
ಗೃಹ ಆರೋಗ್ಯ ಯೋಜನೆಯಡಿ ಆರೋಗ್ಯ ಅಧಿಕಾರಿಗಳು ಜಿಲ್ಲೆಯಾದ್ಯಂತ ಮನೆ ಮನೆ ಭೇಟಿ ನೀಡಿ 30 ವರ್ಷ ಮೇಲ್ಪಟ್ಟ ಎಲ್ಲರಿಗೂ ಆರೋಗ್ಯ ತಪಾಸಣೆ ನಡೆಸಲಿದ್ದಾರೆ ಎಂದು ಜಿ.ಪಂ ಸಿಇಓ ಡಾ. ಕೆ.ಎನ್ ಅನುರಾಧ ಅವರು ತಿಳಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸರ್ವೇಕ್ಷಣಾ ಘಟಕ ಇವರ ವತಿಯಿಂದ ಹಮ್ಮಿಕೊಂಡಿದ್ದ ಗೃಹ ಅರೋಗ್ಯ ಯೋಜನೆ ಕಾರ್ಯಗಾರ ಮತ್ತು ಜಿಲ್ಲಾದ್ಯಂತ ಗೃಹ ಅರೋಗ್ಯ ಯೋಜನೆ ವಿಸ್ತರಣೆ ಮತ್ತು ಆಶಾ ಕೈಪಿಡಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗೃಹ ಆರೋಗ್ಯ ಯೋಜನೆಯು ಅಗತ್ಯ ಆರೋಗ್ಯ ಸೇವೆಗಳನ್ನು ನೇರವಾಗಿ ನಿವಾಸಿಗಳ ಮನೆ ಬಾಗಿಲಿಗೆ ಒದಗಿಸುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಸಾಂಕ್ರಾಮಿಕವಲ್ಲದ ರೋಗಗಳ ಆರಂಭಿಕ ಪತ್ತೆ ಮತ್ತು ನಿರ್ವಹಣೆಯನ್ನು ಹೆಚ್ಚಿಸುವ ಮೂಲಕ ತೊಡಕುಗಳು ಮತ್ತು ಅಕಾಲಿಕ ಮರಣಗಳನ್ನು ಕಡಿಮೆ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ.
ಯೋಜನೆಯಲ್ಲಿ 30 ವರ್ಷ ಮೇಲ್ಪಟ್ ಎಲ್ಲರಿಗೂ ಉಚಿತವಾಗಿ ತಪಾಸಣೆ ನಡೆಸಲಾಗುತ್ತದೆ. ಪ್ರಮುಖ ಅಸಾಂಕ್ರಾಮಿಕ ರೋಗಗಳಾದ ಮಧುಮೇಹ, ರಕ್ತದೊತ್ತಡ,ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್ ರೋಗಗಳ ತಪಾಸಣೆ ಮತ್ತು ನಿರ್ವಹಣೆಯನ್ನು ನಡೆಸಲಾಗುವುದು.
ಆಶಾ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ತೆರಳಿ ಜನರಲ್ಲಿ ಅಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ರಕ್ತದೊತ್ತಡ, ಡಯಾಬಿಟಿಸ್ ಹೊಂದಿದವರಿಗೆ ಸ್ಥಳದಲ್ಲೇ ಔಷಧಿಗಳನ್ನ ಉಚಿತವಾಗಿ ಒದಗಿಸುವ ವ್ಯವಸ್ಥೆಯನ್ನ ಗೃಹ ಆರೋಗ್ಯ ಯೋಜನೆಯಲ್ಲಿ ಕಲ್ಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಅಗಮಿಸಿದ್ದ ಡಾ॥ ಸುಷ್ಮಾ ಅವರು ಅಸಾಂಕ್ರಾಮಿಕ ರೋಗಗಳಿಗೆ ಮನೆಗಳಿಗೆ ತೆರಳಿ ಚಿಕಿತ್ಸೆ ಹೇಗೆ ನೀಡಬೇಕು ಮತ್ತು ಅವರುಗಳು ಆರೋಗ್ಯಕ್ಕೆ ಮಾಡಬೇಕಾದ ವ್ಯಾಯಾಮ, ಆಹಾರ ಪದ್ಧತಿ ಎಲ್ಲಾದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ॥ ಲಕ್ಕಾ ಕೃಷ್ಣಾ ರೆಡ್ಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ॥ ಹೇಮಾವತಿ ಎ.ವಿ, ಆರ್.ಸಿ.ಹೆಚ್ ಆದ ಡಾ॥ ಸಿಮಾ, ಡಿ.ಟಿ.ಒ ಡಾ॥ ನಾಗೇಶ್, ಡಿ.ಎಲ್.ಒ ಡಾ॥ ನಾಗರಾಜ್, ಡಾ॥ ಕೋಮಲಾ ಹಾಗೂ ಜಿಲ್ಲಾ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.