
ಬೆಂ.ಗ್ರಾ.ಜಿಲ್ಲೆ, ಫೆ. 07:- ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ ದೇವನಹಳ್ಳಿ ತಾಲೂಕಿನ ಬೊಮ್ಮವಾರದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ರೈತರಿಗಾಗಿ 2024-25ನೇ ಸಾಲಿನ ಅಟಲ್ ಭೂಜಲ್ ಯೋಜನೆಯ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ತರಬೇತಿಯಲ್ಲಿ ದೇವನಹಳ್ಳಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಮತಿ ಸುಶೀಲಮ್ಮ ಅವರು ಆಟಲ್ ಭೂಜಲ್ ಯೋಜನೆಯಡಿ (ABY) ಸಮುದಾಯ ಸಹಭಾಗಿತ್ವದೊಂದಿಗೆ ಅಂತರ್ಜಲ ನಿರ್ವಹಣೆ, ಜಲ ಭದ್ರತಾ ಯೋಜನೆ ಸಿದ್ದಪಡಿಸುವುದು, ನೀರಿನ ಬಳಕೆ ಕಡಿಮೆ ಮಾಡುವ ಸೂಕ್ಷ್ಮ ನೀರಾವರಿ ತಾಂತ್ರಿಕತೆಗಳು ಮತ್ತು ನೀರಿನ ಮರು ಪೂರೈಕೆ ಕ್ರಮಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.
ತರಬೇತಿಯಲ್ಲಿ ಅಟಲ್ ಭೂಜಲ್ ಯೋಜನೆಯಡಿ ಕರ್ನಾಟಕದ 14 ಜಿಲ್ಲೆಗಳ, 41 ತಾಲ್ಲೂಕುಗಳಲ್ಲಿ ಬರುವಂತಹ 1199 ಗ್ರಾಮ ಪಂಚಾಯತಿಗಳಲ್ಲಿ ಅಟಲ್ ಭೂಜಲ ಯೋಜನೆ ಅನುಷಾನಗೊಳ್ಳುತ್ತಿದ್ದು, ಅಂತರ್ಜಲದ ಅತಿಬಳಕೆಯನ್ನು ಕಡಿಮೆ ಮಾಡುವುದು. ಅಂತರ್ಜಲದ ಸುಸ್ಥಿರ ನಿರ್ವಹಣೆ, ಸಮುದಾಯ ಸಹಭಾಗಿತ್ವದೊಂದಿಗೆ ಅಂತರ್ಜಲ ನಿರ್ವಹಣೆ, ಜಲಭದ್ರತಾಯೋಜನೆ ಸಿದ್ದಪಡಿಸುವುದು ನೀರಿನ ಬಳಕೆ ಕಡಿಮೆ ಮಾಡುವ ಸೂಕ್ಷ್ಮ ನೀರಾವರಿ ತಾಂತ್ರಿಕತೆಗಳು ಮತ್ತು ನೀರಿನ ಮರು ಪೂರೈಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಅಟಲ್ ಭೂಜಲ್ ಯೋಜನೆಯ ಹಿರಿಯ ಭೂವಿಜ್ಞಾನಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೋಡಲ್ ಅಧಿಕಾರಿ ಶ್ರೀಮತಿ ಪಲ್ಲವಿ, ತಾಂತ್ರಿಕ ಸಹಾಯಕರಾದ ನಿಷಿತ, ಕೃಷಿ ತಜ್ಞೆ ದೀಪ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಲಾಖೆ ಅಂತರಜಲ ತಜ್ಞರಾದ ಮೋಹನ್, ಜೈನ್ ನೀರಾವರಿ ಸಂಸ್ಥೆಯ ತೋಷಿತ್ ರೈ, ಜೈರಾಮ್, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆರ್.ಕೆ. ಶಾಲಾದ, ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಮತಿ ಸುಮಂಗಲ, ಕೃಷಿ ಅಧಿಕಾರಿ ಸತ್ಯನಾರಾಯಣ ಸೇರಿದಂತೆ ದೇವನಹಳ್ಳಿ ತಾಲ್ಲೂಕಿನ ಸಿಬ್ಬಂದಿಗಳು ಹಾಗೂ ಸುತ್ತಮುತ್ತಲಿನ ಹತ್ತಾರು ಗ್ರಾಮದ ರೈತರು ಉಪಸ್ಥಿತರಿದ್ದರು.