
ದೊಡ್ಡಬಳ್ಳಾಪುರ ಆಗಸ್ಟ್ 07 ( ವಿಜಯ ಮಿತ್ರ ) : ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಂಡಿದೆ. “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ರಾಜ್ಯದ ಎಲ್ಲೆಡೆ ಕರ್ನಾಟಕ ಸುವರ್ಣ ಸಂಭ್ರಮದ ಆಚರಣೆ ನಡೆಯುತ್ತಿದೆ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು ತಿಳಿಸಿದರು.
ಅವರು ದೊಡ್ಡಬಳ್ಳಾಪುರ ತಾಲ್ಲೂಕಿಗೆ ಆಗಮಿಸಿದ ಕರ್ನಾಟಕ ಸಂಭ್ರಮ 50 ರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಕನ್ನಡ ಜ್ಯೋತಿ ರಥದ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ನಡ ಭಾಷೆಯನ್ನಾಡುವ ಪ್ರದೇಶಗಳನ್ನು ಮೈಸೂರು ರಾಜ್ಯ ಎಂದು 1956 ನವೆಂಬರ್ 1 ರಂದು ಹೆಸರಿಡಲಾಯಿತು. ಕನ್ನಡಿಗರ ರಾಜ್ಯಕ್ಕೆ “ಕರ್ನಾಟಕ’ ಎಂದು 1973ರ ನವೆಂಬರ್ 1ರಂದು ಪುನರ್‌ನಾಮಕರಣ ಮಾಡಲಾಯಿತು. ಕನ್ನಡ ಸಾಹಿತಿಗಳು, ಕನ್ನಡಪರ ಹೋರಾಟಗಾರರು, ಕನ್ನಡ ಅಭಿಮಾನಿಗಳ ನಿರಂತರ ಹೋರಾಟದಿಂದ ಕರ್ನಾಟಕ ಏಕೀಕರಣವಾಯಿತು. ಕರ್ನಾಟಕ ಏಕೀಕರಣ ಹೋರಾಟದ ಸಂದರ್ಭದಲ್ಲಿ ಹುತಾತ್ಮನಾದ ಬಳ್ಳಾರಿ ರಂಜಾನಸಾಬ್ ಅವರನ್ನು ನಾವು ಸ್ಮರಿಸಬೇಕಾಗಿದೆ ಎಂದರು.
ದೊಡ್ಡಬಳ್ಳಾಪುರ ಕನ್ನಡಪರ ಸಂಘಟನೆಗಳ ಮುಖಂಡರಾದ ಕನ್ನಡ ಪಕ್ಷದ ರಾಜ್ಯಾಧ್ಯಕ್ಷ ಸಂಜೀವನಾಯಕ್, ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ, ಕಸಾಪ ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾಮಹಾದೇವ್ ಮುಂತಾದವರು ಮಾತನಾಡಿ, ದೊಡ್ಡಬಳ್ಳಾಪುರ ತಾಲ್ಲೂಕಿನ ಕನ್ನಡಪರ ಸಂಘಟನೆಗಳು ಕರ್ನಾಟಕದ ನಾಡು,ನುಡಿ ವಿಚಾರಗಳ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿರುವುದು ಶ್ಲಾಘನೀಯ ವಿಚಾರವಾಗಿದೆ. ಕನ್ನಡ ನಾಡು ನುಡಿ ಅಭಿಮಾನ ನಿರಂತರವಾಗಿಬೇಕು. ಕನ್ನಡ ಭಾಷೆಯನ್ನು ಬಳಸುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಾಗಿದೆ. ಕನ್ನಡ ವಿರೋಧಿ ವಿಚಾರಗಳನ್ನು ಕನ್ನಡಿಗರು ಒಗ್ಗಟ್ಟಿನಿಂದ ಎದುರಿಸಬೇಕಾಗಿದೆ. ಕರ್ನಾಟಕ ಏಕೀಕರಣ ಚಳುವಳಿ, ಗೋಕಾಕ್ ಚಳುವಳಿ ಇವು ಎಂದಿಗೂ ಕನ್ನಡಿಗರಿಗೆ ಸ್ಫೂರ್ತಿಯಾಗಿವೆ. ಕನ್ನಡದ ಇತಿಹಾಸ ಮಹತ್ವ ಹೋರಾಟಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ಎಂದಿಗೂ ಸ್ಮರಿಸಬೇಕಾಗಿದೆ. ಕರ್ನಾಟಕ ಕಲೆ, ಸಾಹಿತ್ಯ, ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರು ಮಾಡಬೇಕಾಗಿದೆ ಎಂದರು.
ಮೊಕದ್ದಮೆ ವಾಪಸ್ಸಿಗೆ ಒತ್ತಾಯ :- ಕರ್ನಾಟಕ ಏಕೀಕರಣ, ಗೋಕಾಕ್ ಚಳುವಳಿ ಸೇರಿದಂತೆ ಹಲವಾರು ಮಹತ್ವದ ಕನ್ನಡಪರ ಹೋರಾಟಗಳಲ್ಲಿ ಕನ್ನಡಪರ ಹೋರಾಟಗಾರರ ಪಾತ್ರ ಮಹತ್ವದಾಗಿದೆ. ಕನ್ನಡ ನಾಡು, ನುಡಿ, ಪರಂಪರೆಗಳ ವಿಚಾರಗಳಲ್ಲಿ ಸಮಸ್ಯೆಗಳು ಎದುರಾದಾಗ ಕನ್ನಡಪರ ಹೋರಾಟಗಾರರು ತಕ್ಷಣವೇ ಸ್ಪಂದಿಸಿ ಹೋರಾಟಗಳನ್ನು ಮಾಡುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಕನ್ನಡಪರ ಹೋರಾಟಗಾರ ವಿರುದ್ದ ದಾಖಲಾಗಿರುವ ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ವಾಪಸ್ಸು ಪಡೆಯಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಒತ್ತಾಯಿಸಿದರು.
