
ಸ್ಥಳೀಯ ಶಾಸಕರ ಸಹಯೋಗದೊಂದಿಗೆ 31 ವಿಕಲಚೇತನರ ದೈನಂದಿಕ ಅನುಕೂಲಕ್ಕಾಗಿ ಯಂತ್ರ ಚಾಲಿತ ದ್ವಿಚಕ್ರ ವಾಹನಗಳನ್ನು ವಿತರಣೆ ಮಾಡಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿಗಳಾದ ಕೆ.ಎಚ್. ಮುನಿಯಪ್ಪ ತಿಳಿಸಿದರು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದೊಂದಿಗೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ದೈಹಿಕ ವಿಕಲಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು
ಕುಟುಂಬ ವಾರ್ಷಿಕ ವರಮಾನ ರೂ.2.00 ಲಕ್ಷಗಳಿಗಿಂತ ಕಡಿಮೆ ಇರುವ 20 ರಿಂದ 60 ವರ್ಷದೊಳಗಿನ ತೀವ್ರತರನಾದ ದೈಹಿಕ ವಿಕಲಚೇತನರಿಗೆ ಜೀವಿತ ಕಾಲದಲ್ಲಿ ಒಂದು ಬಾರಿ ಯಂತ್ರಚಾಲಿತ ದ್ವಿಚಕ್ರ ಮೋಟಾರು ವಾಹನವನ್ನು ನೀಡುವ ಯೋಜನೆಯನ್ನು ಸರ್ಕಾರವು ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ
14ನೇ ಮಾರ್ಚ್ 2017ರ ಅನುಸಾರ ಮಾನ್ಯ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿಕಲಚೇತನರ ಶ್ರೇಯೋಭಿವೃದ್ದಿಗಾಗಿ ಪ್ರತಿ ವರ್ಷ ರೂ.20.00 ಲಕ್ಷಗಳನ್ನು ಒದಗಿಸಲು ಅವಕಾಶ ಕಲ್ಪಿಸಿದ್ದು, ಸ್ಥಳೀಯ ವಿಕಲಚೇತನರಿಗೆ ಅನುಕೂಲವಾಗುವಂತೆ ಯಂತ್ರ ಚಾಲಿತ ದ್ವಿಚಕ್ರ ವಾಹನಗಳನ್ನು ವಿತರಣೆ ಮಾಡಲಾಗಿದೆ ಎಂದರು. ಹಾಗೂ ಫಲಾನುಭವಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಜೀವನದಲ್ಲಿ ಮತ್ತಷ್ಟು ಉನ್ನತಿ ಪಡೆಯಲಿ ಎಂದು ಹಾರೈಸಿದರು.
ಸ್ಥಳೀಯ ಶಾಸಕರು ಹಾಗೂ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಧೀರಜ್ ಮುನಿರಾಜು ಮಾತನಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿಕಲಚೇತನರಿಗೆ ಮೀಸಲಿಟ್ಟ ಅನುದಾನದಲ್ಲಿ ರೂ.29.29 ಲಕ್ಷ ಮೊತ್ತದ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು 31 ದೈಹಿಕ ವಿಕಲಚೇತನರಿಗೆ ಈ ದಿನ ವಿತರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಾದ ಶಿವಶಂಕರ್, ತಾಲೂಕು ದಂಡಾಧಿಕಾರಿಗಳಾದ ವಿದ್ಯಾವಿಭಾ ರಾಥೋಡ್, ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷರಾದ ಸುಧಾರಣಿ ಲಕ್ಷ್ಮಿನಾರಾಯಣ್, ನಗರಸಭಾ ಸದಸ್ಯರಾದ ವೆಂಕಟೇಶ್ (ಬಂತಿ ) ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು