
ದೊಡ್ಡಬಳ್ಳಾಪುರ : ಶಸ್ತ್ರಚಿಕಿತ್ಸೆಗೆಂದು ಅಮೇರಿಕಾ ಗೆ ತೆರಲಿರುವ ನಟ ಶಿವರಾಜ್ ಕುಮಾರ್ ಬೇಗ ಗುಣಮುಖರಾಗಿ ಭಾರತಕ್ಕೆ ಆಗಮಿಸಲಿ ಎಂದು ಸಂಕಲ್ಪಿಸಿ ತಾಲ್ಲೂಕು ಶಿವರಾಜ್ ಕುಮಾರ್ ಅಭಿಮಾನಿಗಳ ವತಿಯಿಂದ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.
ಈ ಕುರಿತು ಮುಖಂಡರಾದ ಚೌಡರಾಜ್ ಮಾತನಾಡಿ ಘಾಟಿ ಸುಬ್ರಮಣ್ಯ ದೇವಾಲಯಕ್ಕೂ ರಾಜ್ ಕುಮಾರ್ ಕುಟುಂಬಕ್ಕೂ ಅವಿನಾಭವ ಸಂಬಂಧವಿದೆ, ದೊರೆ,ನಂಜುಂಡಿ, ನಮ್ಮೂರು ಹುಡ್ಗ ಸೇರಿದಂತೆ ಹಲವು ಚಿತ್ರಗಳ ಚಿತ್ರೀಕರಣ ಸಂದರ್ಭದಲ್ಲಿ ಭಾಗವಹಿಸಿದರು, ಅಭಿಮಾನಿಗಳ ಆರಾಧ್ಯ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆದಷ್ಟು ಬೇಗ ಗುಣಮುಖರಾಗಿ ಭಾರತಕ್ಕೆ ಹಿಂದಿರುಗಲಿ ಎಂದು ಸಂಕಲ್ಪಿಸಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದೇವೆ, ಎಂದರು.
ಸ್ಥಳೀಯ ಮುಖಂಡ ಹಳ್ಳಿ ರೈತ ಮಾತನಾಡಿ ಕನ್ನಡ ಚಲನಚಿತ್ರದ ಪ್ರಮುಖ ನಟರಾದ ಡಾ. ಶಿವರಾಜ್ ಕುಮಾರ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಸಂಕಲ್ಪಿಸಿದ್ದೇವೆ. ಘಾಟಿ ಸುಬ್ರಮಣ್ಯ ದೇವರ ಆಶೀರ್ವಾದದೊಂದಿಗೆ ಶೀಘ್ರಗತಿಯಲ್ಲಿ ಭಾರತಕ್ಕೆ ಆರೋಗ್ಯವಂತರಾಗಿ ಬರಲಿ ಎಂದಿನಂತೆ ಸಿನಿಮಾ ರಂಗದಲ್ಲಿ ಎಂದಿನಂತೆ ಕ್ರಿಯಾಶೀಲರಾಗಿ ಪಾಲ್ಗೊಳ್ಳುವಂತಾಗಲಿ ಎಂದರು.
ರಾಜ್ಯದ ಹೆಮ್ಮೆಯ ಕೆ ಎಂ ಎಫ್ ಸಂಸ್ಥೆಗೆ ರಾಯಭಾರಿಗಳಾಗಿ ಸದಾ ರೈತರ ಬೆನ್ನುಬಾಗಿ ನಿಂತಿರುವ ರಾಜ್ ಕುಮಾರ್ ಕುಟುಂಬಕ್ಕೆ ರಾಜ್ಯದ ಎಲ್ಲಾ ಹಳ್ಳಿ ರೈತರ ಶುಭ ಹಾರೈಕೆ ಸದಾ ಇರುತ್ತದೆ, ಘಾಟಿ ಸುಬ್ರಮಣ್ಯ ದನಗಳ ಜಾತ್ರೆ ಅಂಗವಾಗಿ ಉಚಿತ ಮೇವು ವಿತರಣೆಗೆ ಬೆಂಬಲವಾಗಿ ಒಂದು ಲೋಡ್ ಮೇವು ನೀಡಿರುವ ರಾಜ್ ಕುಟುಂಬದ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು
ಈ ಸಂದರ್ಭದಲ್ಲಿ ತಾಲ್ಲೂಕಿನ ಶಿವರಾಜ್ ಕುಮಾರ್ ಅಭಿಮಾನಿಗಳು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.