
ರಾಜ್ಯದಲ್ಲಿ ತ್ರಿಭಾಷಾ ನೀತಿಯನ್ನ ರದ್ದು ಮಾಡಿ ದ್ವಿಭಾಷಾ ನೀತಿಯನ್ನು ಜಾರಿ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಜಿಲ್ಲಾಧ್ಯಕ್ಷರಾದ ಪುರುಷೋತ್ತಮ್ ಗೌಡ ನೇತೃತ್ವದಲ್ಲಿ ದೇವನಹಳ್ಳಿಯ ಜಿಲ್ಲಾಧಿಕಾರಿಗಳ ಮುಖೇನ ರಾಜ್ಯದ ಮುಖ್ಯಮಂತ್ರಿಗಳಿಗೆ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು.
ದೇವನಹಳ್ಳಿಯ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ಕರವೇ ಕಾರ್ಯಕರ್ತರು ರಾಜ್ಯದಲ್ಲಿ ತ್ರಿಭಾಷಾ ನೀತಿಯನ್ನ ರದ್ದು ಮಾಡಿ ದ್ವಿಭಾಷಾ ನೀತಿಯನ್ನ ಜಾರಿ ಮಾಡುವಂತೆ ಒತ್ತಾಯಿಸಿದರು, ಕರವೇ ಕಾರ್ಯಕರ್ತರ ಮನವಿಯನ್ನು ಡಿಸಿ ಕಚೇರಿಯ ತಹಶೀಲ್ದಾರ್ ರಾಜೀವ್ ಸುಲೋಚನ ಸ್ವೀಕರಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷರಾದ ಪುರುಷೋತ್ತಮ್ ಗೌಡ, ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ, ಆದರೂ ನಮ್ಮ ಮೇಲೆ ಹಿಂದಿ ಹೇರಿಕೆ ಮಾಡಲಾಗುತ್ತಿದೆ, ಉತ್ತರ ಭಾರತದ ರಾಜ್ಯಗಳಲ್ಲಿನ ಮಕ್ಕಳು ಎರಡು ಭಾಷೆಗಳನ್ನು ಕಲಿಯುತ್ತಾರೆ.ಆದರೆ ನಮ್ಮ ರಾಜ್ಯದ ಮಕ್ಕಳು ಮೂರು ಭಾಷೆ ಕಲಿಯುತ್ತಾರೆ, ಮೂರನೇ ಭಾಷೆಯಾಗಿ ಹಿಂದಿ ಕಲಿಕೆ ನಮ್ಮ ಮಕ್ಕಳಿಗೆ ಹೊರೆಯಾಗಿದೆ, ಇದು ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಲಿದ್ದು, ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗಲಿದೆ ಎಂದರು.
ನಮ್ಮ ಕರ್ನಾಟಕ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ತೃತೀಯ ಭಾಷೆ ಶಿಕ್ಷಣ ನೀತಿಯನ್ನು ಅಳವಡಿಸಬಾರದು. ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ ಹಾಗಾಗಿ ನಮ್ಮ ರಾಜ್ಯದಲ್ಲಿ ಪ್ರಪ್ರಥಮವಾಗಿ ಕನ್ನಡ ಹಾಗೂ ಪರ್ಯಾಯವಾಗಿ ಇಂಗ್ಲಿಷ್ ಮಾತ್ರ ನಮ್ಮ ರಾಜ್ಯಕ್ಕೆ ಸೀಮಿತವಾಗಿರಲಿ ಎಂದು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇವೆ ಎಂದರು.