
ಪರಿಸರ ಸ್ನೇಹಿಯಾದ ನವೀಕರಿಸಬಹುದಾದ ಮತ್ತು ಜೈವಿಕ ಇಂಧನ ಬಳಕೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದರು.
ನೆಲಮಂಗಲ ಬಳಿಯ ಕ್ಷೇಮವನದಲ್ಲಿಂದು ವಿಶ್ವ ಪರಿಸರ ದಿನದ ಅಂಗವಾಗಿ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಇಂದು ಜಗತ್ತಿನಾದ್ಯಂತ ಹಲವು ಸಭೆ, ಚರ್ಚಾಗೋಷ್ಠಿಗಳು ನಡೆಯುತ್ತಿದ್ದು, ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆಯ ಬಗ್ಗೆ ಚಿಂತನ ಮಂಥನ ನಡೆಯುತ್ತಿದೆ. ಅಲ್ಲೆಲ್ಲಾ ವ್ಯಕ್ತವಾಗುವ ಪರಿಹಾರ ಮರ ಬೆಳೆಸುವುದು ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ ಎಂದರು.
ಪ್ರಕೃತಿ ನಮಗೆ ನೀಡಿರುವ ನೈಸರ್ಗಿಕ ಸಂಪನ್ಮೂಲವನ್ನು ವಿವೇಚನಾತ್ಮಕವಾಗಿ ಮತ್ತು ಹಿತಮಿತವಾಗಿ ಬಳಸಿದರೆ ಮಾತ್ರ ಮನುಷ್ಯ ಉಳಿಯಲು ಸಾಧ್ಯ ಎಂದ ಅವರು, ಜೀವನವೂ ಇರಬೇಕು, ಜೀವನೋಪಾಯವೂ ಇರಬೇಕು, ಅದೇ ರೀತಿ ಸುಸ್ಥಿರ ಅಭಿವೃದ್ಧಿಯೂ ಆಗಬೇಕು, ಪ್ರಕೃತಿಯೂ ಉಳಿಯಬೇಕು ಆ ರೀತಿ ನಾವು ಬದುಕುವುದನ್ನು ಕಲಿಯಬೇಕು ಎಂದರು.
ಬೆಂಗಳೂರು ಒಂದು ಕಾಲದಲ್ಲಿ ಉದ್ಯಾನ ನಗರಿ ಆಗಿತ್ತು, ನಿವೃತ್ತರ ಸ್ವರ್ಗವಾಗಿತ್ತು. ಇಂದು ಕಾಂಕ್ರೀಟ್ ಕಾಡಾಗುತ್ತಿದೆ. ನೀರಿನ ಸಮಸ್ಯೆ ಎದುರಾಗುತ್ತಿದೆ. ಉಸಿರಾಡುವ ಗಾಳಿಯೂ ವಿಷವಾಗುತ್ತದೆ. ಒಂದೂವರೆ ಕೋಟಿಗೂ ಹೆಚ್ಚು ವಾಹನಗಳಿದ್ದು ಅವುಗಳಿಂದ ಹೊರಹೊಮ್ಮುವ ಇಂಗಾಲದ ಡೈ ಆಕ್ಸೈಡ್ ನಿಂದ ತಾಪಮಾನ ಏರಿಕೆ ಆಗುತ್ತಿದೆ. ಹೀಗಾಗಿ ಪ್ರಕೃತಿ ಪರಿಸರ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸುಧೀಂದ್ರ ಮಾತನಾಡಿ ಇಲ್ಲಿ ನೆಡಲಾಗುತ್ತಿರುವ ಪ್ರತಿಯೊಂದು ಸಸಿಯೂ ಬೆಳೆದು ಮರವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಇದೇ ರೀತಿ ಎಲ್ಲರೂ ಗಮನ ಹರಿಸಿದರೆ ಹಸಿರು ರಾಜ್ಯದ ಕನಸು ನನಸಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಶಿವ ಶಂಕರ್, ಪ್ರಕೃತಿ ಪೌಂಡೇಶನ್ ಸ್ಥಾಪಕರಾದ ಲೋಕೇಶ್ ಗೌಡ, ಪ್ರಕೃತಿ ಪ್ರಸನ್ನ, ಡಿ.ಎಫ್.ಒ ಲೋಹಿತ್ ಹಾಗೂ ಸ್ಥಳೀಯ ಪ್ರತಿನಿಧಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.