
ದೊಡ್ಡಬಳ್ಳಾಪುರ: ನವ ಕರ್ನಾಟಕ ಯುವಶಕ್ತಿ ವೇದಿಕೆ ವತಿಯಿಂದ ರಾಷ್ಟ್ರೀಯ ರೈತ ದಿನವನ್ನು ರೈತರ ಪಾದ ಪೂಜೆ ಮಾಡುವ ಮೂಲಕ ವಿಶೇಷವಾಗಿ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದನಗಳ ಜಾತ್ರೆಯಲ್ಲಿ ಆಚರಿಸಲಾಗಿದೆ.
ಕಳೆದ ಮೂರು ದಿನಗಳಿಂದ ನಿರಂತರವಾಗಿ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಜಾನುವಾರುಗಳಿಗೆ ಉಚಿತ ಮೇವು ಮತ್ತು ನೀರು ವಿತರಣೆ ಮಾಡುವ ಕಾರ್ಯಕ್ರಮವನ್ನು ಹಳ್ಳಿ ರೈತ ಅಂಬರೀಶ್ ನೇತೃತ್ವದಲ್ಲಿ ನಡೆಸಲಾಗುತ್ತಿದ್ದು , ಡಿಸೆಂಬರ್ 23 ರಂದು ರಾಷ್ಟ್ರೀಯ ರೈತ ದಿನವನ್ನು ಐದು ಜಿಲ್ಲೆಗಳ ರೈತರಿಗೆ ಪಾದ ಪೂಜೆ ಮಾಡುವ ಮೂಲಕ ವಿಶೇಷವಾಗಿ ಆಚರಿಸಿದರು.
ಈ ಕುರಿತು ಮಾತನಾಡಿದ ಅವರು ಒಂದು ದೇಶದ ಭದ್ರತೆಗೆ ಸೈನಿಕ ಎಷ್ಟು ಮುಖ್ಯವೋ ದೇಶಕ್ಕೆ ಆಹಾರ ಒದಗಿಸುವ ಅನ್ನದಾತ ರೈತರು ಅಷ್ಟೇ ಮುಖ್ಯ, ರೈತರಿಗಾಗಿ ಈ ದಿನ ಮೀಸಲಿರುವುದು ಕೇವಲ ನಾಮ್ ಕಾ ವಾಸ್ತೆ ಆಗಬಾರದು, ದೇಶದ ಆರೋಗ್ಯವಂತ ಮಾನವ ಸಂಪನ್ಮೂಲ ಕಾಪಾಡುವಲ್ಲಿ ರೈತರ ಪಾತ್ರ ಪ್ರಮುಖವಾದದ್ದು, ಇಂದು ಸಾಂಕೇತಿಕವಾಗಿ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಯಲ್ಲಿ ರೈತರ ಪಾದಪೂಜೆ ಮಾಡುವ ಮುಖಾಂತರ ಹಳ್ಳಿ ರೈತರ ಪ್ರಾಮುಖ್ಯತೆಯನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನ ಮಾಡಿದ್ದೇವೆ. ಮುಂದೆ ರಾಜ್ಯ ಹಾಗೂ ದೇಶದಾದ್ಯಂತ ಪ್ರತಿ ಗ್ರಾಮದಲ್ಲೂ ರೈತರನ್ನು ಆರಾಧಿಸುವ ಪರಂಪರೆ ಪ್ರಾರಂಭವಾಗಲಿ, ಹಳ್ಳಿ ರೈತ ಉಳಿಯಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಭಾಗವಹಿಸಿ ಮಾತನಾಡಿದರು ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಯಲ್ಲಿ ಉಚಿತ ಮೇವು ಮತ್ತು ನೀರು ವಿತರಣೆಯ ಕಾರ್ಯ ಶ್ಲಾಘನೀಯ , ರೈತರ ಪಾದಪೂಜೆ ಮಾಡುವ ಮುಖಾಂತರ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿರುವ ನವ ಕರ್ನಾಟಕ ಯುವಶಕ್ತಿ ವೇದಿಕೆಯ ಅಂಬರೀಶ್ ಮತ್ತು ತಂಡಕ್ಕೆ ಶುಭವಾಗಲಿ , ರಾಜ್ಯದ ಅನ್ನದಾತರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸುವಂತಾಗಲಿ ಉತ್ತಮ ಯೋಜನೆಗಳನ್ನು ರೂಪಿಸುವ ಮೂಲಕ ರಾಜ್ಯದ ಪ್ರತಿ ಹಳ್ಳಿಯ ರೈತರಿಗೆ ಅನುಕೂಲ ಕಲ್ಪಿಸಲಿ ಎಂದರು.
ರೈತ ಮುಖಂಡ ರಾಜ್ಯ ಉಪಾಧ್ಯಕ್ಷ ಕೆಂಚೇಗೌಡ , ಹೊಸಕೋಟೆ ಅಕ್ಲೆಗೌಡ, ದೊಡ್ಡಬಳ್ಳಾಪುರ ಹನುಮೇಗೌಡ, ಕಾರ್ಯದರ್ಶಿ ಜಿಂಕೆಬಚ್ಚಳ್ಳಿ ಸತೀಶ್, ಮುಖಂಡರಾದ ವಾಸು, ಮುನಿರಾಯಣಪ್ಪ, ಸ್ಥಳೀಯ ಮುಖಂಡರಾದ ಉದಯ ಆರಾಧ್ಯ ಸೇರಿದಂತೆ ರೈತ ಸಂಘ ಮತ್ತು ಹಸಿರು ಸೇನೆಯ 4 ತಾಲೂಕಿನ ಪದಾಧಿಕಾರಿಗಳು, ಸದಸ್ಯರು, ನವ ಕರ್ನಾಟಕ ಯುವಶಕ್ತಿ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.