
ದೊಡ್ಡಬಳ್ಳಾಪುರ ಅ 02( ವಿಜಯಮಿತ್ರ): ದೇಶದಾದ್ಯಂತ ಗಾಂಧಿ ಜಯಂತಿ ಆಚರಣೆ ಮಾಡಲಾಗಿದೆ ಆದರೆ ದೊಡ್ಡ ತುಮಕೂರು ಗ್ರಾಮಸ್ಥರು ಶುದ್ಧ ನೀರಿಗಾಗಿ ಮಹಾತ್ಮ ಗಾಂಧೀಜಿಯವರ ಹೋರಾಟದ ಮಾರ್ಗವನ್ನು ಅನುಸರಿಸಿದ್ದಾರೆ. ಹೌದು ಗ್ರಾಮಸ್ಥರು ಕೆರೆಯಲ್ಲಿ ತೆಪ್ಪದ ಮೇಲೆ ಕೂತು ಉಪವಾಸ ಸತ್ಯಾಗ್ರಹ ನಡೆಸಿದರು,
ದೊಡ್ಡ ತುಮಕೂರು ಕೆರೆಯ ಸುತ್ತಮುತ್ತಲ ಹಳ್ಳಿಗಳಲ್ಲಿ ಮಳೆನೀರು ಕ್ಲೊಯು ಹಾಗೂ ಶುದ್ಧ ನೀರು ಕೊಡುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಅರ್ಕಾವತಿ ನದಿ ಪಾತ್ರದಲ್ಲಿ ಬರುವ ಕೆರೆಗಳು ಸಂಪೂರ್ಣ ವಿಷವಾಗಿವೆ, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಮತ್ತು ದೊಡ್ಡಬಳ್ಳಾಪುರ ನಗರದ ಒಳಚರಂಡಿ ನೀರು ಕೆರೆಯ ಒಡಲು ಸೇರಿ ಕುಲುಷಿತಗೊಂಡಿದೆ, ಕೆರೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ವಿಷವಾಗಿ ಮಾರ್ಪಟ್ಟಿದ್ದು, ಶುದ್ಧ ನೀರಿಗಾಗಿ ಗ್ರಾಮಸ್ಥರು ಹಲವಾರು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರು ಅಧಿಕಾರಿಗಳಿಗೆ ಈ ಕುರಿತು ಯಾವುದೇ ರೀತಿಯ ಕಾಳಜಿ ಇಲ್ಲ. ಕೊಡುವ ಭರವಸೆ ಕೇವಲ ಪತ್ರಗಳಿಗೆ ಸೀಮಿತವಾಗಿದೆ , ದೊಡ್ಡತುಮಕೂರು ಮತ್ತು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಸ್ಥರು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ , ಗ್ರಾಮಸ್ಥರ ಬೇಡಿಕೆಗಳು ಈಡೆರದ ಹಿನ್ನಲೆ ಗಾಂಧಿ ಜಯಂತಿ ದಿನವಾದ ಇಂದು ಗಾಂಧಿಜೀಯವರ ಹಾದಿಯಲ್ಲಿ ಸಂಕೇತಿಕ ಉಪವಾಸ ಸತ್ಯಾಗ್ರಹ ಮಾಡುವ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ರೈತ ಮುಖಂಡ ವಸಂತ್ ಕುಮಾರ್ ತಿಳಿಸಿದರು .
ಕಳೆದ ಮೂರು ವರ್ಷಗಳಿಂದ ಗಾಂಧಿ ತತ್ವದ ಮೇಲೆ ಸಂವಿಧಾನ ಬದ್ಧವಾಗಿ ಶಾಂತಿಯುತ ಹೋರಾಟ ಮಾಡುತ್ತಿದ್ದೇವೆ. ಅರ್ಕಾವತಿ ನದಿಯ ಜಲಮೂಲ ಸಂಪೂರ್ಣ ಕಲುಷಿತವಾಗಿದ್ದು ಸುಮಾರು ಒಂದು ಕೋಟಿಗೂ ಹೆಚ್ಚು ಜನರಿಗೆ ತೊಂದರೆಯಾಗುತ್ತಿದೆ, ಇದರ ಗಂಭೀರತೆ ಅಧಿಕಾರಿಗಳಿಗಿಲ್ಲ ಎಂದರು.
