
ದೊಡ್ಡಬಳ್ಳಾಪುರ : ಕೆಐಡಿಬಿ ಅಧಿಕಾರಿಗಳು ರೈತರಿಗೆ ಹಲವಾರು ಭೂ ದಾಖಲೆಗಳನ್ನು ನೀಡುವಂತೆ ಸೂಚಿಸುವ ಮೂಲಕ ಮಧ್ಯವರ್ತಿಗಳ ಹಾವಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಭೂಮಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ತಾಲ್ಲೂಕು ಕಚೇರಿಯಲ್ಲೇ ಇರುವಾಗ ದಾಖಲೆ ನೀಡುವಂತೆ ರೈತರಿಗೆ ನೋಟಿಸ್ ನೀಡುವ ಅಗತ್ಯವಾದರು ಏನಿದೆ ಎಂದು ಕೆಪಿಸಿಸಿ ವಕ್ತಾರ ಜಿ. ಲಕ್ಷ್ಮೀಪತಿ ಆಗ್ರಹಿಸಿದರು
ಅವರು ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಕೈಗಾರಿಕೆ ಸೇರಿದಂತೆ ಇತರೆ ಉದ್ದೇಶಗಳಿಗೆ ಸರ್ಕಾರ ರೈತರ ಕೃಷಿ ಭೂಮಿ ಸ್ವಾಧೀನ ಮಾಡಿಕೊಳ್ಳುವಾಗ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 2013ರ ಭೂಸ್ವಾಧೀನ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಕೇಂದ್ರ ಸರ್ಕಾರ ಮಾಡಿರುವ ಕಾನೂನುಗಳನ್ನು ಬದಿಗೊತ್ತಿರುವ ಅಧಿಕಾರಿಗಳು ನಾಗದೇನಹಳ್ಳಿ, ಕೊನಘಟ್ಟ, ಕೋಡಿಹಳ್ಳಿ, ಆದಿನಾರಾಯಣ ಹೊಸಹಳ್ಳಿ ಗ್ರಾಮಗಳ 970 ಎಕರೆ, ಲಿಂಗನಹಳ್ಳಿ ಗ್ರಾಮದ ಸುತ್ತ 570 ಎಕರೆ ರೈತರ ಫಲವತ್ತಾದ ಭೂಮಿಗೆ ಅವರದೇ ಆದ ಮಾನದಂಡಗಳ ಆಧಾರದ ಮೇಲೆ ಬೆಲೆ ನಿಗದಿ ಮಾಡಿಕೊಂಡು ಬಲವಂತದ ಭೂಸ್ವಾಧೀನ ಮಾಡಿಕೊಳ್ಳಲು ಮುಂದಾಗಿರುವುದು ಖಂಡನೀಯ.
ತಾಲ್ಲೂಕಿನ ಅಭಿವೃದ್ಧಿಗೆ ಕೈಗಾರಿಕೆಗಳ ಸ್ಥಾಪನೆ ಮುಖ್ಯ. ಆದರೆ ರೈತರ ಭೂಮಿಗೆ ಸರ್ಕಾರ ರೂಪಿಸಿರುವ ಕಾನೂನುಗಳನ್ನು ಗಾಳಿಗೆ ತೂರಿರುವ ಅಧಿಕಾರಿಗಳು ವೈಜ್ಞಾನಿಕ ಬೆಲೆ ನೀಡದೆ ತಮಗಿಷ್ಟ ಬಂದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ರೈತರ ಕೃಷಿ ಭೂಮಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಜ.9 ರಂದು ನಾಗದೇನಹಳ್ಳಿ ಸಮೀಪ ರಸ್ತೆ ತಡೆ ನಡೆಸುವ ಮೂಲಕ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಹೇಳಿದರು.
ಟಿಎಪಿಎಂಸಿಎಸ್ ನಿರ್ದೇಶಕ ಆನಂದ್, ತಾಪಂ ಮಾಜಿ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ಇತ್ತೀಚೆಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಭೂಮಿಯ ದರ ನಿಗದಿ ಸಭೆಯಲ್ಲಿ ಅಧಿಕಾರಿಗಳು ನಿಗದಿಪಡಿಸಿದ್ದ ಬೆಲೆಗೆ ಎಲ್ಲಾ ರೈತರು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿ ಸಹಿ ಮಾಡದೇ ಸಭೆಯಿಂದ ಹೊರಬಂದಿದ್ದೇವೆ. ಆದರೂ ಸಹ ಏಕಪಕ್ಷೀಯವಾಗಿ ಕೆಐಡಿಬಿ ಅಧಿಕಾರಿಗಳೇ ತರಿ, ಖುಷ್ಕ, ಬಾಗಾಯ್ತು ಭೂಮಿಗೆ ಇಂತಿಷ್ಟು ಎಂದು ಬೆಲೆ ನಿಗದಿಪಡಿಸಿಕೊಂಡು ರೈತರಿಗೆ ಅಂತಿಮ ಭೂಸ್ವಾಧೀನದ ನೋಟಿಸ್ ಜಾರಿಗೊಳಿಸಲು ಮುಂದಾಗಿದ್ದಾರೆ ಎಂದರು ದೂರಿದರು.ಬೆಂಗಳೂರಿನಲ್ಲಿ ಇರುವ ವಿಶೇಷ ಭೂಸ್ವಾಧೀನ ಅಧಿಕಾರಿಗಳ ಕಚೇರಿಯನ್ನು ದೇವನಹಳ್ಳಿ ತಾಲ್ಲೂಕಿನ ಜಿಲ್ಲಾಧಿಕಾರಿಗಳ ಕಚೇರಿಗೆ ವರ್ಗಾವಣೆ ಮಾಡಬೇಕು.
ಸುದ್ದಿಗೋಷ್ಠಿಯಲ್ಲಿ ರೈತರಾದ ನರಸಿಂಹಮೂರ್ತಿ, ನಿವೃತ್ತ ಶಿಕ್ಷಕ ಕೃಷ್ಣಪ್ಪ, ನಾರಾಯಣಸ್ವಾಮಿ, ಬಾಬು ಮತ್ತಿತರರಿದ್ದರು