
ದೊಡ್ಡಬಳ್ಳಾಪುರ : ಸ್ಥಳೀಯ ಕಾರ್ಖಾನೆಗಳ ಕಲುಷಿತ ನೀರು ನೇರವಾಗಿ ಆರ್ಕವತಿ ನದಿಯ ಜಲಮೂಲಕ್ಕೆ ಸೇರುತ್ತಿದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹರಿಯುವ ಅರ್ಕಾವತಿ ನದಿಗೆ ಅತಿ ಹೆಚ್ಚು ಕಲುಷಿತ ನದಿಯೆಂಬ ಹಣೆಪಟ್ಟಿ ಸಿಕ್ಕಿದೆ, ಈ ಪರಿಸ್ಥಿತಿಗೆ ಅಧಿಕಾರಿಗಳ ವೈಫಲ್ಯ ಕಾರಣ ಎಂದು ಅರ್ಕಾವತಿ ನದಿ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದರು
ಬೆಳಗಾವಿ ಅಧಿವೇಶನದಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ಕೈಗಾರಿಕೆ ಮತ್ತು ಒಳಚರಂಡಿ ತ್ಯಾಜ್ಯದಿಂದ 12 ನದಿಗಳು ಕಲುಷಿತಗೊಂಡಿದ್ದು, 2022-23ನೇ ಸಾಲಿನಲ್ಲಿ ಮತ್ತೆ ನಾಲ್ಕು ನದಿಗಳು ಸೇರ್ಪಡೆಯಾಗುವ ಮೂಲಕ ರಾಜ್ಯದಲ್ಲಿ 16 ನದಿಗಳು ಕಲುಷಿತಗೊಂಡಿದೆ, ಇವುಗಳಲ್ಲಿ ಅರ್ಕಾವತಿ ನದಿ ಅತಿ ಹೆಚ್ಚು ಕಲುಷಿತಗೊಂಡಿರುವ ನದಿ, ಅರ್ಕಾವತಿ ನದಿಯಲ್ಲಿ ಬಿಒಪಿ ಸಾಂದ್ರತೆ ಪ್ರತಿ ಲೀಟರ್ ನಲ್ಲಿ ಮಿ.ಗ್ರಾಂ ಗಿಂತ ಹೆಚ್ಚಿದ್ದು ಬಳಕೆಗೂ ಸಹ ಯೋಗ್ಯವಾಗಿಲ್ಲ ಎಂಬ ವರದಿಗಳು ಬಂದಿದೆ ಎಂದು ತಿಳಿಸಿದ್ದು
ಈ ಕುರಿತು ರೈತ ಹೋರಾಟಗಾರರಾದ ವಸಂತ್ ಕುಮಾರ್ ಮಾತನಾಡಿ ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆಯ ಪ್ರಮುಖ ನದಿ ಅರ್ಕಾವತಿ, ಕೈಗಾರಿಕಾ ಪ್ರದೇಶಗಳು ಮತ್ತು ನಗರದ ಒಳಚರಂಡಿ ನೀರು ಶುದ್ದೀಕರಣವಾಗದೆ ನೇರವಾಗಿ ನದಿಗೆ ಸೇರುತ್ತಿರುವುದು ಅರ್ಕಾವತಿ ನದಿಯ ಈ ಸ್ಥಿತಿಗೆ ಕಾರಣವಾಗಿದೆ, ಅರ್ಕಾವತಿ ನದಿ ಅತಿಹೆಚ್ಚು ಕಲುಷಿತಗೊಳ್ಳಲು ದೊಡ್ಡಬಳ್ಳಾಪುರ ನಗರಸಭೆಯ ಪೌರಾಯುಕ್ತರು, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೇ ಪ್ರಮುಖ ಕಾರಣ, ಅರ್ಕಾವತಿ ನದಿಯ ಸಂರಕ್ಷಣೆಗಾಗಿ ಅರ್ಕಾವತಿ ನದಿ ಹೋರಾಟ ಸಮಿತಿ ಕಳೆದ 10 ವರ್ಷಗಳಿಂದ ಹೋರಾಟ ಮಾಡುತ್ತಿದೆ, 10 ವರ್ಷಗಳ ಹೋರಾಟಕ್ಕೂ ಯಾವುದೇ ಪ್ರತಿಫಲ ಸಿಕ್ಕಿಲ್ಲ, ಇಲ್ಲಿಯವರೆಗೂ STP ಘಟಕ ಸ್ಫಾಪನೆಯಾಗಿಲ್ಲ, ಬಾಶೆಟ್ಟಿಹಳ್ಳಿ ಕೈಗಾರಿಕ ಪ್ರದೇಶದ ವಿಷಕಾರಿ ನೀರು ನದಿಯ ಒಡಲು ಸೇರುತ್ತಿರುವುದು ಅರ್ಕಾವತಿ ನದಿಯ ನೀರು ವಿಷಕಾರಿಯಾಗಿದೆ ಎಂದು ತಮ್ಮ ಅಕ್ರೋಶ ವ್ಯಕ್ತಪಡಿಸಿದರು.
ಹೋರಾಟಗಾರ ವಿಜಯ್ ಕುಮಾರ್ ಮಾತನಾಡಿ ಅರ್ಕಾವತಿ ನದಿ ಕಲುಷಿತಗೊಂಡಿರುವುದರಿಂದ ನದಿ ಸುತ್ತಮುತ್ತಲಿನ ಹಳ್ಳಿಗಳ ಅಂತರ್ಜಲ ನೀರು ಸಹ ವಿಷವಾಗಿದೆ, ಬೋರ್ ವೇಲ್ ನೀರಿನಲ್ಲಿ ಅಪಾಯಕಾರಿ ಖನಿಜಾಂಶ ಪತ್ತೆಯಾಗಿದ್ದು, ಅಂತರ್ಜಲದ ನೀರು ಬಳಕೆಗೂ ಯೊಗ್ಯವಲ್ಲ ಎಂಬ ವರದಿ ಬಂದಿದೆ, ಇದರಿಂದ ಆತಂಕಗೊಂಡಿರುವ ದೊಡ್ಡತುಮಕೂರು ಮತ್ತು ಮಜರಾ ಹೊಸಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಎತ್ತಿನಹೊಳೆ ನೀರನ್ನು ಬಳಸಲಾಗುತ್ತಿದೆ . ಶುದ್ಧೀಕರಿಸದೆ ನದಿಯ ಮೂಲಗಳಿಗೆ ನೀರು ಬಿಟ್ಟಿರುವ ಕಾರಣ ಅಂತರ್ಜಲ ಸಂಪೂರ್ಣ ಹಾಳಾಗಿದೆ ಇನ್ನಾದರೂ ಸಂಬಂಧಪಟ್ಟವರು ಕ್ರಮಕ್ಕೆ ಮುಂದಾಗಬೇಕು ಎಂದು ತಿಳಿಸಿದರು