
ದೊಡ್ಡಬಳ್ಳಾಪುರ (ವಿಜಯಮಿತ್ರ ) : ಗೊಂಬೆಯಾಟವು ನಮ್ಮ ಸಾಹಿತ್ಯ, ಕಲೆ, ಸಂಗೀತ, ಸಂಸ್ಕೃತಿ ಪರಂಪರೆಯನ್ನು ಸಮಾಜಕ್ಕೆ ತಲುಪಿಸಲು ಸಹಕಾರಿ ಆಗುತ್ತದೆ. ಈ ಕಲೆ ಮನರಂಜನೆಗಷ್ಟೇ ಸೀಮಿತಗೊಳ್ಳದೆ ಜನರಲ್ಲಿ ಜಾಗೃತಿ ಮೂಡಿಸುತ್ತದೆ ಎಂದು ಗೊಂಬೆಯಾಟ ಕಲಾವಿದ ಮತ್ತು ತರಬೇತುದಾರ ಸಿದ್ದು ಬಿರಾದಾರ ತಿಳಿಸಿದರು.
ಅವರು ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯ ಸಿದ್ದಿಪ್ರಿಯ ವಿನಾಯಕ 15ನೇ ವಾರ್ಷಿಕ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಕನ್ನಡ ನಾಡಿನ ಅತ್ಯಂತ ಪ್ರಾಚೀನ ಕಲೆಗಳಲ್ಲಿ ಗೊಂಬೆಯಾಟಯು ಒಂದಾಗಿದೆ. ಶಾಸನ, ವಚನಗಳಲ್ಲಿ ಮತ್ತು ದಾಸರ ಹಾಡುಗಳಲ್ಲಿ ಗೊಂಬೆಯಾಟದ ಉಲ್ಲೇಖಗಳಿವೆ. ಗೊಂಬೆಯಾಟ ಜನಪದ ರಂಗಭೂಮಿಯ ಒಂದು ಚಮತ್ಕಾರಿ ಮತ್ತು ಆಕರ್ಷಕ ಕಲೆಯಾಗಿದೆ. ಸೂತ್ರಧಾರ ತೆರೆಯ ಮರೆಯಲ್ಲೆ ಇದ್ದು ಗೊಂಬೆಗಳಿಂದ ಅಭಿನಯ ಪ್ರದರ್ಶನ ಮಾಡುವ ವಿಶೇಷ ಕಲಾ ಪ್ರಕಾರವಾಗಿದೆ ಎಂದರು.
ವಿಶೇಷ ಗೊಂಬೆಯಾಟ ಪ್ರದರ್ಶನ : ಸೋಮೇಶ್ವರ ಬಡಾವಣೆಯ ಸಿದ್ದಿಪ್ರಿಯ ವಿನಾಯಕ 15 ನೇ ವಾರ್ಷಿಕೋತ್ಸವ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಹೊಂಗಿರಣ ಗೊಂಬೆಯಾಟ ತಂಡದ ಕಲಾವಿದರು ನಡೆಸಿಕೊಟ್ಟ ಪ್ರದರ್ಶನ ಪ್ರೇಕ್ಷಕರಿಗೆ ಆಕರ್ಷಣೆಯಾಗಿತ್ತು.
ರಾಮಾಯಣದ ಸೀತಾಪಹರಣ ಪ್ರಸಂಗ, ಮಹಾಭಾರತದ ಏಕಲವ್ಯ ಪ್ರಸಂಗ, ಐತಿಹಾಸಿಕವಾದ ಸಂಗೊಳ್ಳಿ ರಾಯಣ್ಣ ಪ್ರಸಂಗ, ಸಮಾಜಕ್ಕೆ ಶರಣರ ಕೊಡುಗೆ, ಮಕ್ಕಳ ಹಾಡುಗಳು ಸರಿದಂತೆ ಹಲವಾರು ಗೊಂಬೆಯಾಟದ ಪ್ರಸಂಗಗಳು ಮೆಚ್ಚುಗೆ ಪಡೆದವರು. ಹೊಂಗಿರಣ ಗೊಂಬೆಯಾಟ ಕಲಾ ತಂಡದ ಸಿದ್ದು ಬಿರಾದಾರ, ಸೂರಜ್, ವಿಜಯ ಕುಮಾರ್, ಪ್ರಜ್ವಲ್, ಅಕ್ಷತ್, ಗಣಪತಿ, ನಾರಾಯಣ್, ಓಂಕಾರ್ ಕಲಾವಿದರು ಗೊಂಬೆಯಾಟ ಪ್ರದರ್ಶನ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಡ್ಡರಹಳ್ಳಿ ರವಿಕುಮಾರ್, ನಗರಸಭಾ ಸದಸ್ಯ ಪದ್ಮನಾಭ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಹಾಲಿಂಗಯ್ಯ, ಸಿದ್ದಿಪ್ರಿಯ ವಿನಾಯಕ ಮಂಡಲಿಯ ವಿಶ್ವೇಶ್ವರಯ್ಯ, ಸೋಮಣ್ಣ, ಆನಂದ್, ಮನೋಹರ್, ಚೇತನ್, ವಿನೋದ್, ಚಂದನ್, ನವೀನ್, ಮಂಜುನಾಥ್, ಕಾರ್ತಿಕ್ ಮೊದಲಾದವರು ಭಾಗವಹಿಸಿದ್ದರು.