
ಈ ಮೊದಲು ಕೀಮೋಥೆರಪಿ ಚಿಕಿತ್ಸೆಗೆ ಬೆಂಗಳೂರಿಗೆ ತೆರಳಬೇಕಾಗಿತ್ತು. ಇದು ರೋಗಿಗಳ ಪಾಲಿಗೆ ಕಷ್ಟಸಾಧ್ಯವಾಗಿತ್ತು,ಬಡ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ದೊರೆಯದ ಕಾರಣ, ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದರು ಈ ಬಾರಿ ಜಿಲ್ಲೆ ಹಾಗೂ ತಾಲ್ಲೂಕಿನಲ್ಲಿ ಸಕಲ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರವು ಪ್ರಯತ್ನಿಸಿದೆ ಎಂದು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರಮೇಶ್ ತಿಳಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರವನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ಶಾರದಾ ನಾಗನಾಥ್,ಮುಖ್ಯ ಆಡಳಿತಾಧಿಕಾರಿ ಡಾ.ರಮೇಶ್ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಆಸ್ಪತ್ರೆಯಲ್ಲಿ ನೂತನವಾಗಿ ಕೀಮೋಥೆರಪಿ ಕೇಂದ್ರಗಳನ್ನು ತೆರೆಯಲಾಗಿದ್ದು,ಕ್ಯಾನ್ಸರ್ ಖಾಯಿಲೆ ಬಂದವರು ಧೃತಿಗೆಡಬೇಕಾದ ಅಗತ್ಯವಿಲ್ಲ. ಪ್ರತಿಯೊಬ್ಬರು ವಾರ್ಷಿಕ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು, ಇದರಿಂದ ರೋಗಗಳನ್ನು ಮುಂಚಿತವಾಗಿ ಪತ್ತೆಹಚ್ಚಲು ಅನುಕೂಲವಾಗುತ್ತದೆ.ಜೀವನ ಶೈಲಿ ಮತ್ತು ಆಹಾರ ಪದ್ಧತಿಯ ಬಗ್ಗೆ ಗಮನ ಹರಿಸಿ ಎಂದರು.
ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು ಅನುಭವ ಮತ್ತು ಪರಿಣಿತಿ ಇರುವ ವೈದ್ಯರಿದ್ದಾರೆ. ಅಲ್ಲದೇ ಜನಸಾಮಾನ್ಯರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಯಿಲೆ ವಾಸಿಯಾಗುತ್ತದೆ ಎಂಬುದು ಅರಿವಿಗೆ ಬಂದಿದೆ. ಕೀಮೋಥೆರಪಿ ಬಡವರಿಗೆ ಅನುಕೂಲ ಆಗಲಿ ಎಂದು ರಾಜ್ಯ ಸರ್ಕಾರ ಈ ಕೇಂದ್ರಗಳನ್ನು ಓಪನ್ ಮಾಡಿದೆ ಇದರ ಅನುಕೂಲವನ್ನು ಸಾರ್ವಜನಿಕರು ಸದ್ಭಾಳಕೆ ಮಾಡಿಕೊಳ್ಳುವ ಮೂಲಕ ಪಡೆಯಲಿ ಎಂದರು.
ಈ ವೇಳೆ ಡಾ.ನಿರಂಜನ್, ಡಾ.ಸುಷ್ಮಾ ಗೌಡ, ಡಾ.ಮಂಜುನಾಥ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ವೇಕ್ಷಣಾಧಿಕಾರಿ ಹೇಮಾವತಿ ಸೇರಿದಂತೆ ಹಲವು ವೈದ್ಯರು ಹಾಗೂ ಸಿಬ್ಬಂದಿವರ್ಗ ಹಾಜರಿದ್ದರು.