
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರದ ಸಮಗ್ರ ಅಭಿವೃದ್ಧಿಗೆ ಹಾಗೂ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿ, ನಗರದ ಜ್ವಲಂತ ಸಮಸ್ಯೆಗಳಿಗೆ ಸ್ಪಂಧಿಸಿ ನಗರದ ನಾಗರೀಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹೆಚ್ಚಿನ ರೀತಿಯಲ್ಲಿ ಸಹಕಾರಿಯಾಗುವಂತೆ ನಗರದ ಸೀಮಿತ ಹಣಕಾಸು ಸಂಪನ್ಮೂಲವಾದ ಈ ನಗರಸಭೆಗೆ ಅತೀ ಮುಖ್ಯ ಆದಾಯವಾದ ಮನೆ ಕಂದಾಯ, ನೀರಿನ ತೆರಿಗೆ, ಮಳಿಗೆ ಬಾಡಿಗೆ, ಪರವಾನಿಗೆ ಶುಲ್ಕ, ಇತರೆ ತೆರಿಗೆಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಾದ 15ನೇ ಹಣಕಾಸು ಯೋಜನೆ, ಎಸ್.ಎಫ್.ಸಿ, ಅಮೃತ್-2.0 ಮತ್ತು ಸ್ವಚ್ಚ ಭಾರತ 2.0 ಮೂಲಗಳಿಂದ ಹೆಚ್ಚಿನ ಅನುದಾನಗಳನ್ನು ಸರ್ಕಾರದಿಂದ ನಿರೀಕ್ಷಿಸಿ, ನಗರಸಭೆಯು ಅಗತ್ಯವಾಗಿ ನಿರ್ವಹಿಸಬೇಕಾಗಿರುವ ನಿರ್ವಹಣೆ ಮತ್ತು ನಾಗರೀಕ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ ಎಂದು ನಗರಸಭಾ ಅಧ್ಯಕ್ಷೆ ಎಸ್. ಸುಧಾರಾಣಿ ಲಕ್ಷ್ಮೀನಾರಾಯಣ ತಿಳಿಸಿದರು.
ತಾಲ್ಲೂಕಿನ ನಗರಸಭಾ ಕಾರ್ಯಾಲಯದ ಸಭಾಂಗಣದಲ್ಲಿ ಆಯ -ವ್ಯಯ ಮುಂಗಡ ಪತ್ರವನ್ನು ಮಂಡಿಸಿ ಮಾತನಾಡಿದ ಅವರು ದೊಡ್ಡಬಳ್ಳಾಪುರ ನಗರಸಭೆಯ 2024-25ನೇ ಸಾಲಿನ ಆಯ-ವ್ಯಯ ತಯಾರಿಕೆಗಾಗಿ ಎರಡು ಸುತ್ತಿನ ಸಮಾಲೋಚನಾ ಸಭೆಗಳಲ್ಲಿ ಸಾರ್ವಜನಿಕರು ನೀಡಿರುವ ಸಲಹೆಗಳನ್ನು ಆಧಾರಿಸಿ ನಗರಸಭೆಯ ಆರ್ಥಿಕ ಪರಿಸ್ಥಿತಿ ಅನುಗುಣವಾಗಿ ಹಾಗೂ ಹಂತಹಂತವಾಗಿ ಆಯ- ವ್ಯಯದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುವ ಮೂಲಕ ನಗರದ ಸ್ವಚ್ಚತೆ ಮತ್ತು ಅಭಿವೃದ್ಧಿಗೆ ಪೂರಕವಾದ, ಜನಪರ ಆಯ-ವ್ಯಯ ಮಂಡಿಸುತ್ತಿದ್ದೇನೆ. 2024-25ನೇ ಸಾಲಿಗೆ ರೂ.155.00ಲಕ್ಷಗಳ ಉಳಿತಾಯ ಆಯ- ವ್ಯಯ ಮುಂಗಡ ಪತ್ರವನ್ನು ತಯಾರಿಸಿ ಮಾಡಿಸಿದ್ದೇವೆ.
ಈ ಮುಂಗಡ ಪತ್ರದಲ್ಲಿ ನಗರ ಭಾಗದ ಅಭಿವೃದ್ದಿಗೆ ಹಲವು ಯೋಜನೆಗಳನ್ನು ರೂಪಿಸಿದ್ದು
ಪ್ರಮುಖವಾಗಿ
•ಪ್ಲಾಸ್ಟಿಕ್ ಮುಕ್ತ ಹಾಗೂ ನಿರ್ಮಲ ದೊಡ್ಡಬಳ್ಳಾಪುರ ನಗರ ನಿರ್ಮಾಣಕ್ಕಾಗಿ 1381.09 ಲಕ್ಷಗಳನ್ನು ಅಂದಾಜಿಸಲಾಗಿದೆ
•ನೀರು ಸರಬರಾಜು ಮತ್ತು ಒಳಚರಂಡಿ ಸಂಪರ್ಕಗಳ ವ್ಯವಸ್ಥೆಗೆ 150.24 ಲಕ್ಷ ರೂಪಾಯಿಗಳು
•ಅಭಿವೃದ್ಧಿ ಕಾಮಗಾರಿಗಳಿಗಾಗಿ 808.49ಲಕ್ಷರೂಪಾಯಿಗಳು
•ಕ್ರೀಡಾ ಸೌಲಭ್ಯಗಳಿಗಾಗಿ 10 ಲಕ್ಷ
•ವಿದ್ಯುತ್ ದೀಪಗಳ ನಿರ್ವಹಣೆಗಾಗಿ 39.80 ಲಕ್ಷ
•ನಾಡ ಹಾಗೂ ಸ್ಥಳೀಯ ಹಬ್ಬಗಳ ಆಚರಣೆಗಾಗಿ 10ಲಕ್ಷ
•ದೊಡ್ಡಬಳ್ಳಾಪುರ ಉತ್ಸವ ಆಚರಣೆವಂತಿಕೆಗಾಗಿ 15ಲಕ್ಷ ರೂಪಾಯಿ
•ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗಗಳ ಬಡಜನರ ಕಲ್ಯಾಣಕ್ಕಾಗಿ 210.05 ಲಕ್ಷ ರೂಪಾಯಿಗಳನ್ನು
•ಸ್ಮಶಾನ ಅಭಿವೃದ್ಧಿಗಾಗಿ 20 ಲಕ್ಷ ರೂಪಾಯಿಗಳನ್ನು ಅಂದಾಜು ಮಾಡಲಾಗಿದೆ.