
ದೊಡ್ಡಬಳ್ಳಾಪುರ : ಕರ್ನಾಟಕ ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿಗೆ ಖುದ್ದು ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಅಧಿಕಾರಿಗಳಿಗೆ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚನೆ ನೀಡಿದರು.
ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿಯಲ್ಲಿ ಅಕ್ರಮಗಳ ಬಗ್ಗೆ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಇಂದು ದಿಢೀರ್ ದಾಳಿ ನಡೆಸಿದರು. ಈ ವೇಳೆ ಲೋಕಾಯುಕ್ತ ತುಮಕೂರು ವಿಭಾಗದ ಎಸ್ಪಿ ವಲೀ ಬಾಷಾ ಹಾಗೂ ಅಧಿಕಾರಿಗಳ ಮುಂದೆ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಸಾಕಷ್ಟು ದೂರು ಹೇಳಿಕೊಂಡರು.
ಅಧಿಕಾರಿಗಳ ವಿರುದ್ಧ ಕೇಳಿಬಂದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಖುದ್ದು ಉಪ ಲೋಕಾಯುಕ್ತರಾದ ನ್ಯಾ.ಕೆ.ಎನ್.ಫಣೀಂದ್ರ, ಹಾಗೂ ಜಿಲ್ಲಾಧಿಕಾರಿ ಡಾ.ಶಿವಶಂಕರ್ ಆಗಮಿಸಿ ತಹಶೀಲ್ದಾರ್ ಕಚೇರಿಯಲ್ಲಿ ಖುದ್ದು ಅಹವಾಲು ಸ್ವೀಕರಿಸಿದರು
ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ, ಪಹಣಿ ಸಮಸ್ಯೆ, ಗೋಮಾಳ ಜಮೀನು ಒತ್ತುವರಿ ಸೇರಿದಂತೆ ಹಲವು ದೂರುಗಳು ಕೇಳಿಬಂದವು. ಸಮಸ್ಯೆ ಆಲಿಸಿದ ನ್ಯಾಯಮೂರ್ತಿಗಳು, ಕಾಲಮಿತಿಯಲ್ಲಿ ಸಮಸ್ಯೆ ಬಗೆಹರಿಸುವಂತೆ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲೋಕಾಯುಕ್ತ ಸಂಸ್ಥೆಯ ಕುರಿತು ಸಾರ್ವಜನಿಕರಿಗೆ ಮಾಹಿತಿಯ ಕೊರತೆ ಇದ್ದು ಲೋಕಾಯುಕ್ತ ಸಂಸ್ಥೆಯ ಕುರಿತು ಸಾರ್ವಜನಿಕರಿಗೆ ಮಾಹಿತಿ ತಲುಪಬೇಕಿದೆ ಪ್ರತಿ ಜಿಲ್ಲೆಯಲ್ಲಿ ಲೋಕಾಯುಕ್ತ ಕಛೇರಿ ಇದ್ದು ಸಾರ್ವಜನಿಕರು ಬೆಂಗಳೂರಿನ ಕಚೇರಿಗೆ ದೂರು ನೀಡಬೇಕು ಎಂದು ಯೋಚಿಸುವಂತಿಲ್ಲ ಜಿಲ್ಲಾಧಿಕಾರಿಗಳಿಗೆ ಪ್ರತಿ ತಿಂಗಳಿಗೊಮ್ಮೆ ವಿಶೇಷವಾಗಿ ಸಾರ್ವಜನಿಕರೊಂದಿಗೆ ಸಂಪರ್ಕ ಸಭೆ ಆಯೋಜನೆ ಮಾಡುವ ಮೂಲಕ ಸಾರ್ವಜನಿಕರಿಗೆ ಸ್ಪಂದಿಸಬೇಕಾಗಿ ತಿಳಿಸಲಾಗಿದೆ ಸಾರ್ವಜನಿಕರ ಸೇವೆಗೆ ಲೋಕಾಯುಕ್ತ ಸದಾ ಸಿದ್ಧವಿದೆ ಎಂದು ತಿಳಿಸಿದರು
ತಾಲ್ಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಉಪಲೋಕಾಯುಕ್ತರು ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಮಾಧ್ಯಮಗಳ ಹಾಗೂ ಸಾರ್ವಜನಿಕರ ಸಹಕಾರದ ಅವಶ್ಯಕತೆ ಇದೆ ಅಂತಹ ಯಾವುದೇ ವ್ಯಕ್ತಿ ಅಥವಾ ಘಟನೆ ಬಗ್ಗೆ ಸ್ಥಳೀಯ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಹಾಗೂ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡುವ ಮೂಲಕ ಬ್ರಷ್ಟಾಚಾರ ನಿರ್ಮೂಲನೆಗೆ ಸಹಕರಿಸಬೇಕೆಂದು ಮನವಿ ಮಾಡಿದರು ಹಾಗೂ ಸದರಿ ಪ್ರಕರಣ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು