
ಮೈಸೂರು ಬಣ್ಣ ಮತ್ತು ಅರಗಿನ ಕಾರ್ಖಾನೆ MPVL ನ ಆಡಳಿತ ಮಂಡಳಿಯ ಮಹತ್ವದ ಸಭೆ.ರಾಜ್ಯದ ಪ್ರತಿಷ್ಠಿತ ಕಾರ್ಖಾನೆಗಳಲ್ಲಿ ಒಂದಾಗಿರುವ MPVL ಉತ್ಪಾದನೆ ಮತ್ತು ಆರ್ಥಿಕ ವಹಿವಾಟನ್ನು ಹೆಚ್ಚಿಸಿ, ಉದ್ದಿಮೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಅಗತ್ಯವಾದ ಕಾರ್ಯಕ್ರಮ ರೂಪಿಸುವಂತೆ ಅಧಿಕಾರಿಗಳಿಗೆ ಸರ್ಕಾರ ನಿರ್ದೇಶಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಸಂಪುಟ ಸಚಿವರಾದ ಎಂ. ಬಿ ಪಾಟೀಲ್ ತಿಳಿಸಿದರು.
ಈ ಕುರಿತು ಮಾತನಾಡಿದ ಅವರು ಕಾರ್ಖಾನೆಯು ಸದ್ಯಕ್ಕೆ ವಾರ್ಷಿಕ 34-35 ಕೋಟಿ ರೂ. ವಹಿವಾಟು ನಡೆಸುತ್ತಿದೆ. ಲೋಕಸಭಾ ಚುನಾವಣೆ ಕಾರಣ ಶಾಯಿ ತಯಾರಿಕೆಗೆ ಬೇಡಿಕೆ ಬಂದಿದ್ದು, ಈ ವರ್ಷ ವಹಿವಾಟು 77 ಕೋಟಿ ರೂ. ತಲುಪಲಿದೆ. ಸ್ಪರ್ಧಾತ್ಮಕವಾಗಿ ಮುಂದುವರೆಯಲು ಕಾರ್ಖಾನೆಗೆ ಹೆಚ್ಚಿನ ಶಕ್ತಿ ತುಂಬಲಾಗವುದು.
ಮನೆ ಗೋಡೆ ಬಣ್ಣಗಳನ್ನು ತಯಾರಿಸಲು ಸಹ ಸೂಚಿಸಿರುವೆ. ಮುಕ್ತ ಮಾರುಕಟ್ಟೆ ಅಲ್ಲದೆ, ಸರಕಾರಿ ಕಟ್ಟಡಗಳು, ಶಾಲಾ- ಕಾಲೇಜು, ಹಾಸ್ಟೆಲ್ ಗಳಿಗೆ ಬೇಕಾಗುವ ಬಣ್ಣ, ಎಮಲ್ಶನ್ ಇತ್ಯಾದಿಗಳನ್ನು ಈ ಕಾರ್ಖಾನೆಯಲ್ಲೇ ತಯಾರಿಸುವ ಚಿಂತನೆ ನಡೆಸಲಾಯಿತು. ಈ ಯೋಜನೆ ಅನುಷ್ಠಾನಗೊಳಿಸಲು ಬಣ್ಣಗಳ ಉದ್ಯಮದ ಪರಿಣತರೊಬ್ಬರನ್ನು ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲು ಅನುಮತಿ ನೀಡಲಾಗಿದೆ
`ಮೈಸೂರು ಪೇಂಟ್ಸ್ ಅನ್ನು ಬ್ರ್ಯಾಂಡ್ ಆಗಿ ಬೆಳೆಸಲಾಗುವುದು. KSDL ನ ಉತ್ಪನ್ನಗಳ ವಹಿವಾಟನ್ನು ವಿಸ್ತರಿಸಿರುವಂತೆ MPVL ನ್ನೂ ಹೊಸ ಸ್ತರಕ್ಕೆ ಕೊಂಡೊಯ್ಯಲು ಅಗತ್ಯದ ಸಿದ್ಧತೆಗಳನ್ನು ಆರಂಭಿಸಲಾಗಿದೆ ಎಂದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಎಸ್ ಸೆಲ್ವಕುಮಾರ್, ಮೈಸೂರು ಬಣ್ಣ ಮತ್ತು ಅರಗಿನ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮಹಮದ್ ಇರ್ಫಾನ್ ಉಪಸ್ಥಿತರಿದ್ದರು.