
ದೊಡ್ಡಬಳ್ಳಾಪುರ : ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಮಹಿಳೆಯರು, ಪರಿಶಿಷ್ಟ ಜಾತಿ, ಪಂಗಡಗಳು, ಒಬಿಸಿ ಇತರೆ ಹಿಂದುಳಿದ ವರ್ಗಗಳಿಗೆ ಘಾಸಿ ಉಂಟುಮಾಡಿದೆ. ಹಾಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಈ ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಹೋರಾಟಗಾರ ಸಂಜೀವ್ ನಾಯಕ್ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ನಗರದ ತಾಲ್ಲೂಕು ಕಚೇರಿ ವೃತ್ತದಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಅಂಬೇಡ್ಕರ್ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಖಂಡಿಸಿ ಪ್ರತಿಭಟನೆ ನೆಡೆಸಲಾಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಭಾರತದ ಚರಿತ್ರೆಯಲ್ಲಿ ಜಾತಿ ವ್ಯವಸ್ಥೆಯಿಂದ ತುಳಿತಕ್ಕೆ ಒಳಗಾದವರ, ನೊಂದವರ ಹಾಗೂ ಶೋಷಿತರ ಧ್ವನಿಯಾಗಿ ಸರ್ವರು ಸಮಾನರು ಎಂದು ಪ್ರತಿಪಾದಿಸಿದ ಭಾರತ ರತ್ನ ಡಾ.ಬಿ ಆರ್ ಅಂಬೇಡ್ಕರ್ ಅವರು ಇಡೀ ಪ್ರಪಂಚವೇ ಮೆಚ್ಚುವ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು, ಬಹುಜನ ಹಿತಾಯ ಬಹುಜನ ಸುಖಾಯ ಎಂಬ ಆಶಯದ ಸಂವಿಧಾನವನ್ನು ರಚಿಸಿ ಕೊಟ್ಟವರು. ಬಾಬಾ ಸಾಹೇಬರು ಬರೆದ ಸಂವಿಧಾನದಿಂದ ಈ ದೇಶದ ಮಹಿಳೆಯರು ಹಾಗೂ ಶೋಷಿತ ಸಮುದಾಯಗಳಿಗೆ ಅಕ್ಷರ, ಅಧಿಕಾರ ದೊರೆತು, ಸಮಾಜದಲ್ಲಿ ತಲೆ ಎತ್ತಿ ನಿಲ್ಲವಂತಾಯಿತು. ಆದರೆ, ಈ ಸಂವಿಧಾನವನ್ನು ಹಾಗೂ ಅಂಬೇಡ್ಕರ್ ಅವರನ್ನು ಆರಂಭದಿಂದಲೂ ವಿರೋಧಿಸುತ್ತಾ ಬಂದ ಸಂಘಪರಿವಾರ ಮತ್ತು ಬಿಜೆಪಿ ಪರಿಷ್ಕರಣೆ ಎಂಬ ಹೆಸರಿನಲ್ಲಿ ಸಂವಿಧಾನ ಬದಲಾವಣೆಯ ಮಾತುಗಳನ್ನೂ ಅಡಿತ್ತು ಎಂಬುದನ್ನು ಗಮನಿಸಬೇಕಾದ ವಿಚಾರವಾಗಿದೆ ಎಂದರು.
ಪ್ರತಿಭಟನಾಕಾರರು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಮುಖಂಡರಾದ ರಾಮಮೂರ್ತಿ (ರಾಮು ) ನೇರಳೆಘಟ್ಟ ಮಾತನಾಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸದನದಲ್ಲಿ ಮಾತನಾಡುತ್ತಾ ಅಂಬೇಡ್ಕರ್ ಎಂದು ಹೇಳುವುದು ಇಂದು ಫ್ಯಾಷನ್ ಆಗಿದೆ. “ಅಂಬೇಡ್ಕರ್ ಹೆಸರು ಹೇಳುವ ಬದಲು ದೇವರ ಹೆಸರು ಹೇಳಿದ್ದರೆ ಏಳೇಳೂ ಜನ್ಮಕ್ಕೂ ಸ್ವರ್ಗಕ್ಕೆ ಹೋಗುತ್ತಿದ್ದೀರಿ” ಎಂದು ಹೇಳಿಕೆ ನೀಡುವ ಮೂಲಕ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿದ್ದಾರೆ.ಹಾಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಈ ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಿ ಅವರ ವಿರುದ್ಧ ಸೂಕ್ತ ಕಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಶಿವಶಂಕರ್, ಪತ್ರಕರ್ತ ಹಾಗೂ ಹೋರಾಟಗಾರ ರಾಜು ಸಣ್ಣಕ್ಕಿ, ಗುಳ್ಯ ಹನುಮಣ್ಣ, ಮೈಲಾರಪ್ಪ, ಸತೀಶ್, ರತ್ನಮ್ಮ, ನಾಗರತ್ನಮ್ಮ, ರುದ್ರರಾಧ್ಯ, ನಟರಾಜು,ತಳಗವಾರ ಮುನಿಯಪ್ಪ, ಪುನೀತ್, ಅಶೋಕ, ರಾಜಶೇಖರ್, ವಿ.ವೆಂಕಟೇಶ್, ನಾಗಮ್ಮಜ್ಜಿ, ಮಾರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.