
ದೊಡ್ಡಬಳ್ಳಾಪುರ, ವಿಜಯಮಿತ್ರ ವರದಿ,ತಾಲ್ಲೂಕಿನ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಡೆಯುತ್ತಿರುವ ನಿರಂತರ ಅನ್ನ ದಾಸೋಹ ಕಾರ್ಯಕ್ರಮದಲ್ಲಿ ಗುರುರಾಜ್ ಪಾಟೀಲ್ ಹಾಗೂ ಗೆಳೆಯರು ತಮ್ಮ ವಿಶೇಷ ದಿನವನ್ನು ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ಆಚರಿಸಿದರು.
ಈ ಸಂದರ್ಭದಲ್ಲಿ ದಾನಿಗಳಾದ ಗುರುರಾಜ್ ಪಾಟೀಲ್ ಮಾತನಾಡಿ ಈ ಹಿಂದೆ ಹಲವು ಬಾರಿ ನನ್ನ ಹುಟ್ಟುಹಬ್ಬವನ್ನು ಹೊರಗಡೆ ಗೆಳೆಯರೊಂದಿಗೆ ಆಚರಣೆ ಮಾಡಿಕೊಂಡಿದ್ದೇನೆ. ಆದರೆ ಈ ಬಾರಿ ಗೆಳೆಯರ ಸಲಹೆ ಮೇರೆಗೆ ಅನ್ನದಾಸೋಹ ಸಮಿತಿ ಸಹಯೋಗದೊಂದಿಗೆ ಹಸಿದವರಿಗೆ ಊಟ ನೀಡುವ ಮೂಲಕ ಆಚರಿಸಿದ್ದು ಬಹಳ ಸಂತೋಷ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ದಾನಿಗಳಾದ ಪುನೀತ್ ಅಪ್ಪು ಮಾತನಾಡಿ ಮಲ್ಲೇಶ್ ಮತ್ತು ತಂಡದ ಉತ್ತಮ ಕಾರ್ಯಕ್ಕೆ ಇದು ನಮ್ಮೆಲ್ಲರ ಒಂದು ಸಣ್ಣ ಸಹಾಯವಾಗಿದೆ. ನನ್ನ ಮಗನ ಹುಟ್ಟುಹಬ್ಬವನ್ನು ಅನ್ನದಾಸೋಹ ಸಮಿತಿ ಒಟ್ಟಿಗೆ ಬಡವರಿಗೆ ಆಹಾರ ವಿತರಿಸುವ ಮೂಲಕ ಆಚರಿಸಿದ್ದೆವು ಈಗ ನಮ್ಮ ಗೆಳೆಯರಾದಂತಹ ಗುರುರಾಜ್ ರವರ ಹುಟ್ಟುಹಬ್ಬವನ್ನು ಸಹ ಇಲ್ಲೇ ಆಚರಿಸಲು ತೀರ್ಮಾನಿಸಿದ್ದು ನಮ್ಮೆಲ್ಲರಿಗೂ ಖುಷಿ ತಂದಿದೆ ಎಂದರು.
ವಿಶೇಷ ದಿನಗಳನ್ನು ಸಾವಿರಾರು ರೂಪಾಯಿ ಖರ್ಚು ಮಾಡುವ ಮೂಲಕ ವ್ಯರ್ಥ ಆಚರಣೆ ಮಾಡುವುದನ್ನು ನಿಲ್ಲಿಸಿ ಅಂತಹ ವಿಶೇಷ ದಿನಗಳನ್ನು ಹಸಿದವರಿಗೆ ಆಹಾರ ನೀಡುವ ಮೂಲಕ ಅನ್ನದಾಸೋಹ ಸಮಿತಿಯೋಟ್ಟಿಗೆ ಆಚರಿಸಿ, ಹಸಿವು ಮುಕ್ತ ಸಮಾಜಕ್ಕೆ ಸಹಕರಿಸಿ ಎಂದು ಕಾರ್ಯಕ್ರಮದ ಆಯೋಜಕ ಅನ್ನದಾಸೋಹಿ ಮಲ್ಲೇಶ್ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶಂಕರ್, ಗೌರಿಶಂಕರ್, ವಿಶ್ವನಾಥ್, ಉಮಾಪತಿ, ಹರೀಶ್ ಮಾರಸಂದ್ರ ಹಾಗೂ ವಿಜಯ್ ಪಾಲಂಜೋಗಳ್ಳಿ ಸೇರಿದಂತೆ ಹಲವು ಮುಖಂಡರು, ಅನ್ನದಾಸೋಹ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.