
ದೊಡ್ಡಬಳ್ಳಾಪುರ :ನಗರದಲ್ಲಿ ರೇಷ್ಮೆ ಬಣ್ಣ ಮಾಡುವ ಘಟಕಗಳು ಮಾಲಿನ್ಯಕಾರಕ ಎಂದು ನಗರಸಭೆಯಿಂದ ನೋಟೀಸ್ ನೀಡಿ ಘಟಕಗಳನ್ನು ಮುಚ್ಚಲು ಹೊರಟಿರುವ ಕ್ರಮದಿಂದ ನೇಕಾರಿಕೆ ಸಂಕಷ್ಟ ಎದುರಾಗಲಿದ್ದು,ನಗರಸಭೆ ಈ ಬಗ್ಗೆ ಕ್ರಮ ಕೈಗೊಂಡು ರೇಷ್ಮೆ ಮತ್ತು ಕೃತಕ ರೇಷ್ಮೆ ಬಣ್ಣ ಮಾಡುವ ಘಟಕಗಳಿಗೆ ಬಣ್ಣದ ನೀರು ಸಂಸ್ಕರಣಾ ಘಟಕವನ್ನು ನಿರ್ಮಾಣ ಮಾಡಿಕೊಡಬೇಕೆಂದು ಒತ್ತಾಯಿಸಿ, ನೇಕಾರರ ಹೋರಾಟ ಸಮಿತಿ ನೇತೃತ್ವದಲ್ಲಿ ನೇಕಾರರು ಹಾಗೂ ಬಣ್ಣದ ಘಟಕಗಳ ಮಾಲೀಕರು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಈ ವೇಳೆ ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತ ರಾಜು ಮಾತನಾಡಿ, ಕೆಲವು ವರ್ಷಗಳಿಂದ ರೇಷ್ಮೆ ಬಣ್ಣ ಮಾಡಿದ ನೀರು ಕೆರೆಗಳಿಗೆ ಸೇರಿ ಕೆರೆಯ ನೀರು ಮಲೀನವಾಗುತ್ತಿದೆ ಎಂದು ನಗರಸಭೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಲಿಯವರು ಬಣ್ಣ ಮಾಡುವ ಘಟಕದ ಮಾಲಿಕರಿಗೆ ನೋಟಿಸ್ ನೀಡುವುದರ ಮೂಲಕ ಎಚ್ಚರಿಕೆಯನ್ನು ಕೋಡುತ್ತಿದ್ದು, ಕಳೆದವಾರ ಅಂತಿಮ ನೋಟಿಸ್ ನೀಡಿದ್ದು ಹೀಗೆ ಮುಂದುವರೆದರೆ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ . ರೇಷ್ಮೆ ಬಣ್ಣ ಮಾಡುವ ಘಟಕಗಳು ಏಳೆಂಟು ದಶಕಗಳಿಂದಲೂ ನಡೆದುಕೊಂಡು ಬಂದಿದೆ. ಬಣ್ಣದ ಘಟಕಗಳಿಂದ ಬಣ್ಣ ಹಚ್ಚಿದ ರೇಷ್ಮೆ ಮತ್ತು ಕೃತಕ ರೇಷ್ಮೆ ಸೀರೆ ನೇಯಲು ಉಪಯೋಗಿಸುತ್ತಿದ್ದರು. ದೊಡ್ಡಬಳ್ಳಾಪುರ ನಗರದಲ್ಲಿ ಸಾವಿರಾರು ಮಗ್ಗಗಳು ಇದರ ಮೇಲೆ ಅವಲಂಬಿತವಾಗಿದೆ ಬಣ್ಣ ಘಟಕದ ಮಾಲೀಕರು ಸ್ವಂತ ಮನೆ ಮತ್ತು ಭೂಮಿ ಹೊಂದಿರುವುದಿಲ್ಲ. ಬಹು ಪಾಲು ಜನ ನೆರೆ ರಾಜ್ಯಗಳಿಂದ ಬಂದು ಇಲ್ಲಿ ಜೀವನೋಪಾಯಕ್ಕಾಗಿ ಈ ವೃತ್ತಿಯಲ್ಲಿ ನಿರತರಾಗಿದ್ದಾರೆ ಇವರೆಲ್ಲ, ತುಂಬಾ ಬಡವರಾಗಿದ್ದು ಬಾಡಿಗೆ ಮನೆಯಲ್ಲಿ ಮತ್ತು ಬಾಡಿಗೆ ಜಾಗದಲ್ಲಿ ಜೋಪಡಿಗಳನ್ನು ಹಾಕಿಕೊಂಡು ವೃತ್ತಿ ನಡೆಸುತ್ತಿದ್ದಾರೆ ಕಳೆದ ಎಪ್ಪತೈದು ವರ್ಷಗಳಿಂದ ನಡೆಯುತ್ತಿದ್ದು ಇಷ್ಟು ವರ್ಷಗಳು ಬಣ್ಣ ತೊಳೆದ ನೀರಿನಿಂದ ಪರಿಸರ ಮಾಲಿನ್ಯ ಆಗದೇ ಇರುವುದು ಈಗ ಪರಿಸರ ಮಾಲಿನ್ಯದ ಪ್ರಶ್ನೆ ಮುಂದಿಟ್ಟ ಇಲಾಖೆಗಳು ನಮಗೆ ತೊಂದರೆ ಕೊಡುತ್ತಿರುವುದು ನೋಡಿದರೆ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತಾಗಿದೆ. ನಗರದಲ್ಲಿ ನಿತ್ಯ ಕೆಲಸ ಮಾಡುವ ಐದಾರು ಘಟಕಗಳಿವೆ. ಇನ್ನು ಇಲ್ಲಿಂದ ಹೊರಬರುವ ತ್ಯಾಜ್ಯ ನೀರು ಮೂಲಕ ಎಂಟು ಕಿ.