ಎರಡನೇ ಹಂತದ ಶುದ್ಧೀಕರಣ ಘಟಕ ಸ್ಫಾಪಿಸುವುದ್ದಾಗಿ ಭರವಸೆ ನೀಡಲಾಗಿತ್ತು. ಇಲ್ಲಿಯವರೆಗೂ STP ಘಟಕ ಕಾರ್ಯರೂಪಕ್ಕೆ ಬಂದಿಲ್ಲ, ಎರಡು ಗ್ರಾಮ ಪಂಚಾಯಿತಿಗಳ ಪ್ರತಿ ಮನೆಗೂ ಮಳೆನೀರು ಕ್ಲೊಯು ಪದ್ಧತಿ ಅಳವಡಿಸುವುದ್ದಾಗಿ ಹೇಳಿದರು, ಅನುದಾನವಿಲ್ಲ ಎಂದು ಮಳೆನೀರು ಕ್ಲೊಯು ಕೈ ಬಿಟ್ಟಿದ್ದಾರೆ, ನಮ್ಮ ಬೇಡಿಕೆ ಈಡೆರುವರೆಗೂ ನಾವು ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದರು.
ದೊಡ್ಡತುಮಕೂರು ಕೆರೆಯ ಬಳಿ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಹೋರಾಟಗಾರರು ಉಪವಾಸ ಸತ್ಯಾಗ್ರಹವನ್ನ ನಡೆಸಿದರು, ಕೆರೆಯಲ್ಲಿ ತೆಪ್ಪಗಳ ಮೇಲೆ ಕುಳಿತ ಹೋರಾಟಗಾರರು ಕೆರೆಯ ಜಲಮೂಲ ಉಳಿಸುವಂತೆ ಆಗ್ರಹಿಸಿ ಘೋಷಣೆಗಳನ್ನ ಕೂಗುವ ಮೂಲಕ ಸತ್ಯಾಗ್ರಹವನ್ನ ನಡೆಸಿದರು.
ಹೋರಾಟಗಾರ ಗಿರೀಶ್ ಮಾತನಾಡಿ, ಶುದ್ಧೀಕರಣ ಘಟಕ ಸ್ಫಾಪಿಸುವಂತೆ ಜಿಲ್ಲಾಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಆದರೆ ಇಲ್ಲಿಯವರೆಗೂ ಯಾವುದೇ ರೀತಿಯ ಕೆಲಸಗಳು ನಡೆದಿಲ್ಲ, ಬಾಶೆಟ್ಟಿಹಳ್ಳಿಯಲ್ಲಿ ಕೈಗಾರಿಕೆಗಳು ಸ್ಫಾಪನೆಯಾಗಿ 40 ವರ್ಷಗಳಾದರು ಮಾಲಿನ್ಯ ನಿಯಂತ್ರಣ ಕಛೇರಿ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರವಾಗಿಲ್ಲ, ಇಲ್ಲಿನ ಕೈಗಾರಿಕೆಗಳ ಬಗ್ಗೆ ದೂರು ನೀಡಿದ್ದಾರೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಅರ್ಕಾವತಿ ನದಿ ಹೋರಾಟ ಸಮಿತಿಯ ಮುಖಂಡರಾದ ಸತೀಶ್ ಮಾತನಾಡಿ, ಕಳೆದ 10 ವರ್ಷಗಳಿಂದ ಶುದ್ಧ ನೀರಿಗಾಗಿ ಹೋರಾಟ ಮಾಡುತ್ತಿದ್ದರು ಅಧಿಕಾರಿಗಳಿಂದ ಸೂಕ್ತ ಪ್ರತಿಫಲ ನಮಗೆ ಸಿಕ್ಕಿಲ್ಲ , ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ನಮ್ಮ ಕೆರೆಗಳು ಕಲುಷಿತವಾಗಿವೆ, ವಿಷಕಾರಿ ನೀರಿನ ಸೇವನೆಯಿಂದ ಗ್ರಾಮಸ್ಥರು ಅನಾರೋಗ್ಯದಿಂದ ಬಳಲುವಂತಾಗಿದೆ ಎಂದರು.
ಉಪವಾಸ ಸತ್ಯಾಗ್ರಹದಲ್ಲಿ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆಯ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.