ದೊಡ್ಡಬಳ್ಳಾಪುರ : ಬದುಕಿನ ಎಲ್ಲ ಹಂತಗಳಲ್ಲೂ ಪ್ರತಿಯೊಬ್ಬ ವ್ಯಕ್ತಿಗೂ ಕಾನೂನು ತನ್ನದೇ ಆದ ರೀತಿಯಲ್ಲಿ ಸುರಕ್ಷಿತ ಬದುಕು ಮತ್ತು ವ್ಯಕ್ತಿಗತ ಮೌಲ್ಯಗಳನ್ನು ಖಾತರಿಪಡಿಸುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಜೆಎಂಎಫ್ಸಿ ಡಿ.ಕ್ರಾಂತಿ ಕಿರಣ್ ಹೇಳಿದರು.
ಇಲ್ಲಿನ ಜಾಲಪ್ಪ ಕಾನೂನು ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ವಿದ್ಯಾರ್ಥಿ ಕಾರ್ಯಕಾರಿಣಿ ಘಟಕ, ಎನ್ಎಸ್ಎಸ್ ಮತ್ತು ರೆಡ್ಕ್ರಾಸ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ವ್ಯಕ್ತಿ ಹುಟ್ಟಿನಿಂದ ಸಾವಿನವರೆಗೂ ವಿವಿಧ ಹಂತಗಳಲ್ಲಿ ಕಾನೂನಿನ ರಕ್ಷಣೆ ಹಲವು ಕಾಯ್ದೆಗಳ ಮೂಲಕ ಲಭಿಸುತ್ತದೆ. ಈ ನೆಲದ ಕಾನೂನನ್ನು ಗೌರವಿಸುವುದು ಪ್ರತಿಯೊಬ್ಬರ ಆದ್ಯತೆಯಾಗಿರಬೇಕು. ಸರಳ ಕಾನೂನುಗಳ ಬಗ್ಗೆ ಎಲ್ಲರೂ ಅರಿವು ಹೊಂದುವುದು ಅಗತ್ಯ. ಕಾನೂನು ವಿದ್ಯಾರ್ಥಿಗಳು ಶಿಸ್ತು, ಸಾಮಾಜಿಕ ಕಾಳಜಿ ಮತ್ತು ಸಾಂವಿಧಾನಿಕ ಆಲೋಚನೆಗಳನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ದೊಡ್ಡಬಳ್ಳಾಪುರದಲ್ಲೇ ಕಾನೂನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಕನಸನ್ನು ಜಾಲಪ್ಪ ವಿದ್ಯಾ ಸಂಸ್ಥೆ ನನಸು ಮಾಡಿದೆ. ವಿದ್ಯಾರ್ಥಿಗಳು ತರಗತಿಗಳಲ್ಲಿ ಅಧ್ಯಯನ ಮಾಡುವ ಜೊತೆಗೆ ನ್ಯಾಯಾಲಯಗಳಿಗೆ ಭೇಟಿ ನೀಡಿ ಕಾರ್ಯಕಲಾಪಗಳನ್ನು ವೀಕ್ಷಿಸಬೇಕು. ಪ್ರಾಯೋಗಿಕವಾಗಿ ಕಾನೂನು ಜ್ಞಾನವನ್ನು ಹೊಂದುವುದು ಅಗತ್ಯ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಜಿ.ಟಿ.ಹನುಮಂತಪ್ಪ, ಮಾನವ ಸಂಪನ್ಮೂಲ ನಿರ್ದೇಶಕ ಪ್ರೊ.ಬಾಬುರೆಡ್ಡಿ, ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್, ವಿದ್ಯಾರ್ಥಿ ಕಾರ್ಯಕಾರಿಣಿ ಪ್ರಧಾನ ಕಾರ್ಯದರ್ಶಿ ಶಶಾಂಕ್, ವಿವಿಧ ಘಟಕಗಳ ಪದಾಧಿಕಾರಿಗಳಾದ ಹೇಮಶ್ರೀ, ಮಣಿಕಾಂತ್, ರೋಹಿತ್, ಲಕ್ಷ್ಮಿ, ಪ್ರಶಾಂತ್, ಸ್ಪೂರ್ತಿ, ಪ್ರವೀಣ್ ಮತ್ತಿತರರು ಹಾಜರಿದ್ದರು.