ಮೀ ದೂರದಲ್ಲಿರುವ ಕೆರೆಗೆ ಹೋಗುತ್ತದೆ ಎಂಬ ವಾದವು ಸರಿಯಿಲ್ಲ, ಚಿಕ್ಕತುಮಕೂರು ಕೆರೆಗೆ ಕೈಗಾರಿಕಾ ತ್ಯಾಜ್ಯ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದು, ರೇಷ್ಮೆ ಬಣ್ಣದ ಘಟಕಗಳ ಪ್ರಮಾಣ ತೀರ ಅಲ್ಪವಾಗಿದೆ. ಈ ಬಣ್ಣದ ನೀರು ಇಷ್ಟು ದೂರ ಸಾಗುವ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. ನಮಗೂ ಸಹ ಜೀವ ಜಲವನ್ನು ಮಲಿನ ಮಾಡಲು ಇಷ್ಟವಿಲ್ಲ. ಘಟಕಗಳಿಂದ ಬಣ್ಣದ ನೀರನ್ನು ಸಂಸ್ಕರಿಸಿ ಕಾಲುವೆಗೆ ಬಿಡಿಯೆಂದು ಅಧಿಕಾರಿಗಳು ಹೇಳುತ್ತಿದ್ದು, ಸಂಸ್ಕರಣಾ ಘಟಕಗಳನ್ನು ಮಾಡಿಕೊಳ್ಳಲು ಸಾಧ್ಯವಿಲ್ಲದ ಕಾರಣ ಇಲಾಖೆಗಳು ಒಂದೇ ಕಡೆ ಸಂಸ್ಕರಣಾ ಘಟಕವನ್ನು ನಿರ್ಮಾಣ ಮಾಡಿಕೊಟ್ಟರೆ ಅನುಕೂಲವಾಗಲಿದೆ ಎಂದರು.
ಬಣ್ಣದ ಘಟಕದ ಮಾಲೀಕ ನಟರಾಜ್, ಸಾಯಿರಾಂ ಮಾತನಾಡಿ, ರೇಷ್ಮೆ ಬಣ್ಣ ಮಾಡುವ ಘಟಕಗಳು ಗುಡಿ ಕೈಗಾರಿಕೆಯಾಗಿದ್ದು, ಇದು ಸಹ ನೇಕಾರಿಕೆಯ ಒಂದು ಅಂಗವಾಗಿದೆ. ಮುಖ್ಯವಾಗಿ ಇದರಲ್ಲಿ ಯಾವುದೇ ಅಪಾಯಕರ ರಾಸಾಯನಿಕಗಳು ಇಲ್ಲ. ಈ ಸಮಸ್ಯೆಗೆ ಪರಿಹಾರ ಸೂಚಿಸಬೇಕು ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್, ಕೆರೆ ಮಲಿನವಾಗುತ್ತಿರುವ ಕುರಿತು ದೂರುಗಳ ಬಂದ ಹಿನ್ನಲೆಯಲ್ಲಿ ಜಿಲ್ಲಾಕಾರಿಗಳ ಸಭೆಯ ಸೂಚನೆಯಂತೆ ಕ್ರಮ ಕೈಗೊಳ್ಳಲಾಗಿದೆ. ರೇಷ್ಮೆ ಬಣ್ಣದ ಘಟಕಗಳ ಮಾಲಿನ್ಯ ಪ್ರಮಾಣ ಕಡಿಮೆಯಿದೆ ಎನ್ನುವುದಕ್ಕೆ ವೈಜ್ಞಾನಿಕವಾಗಿ ಸಾಬೀತಾಗುವಂತೆ ಪರೀಕ್ಷೆ ನಡೆಸಲಾಗುವುದು. ನೇಕಾರರು ಹಾಗೂ ಮಾಲಿನ್ಯ ನಿಯಂತ್ರಣ ಮಂಡಲಿ ಅಕಾರಿಗಳೊಂದಿಗೆ ಚರ್ಚಿಸಿ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಈ ವೇಳೆ ನೇಕಾರರ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷರಾದ ಕೆ.ಜಿ.ಗೋಪಾಲ್, ಎನ್.ಲೋಕೇಶ್, ಉಪಾಧ್ಯಕ್ಷರಾದ ಎಸ್.ಎನ್.ಶಿವರಾಂ ಸಂಜೀವಪ್ಪ, ಕರ್ಯದರ್ಶಿ ರಮೇಶ್ ರೆಡ್ಡಿ ಖಜಾಂಚಿ ರಂಗಸ್ವಾಮಿ, ಬಣ್ಣದ ಘಟಕದ ಮಾಲೀಕರಾದ ಗೋವಿಂದಪ್ಪ, ರಾಮಚಂದ್ರಪ್ಪ ಹಾಜರಿದ್ದರು