ದೊಡ್ಡಬಳ್ಳಾಪುರ ಸೆ 20 ( ವಿಜಯಮಿತ್ರ ) : ಪೋಷಣ್ ಅಭಿಯಾನದ ಅಡಿಯಲ್ಲಿ ಪೋಷಣ್ ಮಾಸಚಾರಣೆ ಮಾಡುವ ಮೂಲಕ ಪೌಷ್ಟಿಕ ಆಹಾರದ ಮಹತ್ವವನ್ನು ತಿಳಿಸಲಾಗುತ್ತದೆ,ತಾವು ಸೇವಿಸುವ ಆಹಾರದಲ್ಲಿ ಕಾರ್ಬೋಹೈಡ್ರೇಟ್ಸ್, ವಿಟಮಿನ್ಸ್,ಪ್ರೋಟೀನ್ಸ್ ಖನಿಜಾಂಶ, ಲವಣಾಂಶ,ನೀರು ಒಳಗೊಂಡಂತ ಸಮತೋಲನ ಆಹಾರವನ್ನು ಸೇವಿಸುವ ಕುರಿತು ಮಾಹಿತಿ ನೀಡುವ ವಿಶೇಷ ಕಾರ್ಯಕ್ರಮ ಇದಾಗಿದ್ದು. ಈ ಸಾರ್ವಜನಿಕರು ಪೌಷ್ಟಿಕ ಆಹಾರದ ಉಪಯೋಗವನ್ನು ಅರಿಯುವ ಮೂಲಕ ಉತ್ತಮ ಪೋಷಕಾಂಶವುಳ್ಳ ಆಹಾರ ಸೇವಿಸುವಂಥಾಗಲಿ ಎಂಬುದೇ ನಮ್ಮ ಉದ್ದೇಶ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರವಿಕುಮಾರ್ ತಿಳಿಸಿದರು.

ನಗರದ ರೋಜಿಪುರ ವಾರ್ಡ್ ನ ಅಂಗನವಾಡಿ ಕೇಂದ್ರದಲ್ಲಿ ಯೋಜನೆ ಮಾಡಲಾಗಿದ್ದ ಪೋಷಣ್ ಮಾಸಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಈ ಕಾರ್ಯಕ್ರಮವು ವೃತ್ತ ಮಟ್ಟದಲ್ಲಿ ಆಯೋಜನೆ ಮಾಡಲಾಗಿದ್ದು. ಈ ಕಾರ್ಯಕ್ರಮವು ಅಪೌಷ್ಟಿಕತೆಯನ್ನು ಹೋಗಲಾಡಿಸಿ ಸದೃಢ ಸಮಾಜವನ್ನು ನಿರ್ಮಿಸುವ ಮಹತ್ವಕಾಂಕ್ಷೆಯನ್ನು ಹೊಂದಿದೆ. ವಾರ್ಷಿಕವಾಗಿ ಎರಡರಷ್ಟು ಅಪೌಷ್ಟಿಕತೆಯನ್ನು ಹೋಗಲಾಡಿಸುವ ಸಲುವಾಗಿ ಹಾಗೂ ರಕ್ತಹೀನತೆ ಸಮಸ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಪುರಸ್ಕೃತ ಯೋಜನೆ ಜಾರಿಗೆ ತಂದಿದ್ದು ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರತಿ ಫಲಾನುಭವಿಗಳಿಗೆ ಈ ಯೋಜನೆಯ ಕುರಿತು ಮಾಹಿತಿ ನೀಡುವ ಸಲುವಾಗಿ ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಈ ಪೋಷಣ್ ಅಭಿಯಾನದ ಅಡಿಯಲ್ಲಿ ಇಸಿಸಿ ಡೇ, ಆರೋಗ್ಯ ತಪಾಸಣಾ ಶಿಬಿರಗಳು ಸ್ರೀಮಂತ ಕಾರ್ಯಕ್ರಮ ಸೇರಿದಂತೆ ಹಲವು ಬಗೆಯ ಸಮುದಾಯ ಆಧಾರಿತ ಚಟುವಟಿಕೆಗಳನ್ನು ಸಹ ಕೈಗೊಳ್ಳಲಾಗುತ್ತಿದೆ ಎಂದರು.

