
ಬೆಂಗಳೂರು ಗ್ರಾಮಾಂತರ ಜಿಲ್ಲೆ : ಜಿಲ್ಲೆಯ ನೆಲಮಂಗಲ, ಸೋಲೂರು, ದಾಬಸ್ ಪೇಟೆ ಮತ್ತು ಬೇಗೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಇಂದು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಸಚಿವರಾದ ದಿನೇಶ್ ಗುಂಡೂರಾವ್ ಅವರು, ಸಾರ್ವಜನಿಕರಿಗೆ ಉತ್ತಮ ಆರೋಗ್ಯವನ್ನು ಒದಗಿಸುವ ನಿಟ್ಟಿನಲ್ಲಿ ಆಸ್ಪತ್ರೆಗಳ ಪಾತ್ರ ಬಹಳ ಮುಖ್ಯ, ಆಸ್ಪತ್ರೆಗಳಲ್ಲಿ ಎಲ್ಲಾ ಮೂಲಭೂತ, ಔಷಧೋಪಚಾರ ಸೌಕರ್ಯ ಇರಬೇಕು. ಹಾಗಾಗಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡಲು ನಮ್ಮ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ.
ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ಸೋಲೂರು ಮತ್ತು ದಾಬಸ್ ಪೇಟೆ , ಬೇಗೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ರೋಗಿಗಳಿಂದ, ವೈದ್ಯರಿಂದ ಅಭಿಪ್ರಾಯ, ಮಾಹಿತಿ ಪಡೆದ ಸಚಿವರು ಅಸ್ಪತ್ರೆಗಳಿಗೆ ಅವಶ್ಯಕತೆ ಇರುವ ಸೌಲಭ್ಯಗಳನ್ನು ಒದಗಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.
*42 ಕೋಟಿ ವೆಚ್ಚದಲ್ಲಿ ಹೊಸ ತಾಲ್ಲೂಕು ಆಸ್ಪತ್ರೆ ನಿರ್ಮಾಣ*
ಕಳೆದ ಆಯವ್ಯಯ ಬಜೆಟ್ ನಲ್ಲಿ ನೆಲಮಂಗಲ ಹಾಗೂ ಹೊಸಕೋಟೆ ಸಾರ್ವಜನಿಕ ಆಸ್ಪತ್ರೆ ನಿರ್ಮಾಣಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಬಳಿ ನಾವು ತಿಳಿಸಿದಾಗ ಆಸ್ಪತ್ರೆಗಳ ನಿರ್ಮಾಣಕ್ಕೆ ಹಣ ಮೀಸಲಿರಿಸಿದ್ದಾರೆ. ಇದು ಖುಷಿಯ ವಿಚಾರವಾಗಿದೆ.
ನೆಲಮಂಗಲ ತಾಲ್ಲೂಕು ಆಸ್ಪತ್ರೆಯು ಹಳೆಯದಾಗಿದೆ, ಸಮಯಕ್ಕೆ ನೀಡಬೇಕಾದ ಸೇವೆಗಳನ್ನು ಒದಗಿಸಲು ಆಗುತ್ತಿಲ್ಲ, ಇಲ್ಲಿ ಪ್ರತಿನಿತ್ಯ ನೂರಾರು ರೋಗಿಗಳು ಚಿಕಿತ್ಸೆ ಪಡೆಯಲು ದೂರದ ಹಳ್ಳಿಗಳಿಂದ ಜನರು ಬರುತ್ತಾರೆ.
ಆದ್ದರಿಂದ ಈಗಿರುವ ಸ್ಥಳದಲ್ಲಿ ಆಸ್ಪತ್ರೆ ನಿರ್ಮಿಸಲು ಜಾಗ ಸಾಕಾಗುವುದಿಲ್ಲ, ಹಾಗಾಗಿ ಆದಷ್ಟು ಬೇಗ ಜನರಿಗೆ ಹತ್ತಿರವಾಗುವ ಸ್ಥಳವನ್ನು ಗುರ್ತಿಸಿ ತಾಲ್ಲೂಕು ಆಸ್ಪತ್ರೆ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಮಾಡುತ್ತೇವೆ. ಇನ್ನೂ ಒಂದೆರಡು ತಿಂಗಳೊಳಗೆ ಕಾಮಗಾರಿಯನ್ನು ಪ್ರಾರಂಭ ಮಾಡುತ್ತೇವೆ. ಪ್ರಸ್ತುತ ಇರುವ ಆಸ್ಪತ್ರೆಯನ್ನು ಹೊಸದಾಗಿ ನವೀಕರಣ ಮಾಡಿ, ಬೇರೆ ಕೆಲಸಗಳಿಗೆ ಬಳಸಿಕೊಳ್ಳಲಾಗುವುದು ಎಂದರು.
ನೆಲಮಂಗಲ ಶಾಸಕರಾದ ಶ್ರೀನಿವಾಸ್, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಮತ್ತು ಕಾರ್ಯಕರ್ತರು, ಅಧಿಕಾರಿಗಳು ಉಪಸ್ಥಿತರಿದ್ದರು.