
ದೊಡ್ಡಬಳ್ಳಾಪುರ ಮಾ.17(ವಿಜಯ ಮಿತ್ರ ): ಸರ್ಕಾರದ ಆದೇಶದಂತೆ ತಿಂಗಳ ಪ್ರತಿದಿನವೂ ನ್ಯಾಯಬೆಲೆ ಅಂಗಡಿಯನ್ನು ತೆಗೆಯುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಿರುವ ಪಡಿತರ ವಿತರಕರು ತಿಂಗಳಿನಲ್ಲಿ ಕೇವಲ ಎರಡು ಮೂರು ದಿನಗಳು ನ್ಯಾಯಬೆಲೆ ಅಂಗಡಿ ತೆರೆಯುವ ಮೂಲಕ ಸಾರ್ವಜನಿಕರನ್ನು ವಂಚಿಸುತ್ತಿದ್ದಾರೆ ಎಂದು ಯುವ ಸಂಚಲನ ಮುಖಂಡ ಚಿದಾನಂದ ತಿಳಿಸಿದರು
ಇಂದು ತಾಲೂಕಿನಲ್ಲಿ ಪಡಿತರ ವಿತರಣೆ ಮಾಡುತ್ತಿರುವ ನ್ಯಾಯಬೆಲೆ ಅಂಗಡಿಗಳ ಮುಂಭಾಗದಲ್ಲಿ ಸಾಲುಗಟ್ಟಿ ನಿಂತಿದ್ದ ಸಾರ್ವಜನಿಕರಲ್ಲಿ ಯುವ ಸಂಚಲನ ತಂಡ ಕರಪತ್ರ ವಿತರಿಸುವ ಮೂಲಕ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ ಪಡಿತರ ವಿಚಾರಣೆ ಕೇವಲ 2 ರಿಂದ 3 ದಿನಗಳ ಅವಧಿಯಲ್ಲಿ ವಿತರಿಸುತ್ತಿದ್ದು. ಹಲವಾರು ಸಾರ್ವಜನಿಕರು ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಯ ಮುಂಭಾಗ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಈ ಕುರಿತು ಸರ್ಕಾರದ ಆದೇಶ ಪರಿಶೀಲಿಸಿದಾಗ ನಮಗೆ ತಿಳಿದುಬಂದ ಸತ್ಯವೇನೆಂದರೆ ಕರ್ನಾಟಕ ಸರ್ಕಾರದ ಆದೇಶದಂತೆ ಪ್ರತಿ ತಿಂಗಳು 11ನೇ ತಾರೀಕಿನಿಂದ ತಿಂಗಳ ಕೊನೆಯವರೆಗೆ ಬೆಳಗ್ಗೆ 7ರಿಂದ 12ರವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 8 ರವರೆಗೆ (ಮಂಗಳವಾರ ಮತ್ತು ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ) ಎಲ್ಲಾ ನ್ಯಾಯಬೆಲೆ ಅಂಗಡಿಗಳು ಕಡ್ಡಾಯವಾಗಿ ತೆರೆಯಬೇಕಿದೆ. ಆದರೆ ನಮ್ಮ ದೊಡ್ಡಬಳ್ಳಾಪುರ ನಗರ ಭಾಗದಲ್ಲಿ ತಿಂಗಳಲ್ಲಿ ಕೇವಲ ಎರಡು ಮೂರು ದಿನಗಳಿಗೆ ಪಡಿತರ ವಿತರಣೆ ಸೀಮಿತವಾಗಿದೆ. ಹಾಗಾಗಿ ಈ ಕುರಿತು ನಾವು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ತಿಳಿಸಿದರು
ಯುವ ಸಂಚಲನ ಮುಖಂಡ ಗಿರೀಶ್ ಮಾತನಾಡಿ ಸರ್ಕಾರದ ಆದೇಶ 2018 ರ ಪ್ರಕಾರ ನ್ಯಾಯಬೆಲೆ ಅಂಗಡಿಗಳು ತಿಂಗಳು ಪೂರ್ತಿ ಪಡಿತರೆ ವಿತರಣೆ ಮಾಡಬೇಕಿದೆ.(ಮಂಗಳವಾರ ಮತ್ತು ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ)ಆದರೆ ನಮ್ಮ ದೊಡ್ಡಬಳ್ಳಾಪುರ ವ್ಯಾಪ್ತಿಯ 85 ನ್ಯಾಯಬೆಲೆ ಅಂಗಡಿಗಳಲ್ಲಿ ಈ ಆದೇಶದ ಉಲ್ಲಂಘನೆ ಆಗುತ್ತಿದ್ದು ಈ ಕುರಿತು ನಾವು ಸ್ಥಳೀಯ ಶಿರಸ್ತಿದ್ದಾರ್ ಸೇರಿದಂತೆ ಆರೋಗ್ಯ ಸಚಿವರಿಗೂ ದೂರು ಸಲ್ಲಿಸಿದ್ದು ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಒಂದು ವರ್ಷದಿಂದ ಸತತವಾಗಿ ಪ್ರಯತ್ನಿಸಿದ್ದು ಈವರೆಗೂ ಸರ್ಕಾರಿ ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗಳ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂಬುದೇ ವಿಪರ್ಯಾಸ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಯುವ ಸಂಚಲನ ತಂಡದ ಎಲ್ಲ ಯುವಕರು ಉಪಸಿತರಿದ್ದರು