ಕನ್ನಡ ರಥ ಜ್ಯೋತಿ ಸ್ವಾಗತ :– ದೇವನಹಳ್ಳಿ ತಾಲ್ಲೂಕಿನಿಂದ ಆಗಮಿಸುವ ಕನ್ನಡ ಜ್ಯೋತಿ ರಥವನ್ನು ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ದೇವನಹಳ್ಳಿ ತಾಲ್ಲೂಕಿನ ಗಡಿಭಾಗದಲ್ಲಿ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಾಶ್ರೀ, ದೊಡ್ಡಬಳ್ಳಾಪುರ ತಾಲ್ಲೂಕು ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎನ್.ಮುನಿರಾಜು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ರವಿಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಸ್ವಾಗತಿಸಿದರು.
ಆದ್ದೂರಿ ಮೆರವಣಿಗೆ:– ದೊಡ್ಡಬಳ್ಳಾಪುರ ತಾಲ್ಲೂಕಿಗೆ ಆಗಮಿಸಿ ಕನ್ನಡ ಜ್ಯೋತಿ ರಥಕ್ಕೆ ನಾಗದೇನಹಳ್ಳಿ, ಮೋಪರಹಳ್ಳಿ, ರಘುನಾಥಪುರ ಸರ್ಕಾರಿ ಶಾಲೆ ವಿದ್ಯಾರ್ಥಿಗಳು, ಜವಾಹರ ನವೋವಿದ್ಯಾಲಯದ ವಿದ್ಯಾರ್ಥಿಗಳು ಪುಪ್ಪಾರ್ಚನೆ ಮಾಡಿದರು. ಬಾಶೆಟ್ಟಿಹಳ್ಳಿಯಲ್ಲಿ ನಡೆದ ಆದ್ದೂರಿ ಮೆರವಣಿಗೆಯಲ್ಲಿ ಮಹಿಳೆಯರಿಂದ ಪೂರ್ಣ ಕುಂಭ ಸ್ವಾಗತ ಮತ್ತು ಕಲಾ ತಂಡಗಳೊಂದಿಗೆ ಗ್ರಾಮದ ಮುಖಂಡರು ಮತ್ತು ಶಾಲಾ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ದೊಡ್ಡಬಳ್ಳಾಪುರ ನಗರಸಭೆಯ ಸದಸ್ಯರುಗಳು ಮತ್ತು ಪೌರಾಯುಕ್ತ ಕಾರ್ತಿಕ್ ಈಶ್ವರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್ ಡಿ ಕ್ರಾಸ್ ಬಳಿ ಕನ್ನಡ ಜ್ಯೋತಿ ರಥವನ್ಬು ಸ್ವಾಗತಿಸಿದರು. ನಂತರ ಆಸ್ಪತ್ರೆ ವೃತ್ತ, ರಂಗಪ್ಪ ಸರ್ಕಲ್, ಅರಳುಮಲ್ಲಿಗೆ ಬಾಗಿಲು, ಕೆ.ಸಿ.ಪಿ ವೃತ್ತ, ಕೊಂಗಾಡಿಯಪ್ಪ ಪ್ರೌಢಶಾಲೆ, ಇಸ್ಲಾಂಪುರ , ತಾಲ್ಲೂಕು ಕಛೇರಿ ವೃತ್ತದ ತನಕ ನಡೆದ ಆದ್ದೂರಿ ಮೆರವಣಿಗೆಯಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮತ್ತು ಕನ್ನಡಪರ ಸಂಘಟನೆಗಳು ಕನ್ನಡ ಭಾವುಟ ಹಿಡಿದು ಸ್ವಾಗತಿ, ಪುಷ್ಪ ನಮನ ಸಲ್ಲಿದರು.
ಜಿಲ್ಲಾಧಿಕಾರಿ ಮಾಲಾರ್ಪಣೆ :- ದೊಡ್ಡಬಳ್ಳಾಪುರ ನಗರದ ನಡೆದ ಕನ್ನಡ ಜ್ಯೋತಿ ರಥದ ಮೆರವಣಿಗೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್, ಜಿಲ್ಲಾಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ಅನುರಾಧ ಭಾಗವಹಿಸಿ ರಥಕ್ಕೆ ಮಾಲಾರ್ಪಣೆ ಮಾಡಿದರು.
ಕನ್ನಡ ಜ್ಯೋತಿ ರಥದ ಮೆರವಣಿಗೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರುಗಳಾದ. ತ.ನ.ಪ್ರಭುದೇವ್, ಸಂಜೀವನಾಯಕ್, ನಗರಸಭಾ ಸದಸ್ಯ ಮಲ್ಲೇಶ್, ಸು.ನರಸಿಂಹಮೂರ್ತಿ, ಬಿ.ಎಸ್.ಚಂದ್ರಶೇಖರ್, ರಾಜಘಟ್ಟರವಿ, ಮುರುಳಾರಾಧ್ಯ, ಡಿ.ಪಿ.ಆಂಜನೇಯ, ನಂಜಪ್ಪ, ಲೋಕೇಶ್, ನಾಗರಾಜು, ಡಿ.ವೆಂಕಟೇಶ್, ನಂಜಪ್ಪ, ತೂಬಗೆರೆ ಷರೀಫ್, ಪ್ರಮೀಳಾ ಮಹಾದೇವ್, ಮುನಿಪಾಪಣ್ಣ, ಪರಮೇಶ್, ನಾಗರತ್ನಮ್ಮ , ಕಮಲನಾಥ್, ದಾದಾಪೀರ್ ಮುಂತಾದವರು ಮತ್ತು ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.