ಸ್ಥಳೀಯ ನಗರಸಭಾ ಸದಸ್ಯರಾದ ರಜನಿಸುಬ್ರಮಣ್ಯ ಮಾತನಾಡಿ ಅಪೌಷ್ಟಿಕತೆಯಿಂದ ಪೌಷ್ಟಿಕತೆಯ ಕಡೆಗೆ ಸಮಾಜವನ್ನು ಕೊಂಡೊಯ್ಯುವ ಉತ್ತಮ ಕಾರ್ಯಕ್ರಮವಾಗಿದೆ. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಗತ್ಯವಾದ , ಆಹಾರಕ್ಕೆ ಕುರಿತ ವಿವಿಧ ರೀತಿಯ ಮಾಹಿತಿಗಳನ್ನು ನೀಡಲಾಗುತ್ತಿದೆ. ಉತ್ತಮ ಆಹಾರ ಉತ್ತಮ ಆರೋಗ್ಯಕ್ಕೆ ಸಹಕಾರಿ ಎಂಬುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ, ಪೌಷ್ಟಿಕ ಆಹಾರ ಸೇವನೆಯಿಂದ ಸದೃಢ ಸಮಾಜದ ನಿರ್ಮಾಣ ಸಾಧ್ಯ ಎಂದರು.

ಕಾರ್ಯಕ್ರಮದ ಆಯೋಜಕರಾದ ಶೈಲಜಾ ಮಾತನಾಡಿ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಪೋಷಣ್ ಮಾಸಚಾರಣೆ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಮಕ್ಕಳಿಗೆ ಹಾಗೂ ಪಲಾನುಭವಿಗಳಿಗೆ ಪೌಷ್ಟಿಕ ಆಹಾರ ಕುರಿತಂತೆ ಅಗತ್ಯ ಮಾಹಿತಿ ನೀಡಲಾಗುತ್ತಿದೆ. ಇಂದಿನ ಕಾರ್ಯಕ್ರಮವು ವೃತ್ತ ಮಟ್ಟದಲ್ಲಿ ಆಯೋಜನೆ ಮಾಡಲಾಗಿದ್ದು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡು ಅಗತ್ಯ ಮಾಹಿತಿ ನೀಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವೀಗೊಳಿಸಿದ್ದಾರೆ. ಸ್ಥಳೀಯವಾಗಿ ಲಭ್ಯವಿರುವ ನುಗ್ಗೆ ಸೊಪ್ಪು,ಕರಿಬೇವು, ಮೊಳಕೆ ಕಟ್ಟಿದ ಕಾಳುಗಳು ಇತ್ಯಾದಿ ಸೇವಿಸುವ ಮೂಲಕ ಅಪೌಷ್ಟಿಕತೆಯನ್ನು ನಿವಾರಿಸಬಹುದಾಗಿದೆ. ಇಂತಹ ಅಗತ್ಯ ವಿಶೇಷ ಮಾಹಿತಿಗಳನ್ನು ಈ ಕಾರ್ಯಕ್ರಮದ ಮೂಲಕ ಸಮಾಜಕ್ಕೆ ರವಾನಿಸಲಾಗುತ್ತಿದೆ. ಮಕ್ಕಳಲ್ಲಿ ಕಾಣುವ ಅನಿಮಿಯಾ ಸಮಸ್ಯೆ ಹಾಗೂ ಕಿಶೋರಿಯರಿಗೆ ಆಹಾರ ಸೇವನೆ, ಸ್ವಚ್ಛತೆ ಕುರಿತಂತೆ ಪ್ರತಿ ತಿಂಗಳು ಸಭೆ ಮಡುವ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಅನಿತಾ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರ್, ಮೇಲ್ವಿಚಾರಕರಾದ ಪದ್ಮ, ಸ್ಥಳೀಯ ಮುಖಂಡರು ಹಾಗೂ ವಕೀಲರಾದ ಆರ್ ವಿ ಮಹೇಶ್, ಶಾಲಾ ಶಿಕ್ಷಕಿ ನಾಗರತ್ನಮ್ಮ, ಹರಗೆ ಇಲಾಖೆಯ ಹಿರಿಯ ಮೇಲ್ವಿಚಾರಕರಾದ ವೀಣಾ, ಕಿರಿಯ ಸಹಾಯಕರು ಹಾಗೂ ಅಂಗನವಾಡಿ ಶಿಕ್ಷಕಿಯರು ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.
