
ಕರ್ನಾಟಕ : ವಯಸ್ಸಾದವರು, ವಿಕಲಚೇತನರು, ಒಬ್ಬಂಟಿಗರು ಒಳಗೊಂಡಂತೆ ನಗರ, ಗ್ರಾಮೀಣ ಹಾಗೂ ಹೊರರಾಜ್ಯದ ಭಕ್ತಾದಿಗಳಿಗೆ ಅನುಕೂಲವಾಗುವಂತೆ ವೆಬ್ಸೈಟ್ ಮೂಲಕ ಸುಮಾರು 14 ಪ್ರಮುಖ ದೇವಾಲಯಗಳಿಂದ ಪ್ರಸಾದವನ್ನು https://csc.devalayas.com/ ವೆಬ್ ಸೈಟ್ ಮೂಲಕ ಆನ್ಲೈನ್ ನಲ್ಲಿ ಆರ್ಡರ್ ಮಾಡಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಹೌದು ಧಾರ್ಮಿಕ ದತ್ತಿ ಇಲಾಖೆಯಡಿ 35 ಸಾವಿರಕ್ಕೂ ಹೆಚ್ಚು ದೇವಾಲಯಗಳಿವೆ. ಅವುಗಳಲ್ಲಿ ʼಎʼ ಮತ್ತು ʼಬಿʼ ದರ್ಜೆಯ 390 ದೇವಾಲಯಗಳಿವೆ. ಭಕ್ತಾದಿಗಳು ʼಇ-ಪ್ರಸಾದʼ ವೆಬ್ಸೈಟ್ ಮೂಲಕ ಮೊದಲ ಹಂತದಲ್ಲಿ 14 ಪ್ರಮುಖ ದೇವಾಲಯಗಳಿಂದ ಪ್ರಸಾದವನ್ನು ಆನ್ಲೈನ್ ಮೂಲಕ ಆರ್ಡರ್ ಮಾಡಿ ಪಡೆಯಲು ಅನುಕೂಲ ಕಲ್ಪಿಸಲಾಗಿದೆ.
ಈ ಕುರಿತು ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ಅವರು ಮಾತನಾಡಿ“ನಾನಾ ಕಾರಣಗಳಿಂದಾಗಿ ಎಲ್ಲರಿಗೂ ದೇವಸ್ಥಾನಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ವಯಸ್ಸಾದವರು, ವಿಶೇಷ ಚೇತನರು, ಒಬ್ಬಂಟಿಗರು ಒಳಗೊಂಡಂತೆ ಗ್ರಾಮೀಣ, ನಗರ ಹಾಗೂ ಹೊರ ರಾಜ್ಯದ ಭಕ್ತಾದಿಗಳ ಅನುಕೂಲಕ್ಕಾಗಿ ʼಇ-ಪ್ರಸಾದʼ ಸೇವೆ ಆರಂಭಿಸಲಾಗಿದೆ. ರಾಜ್ಯದ ಯಾವುದೇ ಭಾಗದ ಭಕ್ತಾದಿಗಳು ಪ್ರಸಾದಕ್ಕೆ ಆರ್ಡರ್ ಮಾಡಿದರೆ ಸಿಎಸ್ಸಿ ಇ ಗವರ್ನೆನ್ಸ್ ಸಂಸ್ಥೆಯು ಮನೆ ಬಾಗಿಲಿಗೆ ತಲುಪಿಸಲಿದೆ” ಎಂದು ತಿಳಿಸಿದ್ದಾರೆ.
ಯಾವೆಲ್ಲ ದೇವಾಲಯಗಳ ಪ್ರಸಾದ ಲಭ್ಯ…
ವಿನಾಯಕ ಸ್ವಾಮಿ ದೇವಾಲಯ ಜಯನಗರ, ಬೆಂಗಳೂರು. ಚಲುವನಾರಾಯಣ ಸ್ವಾಮಿ ದೇಗುಲ, ಮೇಲುಕೋಟೆ. ಶ್ರೀಕಂಠೇಶ್ವರ ಸ್ವಾಮಿ ದೇವಾಲಯ ನಂಜನಗೂಡು, ಮೈಸೂರು.ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯ ಮಾಲೂರು, ಕೋಲಾರ. ಸೋಮೇಶ್ವರ ಸ್ವಾಮಿ ದೇವಾಲಯ ಹಲಸೂರು, ಬೆಂಗಳೂರು. ಮೂಕಾಂಬಿಕಾ ದೇವಾಲಯ ಕೊಲ್ಲೂರು, ಉಡುಪಿ. ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಬೆಂಗಳೂರು.ಶ್ರೀ ಕ್ಷೇತ್ರ ಝರಣಿ ನರಸಿಂಹ ದೇವಸ್ಥಾನ, ಬೀದರ್.ರೇಣುಕಾ ಯಲ್ಲಮ್ಮ ದೇವಸ್ಥಾನ ಸವದತ್ತಿ, ಬೆಳಗಾವಿ.ಕುಕ್ಕೆ ಸುಬ್ರಹ್ಮಣ್ಯ ದೇವಾಲಯ, ದಕ್ಷಿಣ ಕನ್ನಡ. ಕನಕದುರ್ಗಮ್ಮ ದೇವಾಲಯ, ಬಳ್ಳಾರಿ. ಮೈಲಾರಲಿಂಗೇಶ್ವರ ದೇವಸ್ಥಾನ, ವಿಜಯನಗರ. ಹುಲಿಗೆಮ್ಮ ದೇವಾಲಯ, ಕೊಪ್ಪಳ.ಗುರುದತ್ತಾತ್ತೇಯ ಸ್ವಾಮಿ ದೇವಾಲಯ, ಕಲ್ಬುರ್ಗಿ ದೇವಾಲಯಗಳ ಪ್ರಸಾದಗಳು ಲಭ್ಯ.