
ದೊಡ್ಡಬಳ್ಳಾಪುರ : ಎಲ್ಲೆಡೆ ವಿಶ್ವ ಪರಿಸರ ದಿನದ ಆಚರಣೆ ಮಾಡುತ್ತಿರುವ ಸಂದರ್ಭದಲ್ಲಿ ತಾಲೂಕಿನ ದೊಡ್ಡ ತುಮಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ಕೆರೆಗೆ ಇಳಿದು ವಿನೂತನ ರೀತಿಯ ಪ್ರತಿಭಟನೆ ಮಾಡಿದ್ದಾರೆ.
ತಾಲೂಕಿನ ನಗರಸಭೆ ಹಾಗೂ ಭಾಷೇಟ್ಟಿಹಳ್ಳಿ ಕಾರ್ಖಾನೆಗಳಿಂದ ದೊಡ್ಡ ತುಮಕೂರು ಕೆರೆ ಸೇರುತ್ತಿರುವ ತ್ಯಾಜ್ಯ ನೀರು ಅಂತರ್ಜಲ ಸೇರಿ ನೀರಿನ ಗುಣಮಟ್ಟ ಸಂಪೂರ್ಣ ಹಾಳಾಗಿದೆ . ಈ ಕುರಿತು ನಿರಂತರ ಪ್ರತಿಭಟನೆ ಹಾಗೂ ಹಲವು ಬಾರಿ ಮನವಿಗಳನ್ನು ಸಲ್ಲಿಸಿದರು ಸಹ ಯಾವುದೇ ಪ್ರಯೋಜನವಾಗಿಲ್ಲ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಕುರಿತು ಯಾವುದೇ ಕಾನೂನು ರೀತಿಯ ಕ್ರಮ ಕೈಗೊಂಡಿಲ್ಲ, ನಮ್ಮ ಜೀವದ ಜೊತೆ ಆಟವಾಡುತ್ತಿರುವ ಅಧಿಕಾರಿಗಳಿಗೆ ಪರಿಸರ ದಿನಾಚರಣೆ ಆಚರಿಸುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಗ್ರಾಮಸ್ಥರು ದೂರಿದರು.
ದೊಡ್ಡ ತುಮಕೂರು ಕೆರೆಯಲ್ಲಿ ಇಳಿದು ಗ್ರಾಮಸ್ಥರು ಅಧಿಕಾರಿಗಳಿಗೆ ಜಯ ಘೋಷ ಕೂಗುವ ಮೂಲಕ ವಿಶೇಷ ರೀತಿಯಲ್ಲಿ ಪ್ರತಿಭಟನೆ ಮಾಡಿದರು.
ಸ್ಥಳೀಯ ಕಾರ್ಖಾನೆಗಳ ತಾಜ್ಯ, ಹಾಗೂ ವಿಷಪೂರಿತ ರಾಸಾಯನಿಕ ಅಂಶವು ಕೆರೆಯ ನೀರಿನ ಮೂಲಕ ಅಂತರ್ಜಲಕ್ಕೆ ಸೇರುತ್ತಿದ್ದು. ನಿರಂತರ ಹೋರಾಟ ಮಾಡುವ ಮೂಲಕ ಹಲವಾರು ಮನವಿ ಗಳನ್ನು ಸಲ್ಲಿಸಿದ್ದರು ತಲೆ ಕೆಡೆಸಿಕೊಳ್ಳದ ಅಧಿಕಾರಿಗಳು ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.ಗ್ರಾಮಸ್ಥರ ಜೀವದ ಜೊತೆ ಚಲ್ಲಾಟವಾಡುತ್ತಿರುವ ಅಧಿಕಾರಿಗಳಿಗೆ ಪರಿಸರದಿನವನ್ನು ಆಚರಿಸುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಅರ್ಕಾವತಿ ನದಿ ಪಾತ್ರ ಹೋರಾಟ ಸಮಿತಿಯ ಮುಖಂಡ ವಸಂತ್ ಕುಮಾರ್ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರಾದ ಗಾಯಿತ್ರಿ ಮಾತನಾಡಿ ದೊಡ್ಡ ತುಮಕೂರು ಕೆರೆಗೆ ಸೇರುತ್ತಿರುವ ನೀರು ಸಂಪೂರ್ಣ ವಿಷಪೂರಿತವಾಗಿದ್ದು . ರಾಸಾಯನಿಕ ಅಂಶಗಳನ್ನು ಒಳಗೊಂಡಿದೆ. ನಮಗೆ ಕುಡಿಯಲು ಶುದ್ಧ ನೀರಿಲ್ಲ. ನೀರಿನ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಮನಸ್ಸಿಲ್ಲ, ನಮಗೆ ಮೂರನೇ ಹಂತದ ಶುದ್ಧೀಕರಣ ಘಟಕ ಪ್ರಾರಂಭವಾಗಬೇಕಿದೆ. ಕಲುಷಿತ ನೀರನ್ನು ಕುಡಿದು ಈಗಾಗಲೇ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಗ್ರಾಮಸ್ಥರು, ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿರುವ ಉದಾಹರಣೆಗಳು ಕೂಡ ಇದೆ. ಇನ್ನಾದರೂ ಅಧಿಕಾರಿಗಳು ಎಚ್ಚೆದ್ದು ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಮನಸ್ಸು ಮಾಡಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ರೈತ ಹೋರಾಟಗಾರ ಸತೀಶ್ ಮಾತನಾಡಿ ಹಲವಾರು ಮನವಿಗಳನ್ನು ನೀಡಿದ್ದೇವೆ. ನಮಗೂ ಸಾಕಾಗಿದೆ ಸ್ಥಳೀಯ ಅಧಿಕಾರಿಗಳಿಗೆ ಇದು ಕೊನೆಯ ಅವಕಾಶ ಆದಷ್ಟು ಬೇಗ ನಮ್ಮ ಗ್ರಾಮಸ್ಥರ ಉಳಿವಿಗಾಗಿ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸದೆ ಇದ್ದಲ್ಲಿ ಮುಂದೆ ಉಗ್ರವಾದ ಹೋರಾಟವನ್ನು ಎದುರಿಸಬೇಕಾಗಿದೆ. ನಮ್ಮ ಗ್ರಾಮಗಳಲ್ಲಿ ಪಶು ಪಕ್ಷಿಗಳು ಕುಡಿಯಲು ಶುದ್ಧ ನೀರಿಲ್ಲ, ಜಲ ಸಂಪನ್ಮೂಲಗಳು ಸಂಪೂರ್ಣ ಹಾಳಾಗಿದ್ದು, ಈ ಸಮಸ್ಯೆ ರಾಜ್ಯದ ಸಮಸ್ಯೆ ಆಗುವ ಮುನ್ನ ಅಧಿಕಾರಿಗಳು ಎಚ್ಚೆದ್ದುಕೊಂಡರೆ ಒಳ್ಳೆಯದು ಇಲ್ಲವಾದಲ್ಲಿ ಗ್ರಾಮಸ್ಥರು ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಆಶಾ, ಶ್ವೇತಾ, ರೂಪ ಚಂದ್ರಶೇಖರ್ , ತ್ರಿವೇಣಿ, ಕಲಾವತಿ, ವಿಜಯಲಕ್ಷ್ಮಿ ಸೇರಿದಂತೆ ಅರ್ಕಾವತಿ ನದಿ ಪಾತ್ರ ಹೋರಾಟ ಸಮಿತಿಯ ಸದಸ್ಯರು, ಸ್ಥಳೀಯ ರೈತರು ಗ್ರಾಮಸ್ಥರು ಉಪಸ್ಥಿತರಿದ್ದರು.