
ದೊಡ್ಡಬಳ್ಳಾಪುರ: 5 ಜಿ ಟವರ್ ಪ್ರಾಬ್ಲಮ್ ಸ್ಥಳೀಯರ ಗೋಳು ಕೇಳದ ಜನಪ್ರತಿನಿಧಿಗಳು.. ತಾಲ್ಲೂಕಿನ ಚಂದ್ರಮೌಳೇಶ್ವರ ಬಡಾವಣೆಯ ಜನವಸತಿ ಜಾಗದಲ್ಲಿ ಖಾಸಗಿ ಟೆಲಿಕಾಂ ಕಂಪೆನಿಯು 5ಜಿ ಟವರ್ ನಿರ್ಮಿಸುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಬಡಾವಣೆಯ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಬಡಾವಣೆಯ ನಿವಾಸಿಯಾದ ಗೋಪಾಲ್ ಎಂಬುವರ ಜಮೀನಿನಲ್ಲಿ 5ಜಿ ಟವರ್ ನಿರ್ಮಿಸುತ್ತಿದ್ದು, ಪ್ರಾಣಿ ಪಕ್ಷಿಗಳಿಗೆ ಟವರ್ ನಿಂದ ಉಂಟಾಗುವ ತರಂಗಾಂತರ ಮಾರಕವಾಗಿದೆ. ಬಡಾವಣೆಯಲ್ಲಿರುವ 30ಕ್ಕೂ ಹೆಚ್ಚು ಮನೆಗಳು, ಪಕ್ಕದ ರಾಜೀವ್ ಗಾಂಧಿ ಬಡಾವಣೆಯ ಜನರಿಗೂ ಇದರಿಂದ ಸಮಸ್ಯೆಯಾಗಲಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಟವರ್ ಅನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಚಂದ್ರಮೌಳೇಶ್ವರ ಬಡಾವಣೆಯಲ್ಲಿ ಯಾವುದೇ ನೆಟ್ ವರ್ಕ್ ಸಮಸ್ಯೆ ಇಲ್ಲ. ಆದಾಗ್ಯೂ ಖಾಸಗಿ ಭೂಮಾಲೀಕರು ಹಣದಾಸೆಗೆ ಟವರ್ ನಿರ್ಮಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಮೊಬೈಲ್ ಟವರ್ ನಿರ್ಮಾಣದಿಂದ ಈಗಾಗಲೇ ಪಕ್ಷಿ ಸಂಕುಲ ನಾಶವಾಗಿದೆ. ಈಗ 5ಜಿ ಟವರ್ ಅಳವಡಿಕೆಯಿಂದ ಮಕ್ಕಳು, ಗರ್ಭಿಣಿಯರು ಹಾಗೂ ವೃದ್ಧರ ಜೀವಕ್ಕೆ ಮಾರಕವಾಗಲಿದೆ . ಟವರ್ ನಿರ್ಮಾಣ ಕುರಿತು ಯಾವುದೇ ಮಾಹಿತಿ ನೀಡದೇ ರಾತ್ರೋರಾತ್ರಿ ನಿರ್ಮಾಣ ಆರಂಭಿಸಿದ್ದಾರೆ. ಭೂಮಾಲೀಕರನ್ನು ಕೇಳಿದರೆ ಸರ್ಕಾರದಿಂದ ಅನುಮತಿ ಪಡೆದಿದ್ದೇವೆ. ನಮ್ಮ ಜಮೀನು, ನಮ್ಮಿಷ್ಟ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದರು. ಟವರ್ ನಿರ್ಮಾಣ ವಿರೋಧಿಸಿ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.
ಗೋಪಾಲ್ ಅವರು ರಾಜಕಾಲುವೆ ಒತ್ತುವರಿ ಮಾಡಿಕೊಂಡು, ಅದೇ ಜಾಗದಲ್ಲಿ ಟವರ್ ನಿರ್ಮಾಣಕ್ಕೆ ಅವಕಾಶ ನೀಡಿದ್ದಾರೆಂಬುದು ಸ್ಥಳೀಯರ ಆರೋಪ.
ಜನ ವಸತಿ ಪ್ರದೇಶದಲ್ಲಿ ಟವರ್ ನಿರ್ಮಾಣ ಕಾನೂನುಬಾಹಿರ. ಕೊಡಿಗೇಹಳ್ಳಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಸ್ಥಳೀಯರ ಒಪ್ಪಿಗೆ ಇಲ್ಲದೆ ಟವರ್ ನಿರ್ಮಾಣಕ್ಕೆ ಅನುಮತಿ ಕೊಟ್ಟಿದ್ದಾರೆ. ಮಕ್ಕಳ ಮತ್ತು ಗರ್ಭಿಣಿ ಮಹಿಳೆಯರ ಆರೋಗ್ಯದ ಮೇಲೆ ತರಂಗಾಂತರಗಳು ನೇರ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ಏಕಾಗ್ರತೆಯ ಮೇಲು ಪರಿಣಾಮ ಬೀರಲಿದೆ ಎಂದು ಸ್ಥಳೀಯ ನಿವಾಸಿಗಳಾದ ಸೌಮ್ಯ, ಗುರುರಾಜ್ ಆರೋಪಿಸಿದ್ದಾರೆ.