
ದೊಡ್ಡಬಳ್ಳಾಪುರ, ಮಾ.14 (ವಿಜಯ ಮಿತ್ರ ಸುದ್ದಿ ) : ಹಾಲು ಉತ್ಪಾದಕ ರೈತರನ್ನು ಹೆಚ್ಚಿಸುವುದು ನಮ್ಮ ಮುಂದಿನ ಗುರಿಯಾಗಿದೆ. ಸಂಘದ ಅಭಿವೃದ್ಧಿಗೆ ಹಲವು ವಿಶೇಷ ಯೋಜನೆ ರೂಪಿಸುವ ಮೂಲಕ ಶ್ರಮಿಸಲಾಗುವುದು ಎಂದು ರಾಜಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ ಬಿ ಎಸ್ ಸುರೇಶ್ ತಿಳಿಸಿದರು.
ತಾಲ್ಲೂಕಿನ ರಾಜಘಟ್ಟ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಕುರಿತು ಚುನಾವಣೆ ನೆಡೆಸಲಾಯಿತು . ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮೈತ್ರಿ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಬಿ ಎಸ್ ಸುರೇಶ್ ರವರು ಸಂಘದ ಅಧ್ಯಕ್ಷರಾಗಿ ಮತ್ತು ರತ್ನಮ್ಮಸಂಜೀವಪ್ಪ ಉಪಾಧ್ಯಕ್ಷರಾಗಿ ಸರ್ವ ಸದಸ್ಯರ ಅನುಮೋದನೆಯೊಂದಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ಬಿ ಎಸ್ ಸುರೇಶ್ ಮಾತನಾಡಿ ಸರ್ವ ಸದಸ್ಯರು ನಮ್ಮ ಮೇಲೆ ವಿಶ್ವಾಸ ಹಾಗೂ ನಂಬಿಕೆ ಇಟ್ಟು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದು. ಸರ್ವ ಸದಸ್ಯರ ನಂಬಿಕೆ ಕಾಪಾಡುವಲ್ಲಿ ಹಾಗೂ ಹಾಲು ಉತ್ಪಾದಕರ ಉನ್ನತಿಗಾಗಿ ಶ್ರಮಿಸಲಾಗುವುದು ಎಂದು ತಿಳಿಸಿದರು.
ಸ್ಥಳೀಯ ಮುಖಂಡರಾದ ರಾಜಘಟ್ಟ ಹರೀಶ್ ಮಾತನಾಡಿ ಚುನಾವಣೆಯಲ್ಲಿ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಅವಿರೋಧವಾಗಿ ಸುರೇಶ್ ಮತ್ತು ರತ್ನಮ್ಮ ಆಯ್ಕೆಯಾಗಿದ್ದಾರೆ. ಸಂಘದ ಚಟುವಟಿಕೆಗಳು ಮತ್ತಷ್ಟು ಚುರುಕಾಗುವುದರ ಜೊತೆ ಜೊತೆಗೆ ರೈತರಿಗೆ ಅನುಕೂಲಗಳು ಹೆಚ್ಚಲಿ. ಹಾಲು ಉತ್ಪಾದಕರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುವಲ್ಲಿ ಸಂಘದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶ್ರಮಿಸಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜಘಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರವೀಶ್ ಮಾತನಾಡಿ 12 ಸದಸ್ಯರು ಈ ಹಿಂದೆ ಸಂಘದ ಸದಸ್ಯರಾಗಿ ಆಯ್ಕೆಯಾಗಿದ್ದು ಇಂದು ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನೆಡೆದಿದೆ. ಸರ್ವ ಸದಸ್ಯರು ಅವಿರೋಧವಾಗಿ ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. ಸಂಘಕ್ಕೆ ಹೆಚ್ಚಿನ ಅನುದಾನ ತರುವ ಮೂಲಕ ಸಹಕಾರ ಸಂಘದ ಅಭಿವೃದ್ಧಿಗೆ ನೂತನ ಪದಾಧಿಕಾರಿಗಳು ಸಹಕರಿಸಲಿ ಎಂದು ಶುಭ ಹಾರೈಸಿದರು.
ಮುಖಂಡರಾದ ಶಿವಕುಮಾರ್ ಮಾತನಾಡಿ ಮಾಜಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡವನ್ನು ನಿರ್ಮಾಣ ಮಾಡುವಲ್ಲಿ ಶ್ರಮಿಸಿದ್ದು. ನೂತನ ಪದಾಧಿಕಾರಿಗಳು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮತ್ತಷ್ಟು ಅನುದಾನ ತರುವ ಮೂಲಕ ಹಾಗೂ ವಿನೂತನ ಯೋಜನೆ ರೂಪಿಸುವ ಮೂಲಕ ಸ್ಥಳೀಯ ರೈತರನ್ನು ಅಭಿವೃದ್ಧಿಪಡಿಸಲಿ ಎಂದು ಹಾರೈಸಿದರು. ತಾಲೂಕಿನಲ್ಲಿ ಈಗಾಗಲೇ ಪ್ರಥಮ ಸ್ಥಾನದಲ್ಲಿರುವ ರಾಜಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘವು ಪ್ರತಿದಿನ ಸರಿಸುಮಾರು 2500 ಲೀಟರ್ ಹಾಲನ್ನು ಉತ್ಪಾದಿಸುತ್ತಿದ್ದು. ಈ ಪ್ರಮಾಣವು ಮತ್ತಷ್ಟು ಹೆಚ್ಚ ಬೇಕಿದೆ ಈ ಸಂಬಂಧ ನೂತನ ಪದಾಧಿಕಾರಿಗಳು ವಿಶೇಷ ಯೋಜನೆಗಳ ರೂಪಿಸುವ ಮೂಲಕ ಹಾಲು ಉತ್ಪಾದಕರಿಗೆ ಉತ್ತೇಜನ ನೀಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆರ್ ಸಿ ಮುನಿರಾಜು,ಗ್ರಾಮದ ಹಿರಿಯ ಮುಖಂಡರಾದ ಕೋಡಿ ನರಸಿಂಹ ಮೂರ್ತಿ, ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕರಾದ ಹರೀಶ್,ಆರ್ ಎ ಆನಂದ್,ಎಂ ಪಿ ಸಿ ಎಸ್ ಮಾಜಿ ಅಧ್ಯಕ್ಷರಾದ ಟಿ. ಕೃಷ್ಣಪ್ಪ, ಆರ್ ಡಿ ಬೈರೇಗೌಡ, ಮಾಜಿ ಗ್ರಾಮಪಂಚಾಯಿತಿ ಸದಸ್ಯರಾದ ಬಿ ಎಸ್ ಹರೀಶ್, ಗ್ರಾಮಸದಸ್ಯರಾದ ಎ ಶಿವಕುಮಾರ್, ಗ್ರಾಮದ ಮುಖಂಡರಾದ ಆರ್ ಸಿ ಮಂಜುನಾಥ್,ಕೆಂಪೇಗೌಡ ಸೇರಿದಂತೆ ಹಲವು ಮುಖಂಡರು, ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.