕನ್ನಡ ಭಾಷೆ ಕುರಿತು ಅಸಡ್ಡೆ, ವಾಣಿಜ್ಯ ಕಾರಣಗಳಿಗಾಗಿ ನಮ್ಮ ಕನ್ನಡ ಭಾಷೆಯನ್ನು ಕಡೆಗಣಿಸಿ ಅನ್ಯಭಾಷೆಗಳನ್ನು ಬಳಸುವ ವ್ಯಾಪಾರಸ್ಥರ ವಿರುದ್ಧ ನಮ್ಮ ಹೋರಾಟ ನಮ್ಮ ಒತ್ತಾಯ ಸ್ಪಷ್ಟವಾಗಿದೆ. ಸರಕಾರದ ಆದೇಶದಂತೆ ಶೇಕಡಾ 60ರಷ್ಟು ಕನ್ನಡ ಬಳಸುವ ಮೂಲಕ ನಮ್ಮ ಭಾಷೆ ಕುರಿತು ಅಭಿಮಾನ ಮೂಡಬೇಕಿದೆ. ಈಗಾಗಲೇ ಕರ್ನಾಟಕ ಸರ್ಕಾರ ನಾಮಫಲಕಗಳನ್ನು ಬದಲಿಸುವಂತೆ ಆದೇಶ ನೀಡಿದ್ದರು. ಹಲವು ವ್ಯಾಪಾರಸ್ಥರು ಆ ಕುರಿತು ಗಮನಹರಿಸಿರುವುದಿಲ್ಲ. ಇಂದಿನ ನಮ್ಮ ಹೋರಾಟ ಸಂಕೇತಿಕವಾಗಿದ್ದು ವ್ಯಪಾರಸ್ಥರಿಗೆ ಕೊನೆಯ ಎಚ್ಚರಿಕೆ ನೀಡುತ್ತಿದ್ದೇವೆ. ಈಗಲೂ ಎಚ್ಚೆದ್ದುಕೊಳ್ಳದ ಪಕ್ಷದಲ್ಲಿ ಮುಂದೆ ನಮ್ಮ ಕರವೇ ಸೈನಿಕರು ಹೋರಾಟದ ಮೂಲಕ ಪಾಠ ಕಲಿಸಲಿದ್ದೇವೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆಯ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.